ಮಂಗಳವಾರ, ಫೆಬ್ರವರಿ 25, 2020
19 °C

ಕರ್ನಾಟಕ ಬಂದ್‌ ನೀರಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವಂತೆ ಶಿಫಾರಸು ಮಾಡಿರುವ ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಗುರುವಾರ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ರಾಜ್ಯದಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಜನಜೀವನದ ಮೇಲೆ ಬಂದ್‌ ಕಿಂಚಿತ್ತೂ ಪರಿಣಾಮ ಬೀರಲಿಲ್ಲ. ಬಂದ್‌ ಕುರಿತಂತೆ ಕನ್ನಡ‍ಪರ ಸಂಘಟನೆಗಳಲ್ಲೇ ಅಪಸ್ವರ ಕೇಳಿ ಬಂದಿದ್ದರಿಂದ ಅಗತ್ಯ ಸೇವೆಗಳೂ ಏರುಪೇರಾಗಲಿಲ್ಲ. ನಗರದ ಆನಂದರಾವ್‌ ವೃತ್ತದಲ್ಲಿ ಹೊಟೇಲ್‌ಗಳನ್ನು ಬಲವಂತವಾಗಿ ಮುಚ್ಚಿಸುವ ಪ್ರಯತ್ನ ಫಲ ನೀಡಲಿಲ್ಲ. ಮೈಸೂರು ರಸ್ತೆಯಲ್ಲಿ ಬಿಎಂಟಿಸಿ ಬಸ್‌ ಸಂಚಾರಕ್ಕೆ ಅಡ್ಡಿಪಡಿಸಲು ಪೊಲೀಸರು ಬಿಡಲಿಲ್ಲ.

ನಗರದಲ್ಲಿ ಮುಂಜಾಗ್ರತೆ ಕ್ರಮವಾಗಿ 180 ಜನರನ್ನು ವಶಕ್ಕೆ ಪಡೆದು, ಬಳಿಕ ಬಿಡುಗಡೆ ಮಾಡಲಾಯಿತು. ಕರ್ನಾಟಕ ರಕ್ಷಣಾ ವೇದಿಕೆ ಮುಖಂಡ ಪ್ರವೀಣ್‌ ಶೆಟ್ಟಿ ಅವರನ್ನು ಆರ್‌.ಟಿ. ನಗರದ ಅವರ ಮನೆಯಲ್ಲಿ ಪೊಲೀಸರು ಗೃಹಬಂಧನದಲ್ಲಿ ಇಟ್ಟಿದ್ದರು.

ಹೊರ ಊರು ಹಾಗೂ ದೇಶಗಳಿಗೆ ಹೋಗುವ ಪ್ರಯಾಣಿಕರು ಬಂದ್‌ಗೆ ಹೆದರಿ ಬೇಗ ಬೇಗನೆ ವಿಮಾನ ನಿಲ್ದಾಣಕ್ಕೆ ಧಾವಿಸಿ ಬಂದಿದ್ದರಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಟ್ಟಣೆ ಕಂಡುಬಂತು. ಭದ್ರತಾ ಸಿಬ್ಬಂದಿ ಟಿಕೆಟ್‌ ಹೊಂದಿದವರನ್ನು ಮಾತ್ರ ಒಳಗೆ ಬಿಟ್ಟರು.

ಹುಬ್ಬಳ್ಳಿಯಲ್ಲಿ ಪ್ರತಿಭಟನಕಾರರು ಮೆರವಣಿಗೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು. ಬೀದರ್‌ನಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಗದಗದಲ್ಲಿ ಪ್ರಥಮ ಪಿಯುಸಿ ಇಂಗ್ಲಿಷ್‌ ಪರೀಕ್ಷೆಗೆ ವಿದ್ಯಾರ್ಥಿಗಳು ಹಾಜರಾದರು. ಉಳಿದಂತೆ ಮೈಸೂರು, ತುಮಕೂರು, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಚಿಕ್ಕಬಳ್ಳಾಪುರ. ರಾಮನಗರ, ಕಲಬುರ್ಗಿ, ವಿಜಯಪುರ, ಬಾಗಲಕೋಟೆ, ಉಡುಪಿ, ರಾಯಚೂರು, ಕಾರವಾರ, ಹಾಸನದಲ್ಲಿ ಬಂದ್‌ ಕರೆಗೆ ಜನರು ಕಿವಿಗೊಡಲಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)