ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದುಃಸ್ಥಿತಿ; 13 ತಿಂಗಳಲ್ಲಿ 6 ಕಾರ್ಯದರ್ಶಿಗಳು!

Last Updated 19 ಜುಲೈ 2019, 20:18 IST
ಅಕ್ಷರ ಗಾತ್ರ

ಬೆಂಗಳೂರು: ಮೈತ್ರಿ ಸರ್ಕಾರದ 13 ತಿಂಗಳ ಅವಧಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಆರು ಕಾರ್ಯದರ್ಶಿಗಳು ಹಾಗೂ ಮೂವರು ನಿರ್ದೇಶಕರನ್ನು ಕಂಡಿದೆ. ಇದರಿಂದಾಗಿ ಇಲಾಖೆಯ ವಾರ್ಷಿಕ ಕಾರ್ಯಚಟುವಟಿಕೆ ಕುಂಟುತ್ತಾ ಸಾಗಿದೆ ಎಂಬ ಟೀಕೆ ವ್ಯಕ್ತವಾಗಿದೆ.

ಇ–ಆಡಳಿತ ಜಾರಿಗೆ ತಂದ ಪ್ರಥಮ ಇಲಾಖೆ ಎಂಬ ಹಿರಿಮೆಗೆ ಭಾಜನ ವಾಗಿದ್ದ ಇಲಾಖೆ ಇದೀಗ ಜಯಂತಿಗಳಿಗೆ ಸೀಮಿತವಾಗುತ್ತಿದೆ ಎಂಬ ಆರೋಪ ಸಾಂಸ್ಕೃತಿಕ ವಲಯದಲ್ಲಿದೆ.

ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಾಗ ಚಕ್ರವರ್ತಿ ಮೋಹನ್ ಅವರು ಇಲಾಖೆಯ ಕಾರ್ಯದರ್ಶಿಯಾಗಿದ್ದರು. ಆ ನಂತರ ಬಸವರಾಜ್, ಡಾ.ಜೆ. ರವಿಶಂಕರ್, ಬಿ.ಎಚ್‌. ಅನಿಲ್ ಕುಮಾರ್,ಡಾ.ಜೆ. ರವಿಶಂಕರ್ ಅವರು ಹೆಚ್ಚುವರಿ ಕಾರ್ಯದರ್ಶಿ ಗಳಾಗಿ ಸೇವೆ ಸಲ್ಲಿಸಿದ್ದಾರೆ. ಎರಡು ದಿನಗಳ ಹಿಂದಷ್ಟೇ ಆರ್‌.ಆರ್. ಜನ್ನು ಅವರನ್ನು ಕಾರ್ಯದರ್ಶಿಗಳನ್ನಾಗಿ ನೇಮಿಸಲಾಗಿದೆ.

‘ಇಲಾಖೆಯ ಕಾರ್ಯದರ್ಶಿಯನ್ನು ಎರಡೆರಡು ತಿಂಗಳಿಗೊಮ್ಮೆ ಬದಲಾಯಿಸಲಾಗುತ್ತಿದೆ. ಯಾವುದೇ ಒಂದು ಇಲಾಖೆ ಬಗ್ಗೆ ತಿಳಿದುಕೊಳ್ಳಲು ಕನಿಷ್ಠ ಎರಡು ತಿಂಗಳು ಬೇಕಾಗುತ್ತದೆ. ಆದರೆ, ಕಾರ್ಯದರ್ಶಿಗಳು ಹಾಗೂ ನಿರ್ದೇಶಕರ ಬದಲಾವಣೆಯಿಂದ ಕಳೆದ ವರ್ಷ ಇಲಾಖೆಯ ಕಾರ್ಯಚಟುವಟಿಕೆಯಲ್ಲಿ ಏರುಪೇರಾಯಿತು.ಪ್ರಸಕ್ತ ಸಾಲಿನಲ್ಲಿ ಈವರೆಗೂಕ್ರಿಯಾಯೋಜನೆ ರೂಪಿಸಿಲ್ಲ. ಇದರಿಂದಈ ವರ್ಷ ಕೂಡ ಧನ ಸಹಾಯ ಸೇರಿದಂತೆ ವಿವಿಧವಾರ್ಷಿಕ ಕಾರ್ಯ ಚಟುವಟಿಕೆಗೆ ಹಿನ್ನಡೆಯಾಗುವ ಸಾಧ್ಯತೆ ಯಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ಹಂಚಿಕೆಯಾಗದ ಅನುದಾನ: ಕಳೆದ ಆರ್ಥಿಕ ವರ್ಷದಲ್ಲಿ ಇಲಾಖೆ ಮೂವರು ನಿರ್ದೇಶಕರನ್ನು ಕಂಡಿದೆ. ಎನ್‌.ಆರ್. ವಿಶುಕುಮಾರ್ ಅವರು ನಿವೃತ್ತಿಯಾದ ಬಳಿಕ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ ಅವರನ್ನು ಪ್ರಭಾರ ನಿರ್ದೇಶಕರನ್ನಾಗಿ ನೇಮಿಸಲಾಯಿತು. ಬಳಿಕ ಕೆ.ಎಂ. ಜಾನಕಿ ಅವರನ್ನು ನಿರ್ದೇಶಕರನ್ನಾಗಿ ಮಾಡಲಾಯಿತು. ಈವರೆಗೂ ಕಳೆದ ಸಾಲಿನ ಧನಸಹಾಯ ಯೋಜನೆಯಡಿ ಅನುದಾನ ಹಂಚಿಕೆಯಾಗಿಲ್ಲ.ಪ್ರಸಕ್ತ ಸಾಲಿನಲ್ಲಿ ಇಲಾಖೆ ಈವರೆಗೂ ಕ್ರಿಯಾ ಯೋಜನೆ ಸಿದ್ಧಗೊಳ್ಳದಿರುವುದು ವಿವಿಧ ಯೋಜನೆಗೆ ಹಿನ್ನಡೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಮೂಲ ಗಳು ತಿಳಿಸಿವೆ. ಇಲಾಖೆಯು ಅಕಾ ಡೆಮಿಗಳಿಗೆ ಅನುದಾನವನ್ನೂ ಹಂಚಿಕೆ ಮಾಡಿಲ್ಲ. ಇದರಿಂದ ಅಕಾಡೆಮಿಗಳು ಸ್ತಬ್ಧವಾಗಿದ್ದು, ಯಾವುದೇ ಯೋಜನೆ ಯನ್ನು ಹೊಸದಾಗಿ ರೂಪಿಸುವ ಗೋಜಿಗೆ ಹೋಗಿಲ್ಲ.

‘ದೀರ್ಘಾವಧಿ ಯೋಜನೆಯಿಲ್ಲ’

‘ಇಲಾಖೆಯ ಕ್ರಿಯಾಯೋಜನೆ ಅನುಮೋದನೆಗೊಳ್ಳದ ಹಿನ್ನೆಲೆಯಲ್ಲಿ ಅಕಾಡೆಮಿಗಳಿಗೆ ಅನುದಾನ ಬಿಡುಗಡೆಯಾಗಿಲ್ಲ. ಜಯಂತಿ, ನಾಡಹಬ್ಬಗಳನ್ನು ಮಾತ್ರ ಮಾಡಲಾಗುತ್ತಿದೆ. ಕಳೆದ ಸಾಲಿನ ಧನಸಹಾಯವನ್ನೂ ಈವರೆಗೂ ಬಿಡುಗಡೆ ಮಾಡಿಲ್ಲ. ಅಧಿಕಾರಿಗಳ ವರ್ಗಾವಣೆಯಿಂದ ಸಾಂಸ್ಕೃತಿಕ ಕಾರ್ಯಚಟುವಟಿಕೆ ಕುಂಟುತ್ತಾ ಸಾಗುತ್ತದೆ. ಇನ್ನಾದರೂ ಎಚ್ಚೆತ್ತುಕೊಂಡು ಕಲೆ ಹಾಗೂ ಕಲಾವಿದರಿಗೆ ಪೂರಕ ಯೋಜನೆಯನ್ನು ರೂಪಿಸಿ, ಅನುಷ್ಠಾನ ಮಾಡಬೇಕು. ಈ ವಿಚಾರವಾಗಿ ಇಲಾಖೆಯ ಕಾರ್ಯದರ್ಶಿಗಳಿಗೆ ಪತ್ರವನ್ನು ಬರೆದಿರುವೆ’ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಜೆ. ಲೋಕೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT