ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇ– ಪರ್ಮಿಟ್‌’ ವ್ಯವಸ್ಥೆ ಜಾರಿಗೆ ಮೀನಾಮೇಷ

ಆಧಾರ್ ಸಂಖ್ಯೆ ಜೋಡಣೆ ಸ್ಥಗಿತ * ಧೂಳು ತಿನ್ನುತ್ತಿವೆ 1.25 ಲಕ್ಷ ಸುರಕ್ಷತಾ ಪ್ರಮಾಣ ಪತ್ರಗಳು
Last Updated 12 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಆಟೊಗಳ ನಕಲಿ ಪರವಾನಗಿ ಹಾವಳಿ ತಡೆಗೆ ಈ ಹಿಂದಿನ ಸರ್ಕಾರ ರೂಪಿಸಿದ್ದ ‘ಇ–ಪರ್ಮಿಟ್‘ ವ್ಯವಸ್ಥೆಯನ್ನು ಜಾರಿಗೊಳಿಸಲು ಸಮ್ಮಿಶ್ರ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಜತೆಗೆ, ಪರವಾನಗಿಗೆ ಆಧಾರ್‌ ಸಂಖ್ಯೆ ಜೋಡಣೆ ಮಾಡುವ ಪ್ರಕ್ರಿಯೆಯನ್ನೂ ಸ್ಥಗಿತಗೊಳಿಸಲಾಗಿದೆ.

ಸಾರಿಗೆ ಇಲಾಖೆ ಮಾಹಿತಿ ಪ್ರಕಾರ, ನಗರದಲ್ಲಿ 1.25 ಲಕ್ಷ ನೋಂದಾಯಿತ ಆಟೊಗಳಿವೆ. ಅದಕ್ಕೂ ಹೆಚ್ಚಿನ ಆಟೊಗಳು ಅನಧಿಕೃತವಾಗಿ ಸಂಚರಿಸುತ್ತಿರುವುದನ್ನು ಸಾರಿಗೆ ಅಧಿಕಾರಿಗಳು 2017ರಲ್ಲಿ ಪತ್ತೆ ಹಚ್ಚಿದ್ದರು. ಅಂಥ ಆಟೊಗಳನ್ನು ಗುರುತಿಸಲು ‘ಇ–ಪರ್ಮಿಟ್’ ವ್ಯವಸ್ಥೆ ಜಾರಿಗೆ ತರುವಂತೆ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಪ್ರಸ್ತಾವವನ್ನೂ ಸಲ್ಲಿಸಿದ್ದರು.

ಅದಕ್ಕೆ ಒಪ್ಪಿಗೆ ನೀಡಿದ್ದ ಅಧಿಕಾರಿಗಳು ಹಾಗೂ ಅಂದಿನ ಸಚಿವರು, ವ್ಯವಸ್ಥೆ ಜಾರಿಗೊಳಿಸುವ ಪ್ರಕ್ರಿಯೆ ಆರಂಭಿಸುವಂತೆ ಹೇಳಿದ್ದರು. ನಂತರ, ಪರವಾನಗಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡುವುದನ್ನು ಕಡ್ಡಾಯ ಮಾಡಲಾಗಿತ್ತು. ಹಳೆಯ ಪರವಾನಗಿ ರದ್ದುಪಡಿಸಿ, ಹೊಸದಾಗಿ ಪರವಾನಗಿ ನೀಡಲೆಂದು ₹76 ಲಕ್ಷ ವೆಚ್ಚದಲ್ಲಿ 1.25 ಲಕ್ಷಸುರಕ್ಷತಾ ಪ್ರಮಾಣಪತ್ರಗಳನ್ನೂ ಖರೀದಿಸಲಾಗಿತ್ತು. ಈಗ ಆ ಪ್ರಮಾಣಪತ್ರಗಳೆಲ್ಲ ಇಲಾಖೆಯ ಶಾಂತಿನಗರದ ಮುಖ್ಯ ಕಚೇರಿಯಲ್ಲೇ ದೂಳು ತಿನ್ನುತ್ತಿವೆ.

‘ನಕಲಿ ಪರವಾನಗಿ ಪತ್ತೆ ಹಚ್ಚಲು ಇ–ಪರ್ಮಿಟ್ ವ್ಯವಸ್ಥೆ ಅಗತ್ಯವಾಗಿತ್ತು. ಅದರ ಜಾರಿಗೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ವಿಧಾನಸಭಾ ಚುನಾವಣೆಗಳು ಬಂದಿದ್ದರಿಂದಾಗಿ ಪ್ರಕ್ರಿಯೆಯು ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಹೊಸ ಸರ್ಕಾರ ರಚನೆಯಾಗಿ ಎರಡೂವರೆ ತಿಂಗಳಾದರೂ ವ್ಯವಸ್ಥೆ ಜಾರಿ ಬಗ್ಗೆ ಉನ್ನತ ಅಧಿಕಾರಿಗಳಾಗಲಿ ಅಥವಾ ಸಚಿವರಾಗಲಿ ಆಸಕ್ತಿ ತೋರುತ್ತಿಲ್ಲ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಾಂತಿನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಕಚೇರಿಯಲ್ಲಿ ಇ–ಪರ್ಮಿಟ್ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರುವಂತೆ ಅಂದಿನ ಸಚಿವ ಎಚ್‌.ಎಂ. ರೇವಣ್ಣ ಹೇಳಿದ್ದರು. ನ್ಯಾಷನಲ್ ಇನ್‌ಫಾರ್ಮೆಟಿಕ್ಸ್ ಸೆಂಟರ್ (ಎನ್ಐಸಿ) ಸಿಬ್ಬಂದಿ ಜೊತೆ ಚರ್ಚಿಸಿ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಸಿಬ್ಬಂದಿಗೂ ತರಬೇತಿ ನೀಡಲಾಗಿತ್ತು. ಆದರೆ, ಇದುವರೆಗೂ ಕೇಂದ್ರವು ಆರಂಭವಾಗಿಲ್ಲ. ‘ಸದ್ಯಕ್ಕೆ ಸುಮ್ಮನಿರಿ’ ಎಂದೇ ಉನ್ನತ ಅಧಿಕಾರಿಗಳು ಹೇಳುತ್ತಿದ್ದಾರೆ’ ಎಂದು ವಿವರಿಸಿದರು.

ಬೆಂಗಳೂರು ಆಟೊ ಚಾಲಕರ ಕೋ–ಆಪರೇಟಿವ್‌ ಸೊಸೈಟಿ ಅಧ್ಯಕ್ಷ ಸೋಮಶೇಖರ್, ‘ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಇ–ಪ‍ರ್ಮಿಟ್ ವ್ಯವಸ್ಥೆ ಜಾರಿಗೆ ಅವರೇ ಅಡ್ಡಗಾಲು ಹಾಕುತ್ತಿದ್ದಾರೆ.ಒಬ್ಬನ ಹೆಸರಿನಲ್ಲೇ ನಾಲ್ಕೈದು ಪರವಾನಗಿಗಳಿವೆ’ ಎಂದು ದೂರಿದರು.

‘ಹಲವರು ನಕಲಿ ಪರವಾನಗಿ ಮೂಲಕವೇ ಆಟೊ ಓಡಿಸುತ್ತಿದ್ದಾರೆ. ಕಾನೂನು ಪ್ರಕಾರ ಪರವಾನಗಿ ಪಡೆದಿರುವ ಚಾಲಕರು, ಪ್ರಯಾಣಿಕರು ಸಿಗದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ತ್ವರಿತವಾಗಿ ವ್ಯವಸ್ಥೆ ಜಾರಿಗೆ ತರಬೇಕು. ಇಲ್ಲದಿದ್ದರೆ, ನ್ಯಾಯಾಲಯದ ಮೊರೆ ಹೋಗಲಿದ್ದೇವೆ’ ಎಂದು ಅವರು ಎಚ್ಚರಿಸಿದರು.

ಸತ್ತವರ ಹೆಸರಿನಲ್ಲೂ ಪರವಾನಗಿ : ‘ಪರವಾನಗಿ ವರ್ಗಾವಣೆ ಮಾಡಲು ಕಠಿಣ ನಿಯಮಗಳಿವೆ. ಅಷ್ಟಾದರೂ ಹಲವರು ಅನಧಿಕೃತವಾಗಿ ಪರವಾನಗಿ ಬಳಸುತ್ತಿದ್ದಾರೆ. ಸತ್ತವರ ಹೆಸರಿನಲ್ಲೂ ಹಲವರು ಆಟೊ ಓಡಿಸುತ್ತಿದ್ದಾರೆ. ಈ ಸಂಗತಿ ತನಿಖೆಯಿಂದ ಗೊತ್ತಾಗಿತ್ತು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘1965ರಿಂದ ಪರವಾನಗಿ ನೀಡುವ ಪ್ರಕ್ರಿಯೆ ಆರಂಭವಾಗಿದೆ. 1974ರಲ್ಲಿ ಕಾಯ್ದೆಗೆ ತಿದ್ದುಪಡಿ ತರಲಾಯಿತು. ಅಂದಿನಿಂದ ಅಗತ್ಯಕ್ಕೆ ತಕ್ಕಂತೆ ಪರವಾನಗಿ ನೀಡಲಾಗಿದೆ. ಅಷ್ಟಾದರೂ ಹಲವರು ನಕಲಿ ಪರವಾನಗಿ ಸೃಷ್ಟಿಸಿಕೊಂಡಿದ್ದಾರೆ’ ಎಂದು ಹೇಳಿದರು.

‘ಸಹಾಯಧನ ಹೆಚ್ಚಳಕ್ಕೆ ತೀರ್ಮಾನ’: '2 ಸ್ಟ್ರೋಕ್‌ ಆಟೊಗಳನ್ನು ಬದಲಾಯಿಸಿ 4 ಸ್ಟ್ರೋಕ್ ಆಟೊ ಖರೀದಿಸುವ ಚಾಲಕರಿಗೆ ನೀಡಲಾಗುತ್ತಿರುವ ಸಹಾಯಧನವನ್ನು ₹30 ಸಾವಿರದಿಂದ ₹40 ಸಾವಿರಕ್ಕೆ ಹೆಚ್ಚಿಸಲು ತೀರ್ಮಾನಿಸಲಾಗಿದೆ’ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು.

‘ಹಳೇ ಆಟೊ ಬದಲು, ಹೊಸ ಆಟೊ ಖರೀದಿಗೆ ಸಬ್ಸಿಡಿ ನೀಡಲಾಗುತ್ತಿದೆ. ಅದರ ಬದಲು ಎಲೆಕ್ಟ್ರಿಕ್‌ ಬ್ಯಾಟರಿಯನ್ನಾದರೂ ಅಳವಡಿಸಿಕೊಳ್ಳಲು ಅವಕಾಶವಿದೆ. ಅರ್ಹರನ್ನು ಆಯ್ಕೆ ಮಾಡಿ ₹40 ಸಾವಿರ ಸಹಾಯಧನ ನೀಡಲಾಗುವುದು. ಈ ಸಹಾಯಧನವೂ ಸಾಲುವುದಿಲ್ಲವೆಂದು ಆಟೊ ಚಾಲಕರ ಸಂಘಟನೆಗಳ ಪದಾಧಿಕಾರಿಗಳು ಹೇಳುತ್ತಿದ್ದಾರೆ. ಅದನ್ನು ಪರಿಶೀಲಿಸುತ್ತಿದ್ದೇವೆ’ ಎಂದು ತಿಳಿಸಿದರು.

ಸತ್ತವರ ಹೆಸರಿನಲ್ಲೂ ಪರವಾನಗಿ
‘ಪರವಾನಗಿ ವರ್ಗಾವಣೆ ಮಾಡಲು ಕಠಿಣ ನಿಯಮಗಳಿವೆ. ಅಷ್ಟಾದರೂ ಹಲವರು ಅನಧಿಕೃತವಾಗಿ ಪರವಾನಗಿ ಬಳಸುತ್ತಿದ್ದಾರೆ. ಸತ್ತವರ ಹೆಸರಿನಲ್ಲೂ ಹಲವರು ಆಟೊ ಓಡಿಸುತ್ತಿದ್ದಾರೆ. ಈ ಸಂಗತಿ ತನಿಖೆಯಿಂದ ಗೊತ್ತಾಗಿತ್ತು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘1965ರಿಂದ ಪರವಾನಗಿ ನೀಡುವ ಪ್ರಕ್ರಿಯೆ ಆರಂಭವಾಗಿದೆ. 1974ರಲ್ಲಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಅಂದಿನಿಂದ ಅಗತ್ಯಕ್ಕೆ ತಕ್ಕಂತೆ ಪರವಾನಗಿ ನೀಡಲಾಗಿದೆ. ಅಷ್ಟಾದರೂ ಹಲವರು ನಕಲಿ ಪರವಾನಗಿ ಸೃಷ್ಟಿಸಿಕೊಂಡಿದ್ದಾರೆ’ ಎಂದು ಹೇಳಿದರು.

‘ಸಹಾಯಧನ ಹೆಚ್ಚಳಕ್ಕೆ ತೀರ್ಮಾನ’
'2 ಸ್ಟ್ರೋಕ್‌ ಆಟೊಗಳನ್ನು ಬದಲಾಯಿಸಿ 4 ಸ್ಟ್ರೋಕ್ ಆಟೊ ಖರೀದಿಸುವ ಚಾಲಕರಿಗೆ ನೀಡಲಾಗುತ್ತಿರುವ ಸಹಾಯಧನವನ್ನು ₹30 ಸಾವಿರದಿಂದ ₹40 ಸಾವಿರಕ್ಕೆ ಹೆಚ್ಚಿಸಲು ತೀರ್ಮಾನಿಸಲಾಗಿದೆ’ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು.

‘ಹಳೆಯ ಆಟೊ ಬದಲು, ಹೊಸ ಆಟೊ ಖರೀದಿಗೆ ಸಹಾಯಧನ ನೀಡಲಾಗುತ್ತಿದೆ. ಅದರ ಬದಲು ಎಲೆಕ್ಟ್ರಿಕ್‌ ಬ್ಯಾಟರಿಯನ್ನಾದರೂ ಅಳವಡಿಸಿಕೊಳ್ಳಲು ಅವಕಾಶವಿದೆ. ಅರ್ಹರನ್ನು ಆಯ್ಕೆ ಮಾಡಿ ₹40 ಸಾವಿರ ಸಹಾಯಧನ ನೀಡಲಾಗುವುದು. ಈ ಸಹಾಯಧನವೂ ಸಾಲುವುದಿಲ್ಲವೆಂದು ಆಟೊ ಚಾಲಕರ ಸಂಘಟನೆಗಳ ಪದಾಧಿಕಾರಿಗಳು ಹೇಳುತ್ತಿದ್ದಾರೆ. ಸದ್ಯದಲ್ಲೇ ಪದಾಧಿಕಾರಿಗಳ ಸಭೆ ಕರೆದು ಆ ಬಗ್ಗೆ ಪರಿಶೀಲಿಸುತ್ತೇನೆ’ ಎಂದು ಅವರು ತಿಳಿಸಿದರು.

*
ಅಕ್ರಮಗಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗುತ್ತಿದೆ. ಇ– ಪರ್ಮಿಟ್ ವ್ಯವಸ್ಥೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ.
– ಡಿ.ಸಿ.ತಮ್ಮಣ್ಣ, ಸಾರಿಗೆ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT