ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bengaluru Bandh | ಬಂದ್‌ ಬಿಸಿ: ವಹಿವಾಟು ಸ್ಥಗಿತ, ರಸ್ತೆಗಳು ಬಿಕೋ

ಕಾವೇರಿ: ತಮಿಳುನಾಡು ಗಡಿಗೆ ಹೊಂದಿಕೊಂಡ ಪ್ರದೇಶಗಳಲ್ಲಿ ವ್ಯಾಪಕ ಭದ್ರತೆ * ಪಗಡೆಯಾಡಿ, ಮೊಬೈಲ್‌ ನೋಡುತ್ತ ಕಾಲ ಕಳೆದ ಕಾರ್ಮಿಕರು
Published 27 ಸೆಪ್ಟೆಂಬರ್ 2023, 0:29 IST
Last Updated 27 ಸೆಪ್ಟೆಂಬರ್ 2023, 0:29 IST
ಅಕ್ಷರ ಗಾತ್ರ

ಬೆಂಗಳೂರು: ವಾಹನ ದಟ್ಟಣೆ ಇಲ್ಲದ ರಸ್ತೆಗಳು, ಬಸ್‌ಗಳಿದ್ದರೂ ಪ್ರಯಾಣಿಕರಿಲ್ಲದೇ ಬಿಕೊ ಎನ್ನುತ್ತಿದ್ದ ಬಿಎಂಟಿಸಿ– ಕೆಎಸ್‌ಆರ್‌ಟಿಸಿ ನಿಲ್ದಾಣಗಳು, ಬಾಗಿಲು ತೆರೆಯದ ಅಂಗಡಿ–ಮಳಿಗೆಗಳು, ಕೈಗಾರಿಕೆಗಳ ಎದುರಿನ ಆವರಣದಲ್ಲಿ ಕ್ರಿಕೆಟ್ ಆಟವಾಡುತ್ತಿದ್ದ ಕಾರ್ಮಿಕರು...

ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ನಗರದಲ್ಲಿ ಮಂಗಳವಾರ ಕಂಡುಬಂದ ದೃಶ್ಯಗಳಿವು. ಬೆಂಗಳೂರು ಬಂದ್ ಅರಿತಿದ್ದ ಬಹುತೇಕ ಜನರು, ಮನೆಯಿಂದ ಹೊರಬರಲಿಲ್ಲ. 

ಚಿಕ್ಕಪೇಟೆ ಹಾಗೂ ಸುತ್ತಮುತ್ತಲಿನ ಮಾರುಕಟ್ಟೆಯ ವರ್ತಕರು, ಚಿನ್ನಾಭರಣ ವ್ಯಾಪಾರಿಗಳು, ಆಟೊಮೊಬೈಲ್ಸ್ ಮಳಿಗೆ, ಗೃಹೋಪಯೋಗಿ ವಸ್ತುಗಳು ಮಳಿಗೆ ಸೇರಿದಂತೆ ಹಲವು ವ್ಯಾಪಾರಿಗಳು ಬಂದ್‌ಗೆ ಸಂಪೂರ್ಣ ಬೆಂಬಲ ನೀಡಿದ್ದರು. ಹೀಗಾಗಿ, ಬೆಳಿಗ್ಗೆಯಿಂದಲೇ ಎಲ್ಲಿಯೂ ಅಂಗಡಿಗಳು ತೆರೆಯಲಿಲ್ಲ.

ಮೈಸೂರು ಬ್ಯಾಂಕ್‌ ವೃತ್ತ, ಚಿಕ್ಕಪೇಟೆ, ಅವೆನ್ಯೂ ರಸ್ತೆ, ಕಾಟನ್‌ಪೇಟೆ, ಗಾಂಧಿನಗರ, ಮೆಜೆಸ್ಟಿಕ್, ಹಲಸೂರು ಗೇಟ್, ಎಸ್‌.ಪಿ ರಸ್ತೆ, ಕಲಾಸಿಪಾಳ್ಯ ಹಾಗೂ ಸುತ್ತಮುತ್ತ ಮಾರುಕಟ್ಟೆಗಳಲ್ಲಿ ಅಂಗಡಿಗಳು ಬಂದ್ ಆಗಿದ್ದವು. ಕೆಲಸವಿಲ್ಲದಿದ್ದರಿಂದ ಕೆಲ ಕಾರ್ಮಿಕರು, ಮಳಿಗೆಗಳ ಎದುರು ಕುಳಿತು ಪಗಡೆಯಾಟದಲ್ಲಿ ತೊಡಗಿದ್ದರು. ಹಲವು ಕಾರ್ಮಿಕರು, ಮೊಬೈಲ್ ನೋಡುತ್ತ ಮಲಗಿದ್ದ ದೃಶ್ಯಗಳು ಕಂಡುಬಂದವು.

ಕೆ.ಆರ್. ಮಾರುಕಟ್ಟೆಯ ಕಾರ್ಮಿಕರು ಹಾಗೂ ವ್ಯಾಪಾರಿಗಳು ಸಹ ಬಂದ್‌ಗೆ ಬೆಂಬಲ ನೀಡಿದ್ದರು. ಇದರಿಂದಾಗಿ ಮಾರುಕಟ್ಟೆಯ ಬಹುತೇಕ ಮಳಿಗೆಗಳ ಬಾಗಿಲಿಗೆ ‘ಬೆಂಗಳೂರು ಬಂದ್’ ಪೋಸ್ಟರ್ ಅಂಟಿಸಿ, ವಹಿವಾಟು ಸ್ಥಗಿತಗೊಳಿಸಲಾಗಿತ್ತು.

ಹಲವು ಕಡೆಗಳಲ್ಲಿ ಹೋಟೆಲ್, ಬೀಡಾ ಮಳಿಗೆಗಳು ತೆರೆದಿದ್ದವು. ಅಲ್ಲೆಲ್ಲ ಬೆಳಿಗ್ಗೆ ಮತ್ತು ಮಧ್ಯಾಹ್ನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಬಹುತೇಕ ಕಡೆ ಬಾರ್‌ ಆ್ಯಂಡ್ ರೆಸ್ಟೊರೆಂಟ್‌ಗಳನ್ನೂ ಬಂದ್ ಮಾಡಲಾಗಿತ್ತು. ಪೆಟ್ರೋಲ್ ಬಂಕ್‌ಗಳು ತೆರೆದಿದ್ದವು. ಆದರೆ, ಬಂಕ್‌ಗೆ ಬರುವ ವಾಹನಗಳ ಸಂಖ್ಯೆ ಕಡಿಮೆ ಇತ್ತು.

ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳು ಹಾಗೂ ಮೆಟ್ರೊ ರೈಲು ಸಂಚಾರ ಎಂದಿನಂತಿತ್ತು. ಆದರೆ, ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಕೆಲ ಮಾರ್ಗಗಳಲ್ಲಿ ಸಂಚರಿಸಿದ ಬಸ್‌ಗಳು ಖಾಲಿಯಾಗಿದ್ದವು. ಸಂಜೆಯವರೆಗೂ ಹೆಚ್ಚು ಪ್ರಯಾಣಿಕರ ಸುಳಿವು ಇರಲಿಲ್ಲ. ಹಾಗಾಗಿ, ಕೆಲ ಮಾರ್ಗಗಳ ಬಸ್‌ಗಳ ಸಂಚಾರ ಅವಧಿ ಬದಲಾಯಿಸಲಾಯಿತು.

ಬಸ್‌ ನಿಲ್ದಾಣಗಳಲ್ಲಿ ಮಳಿಗೆಗಳನ್ನೂ ಬಂದ್ ಮಾಡಲಾಗಿತ್ತು. ಹೋಟೆಲ್‌ ತೆರೆಯಲಾಗಿತ್ತು. ನಿಲ್ದಾಣಕ್ಕೆ ಬಂದ ಜನರು, ಹೋಟೆಲ್‌ಗಳಲ್ಲಿ ತಿಂಡಿ – ತಿನಿಸು ತಿನ್ನುತ್ತಿದ್ದ ದೃಶ್ಯಗಳು ಕಂಡುಬಂದವು. ಬಂದ್‌ಗೆ ಬೆಂಬಲಿಸಿದ್ದ ಸಂಘಟನೆಗಳ ಕೆಲ ಕಾರ್ಯಕರ್ತರು ಸಹ ಅದೇ ಹೋಟೆಲ್‌ನಲ್ಲಿ ತಿಂಡಿ ತಿಂದು, ‘ಬಂದ್ ಬೆಂಬಲಿಸಿ’ ಎಂದು ಜನರನ್ನು ಕೋರಿದರು.

ಶಾಲೆ–ಕಾಲೇಜಿಗೆ ರಜೆ: ಮಕ್ಕಳ ರಕ್ಷಣೆ ಹಾಗೂ ಸುರಕ್ಷತೆ ದೃಷ್ಟಿಯಿಂದ, ಶಾಲೆ–ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಮಕ್ಕಳು, ಮನೆಯೊಳಗೆ ಹಾಗೂ ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ದೃಶ್ಯಗಳು ಕಂಡುಬಂದವು.

ಆಸ್ಪತ್ರೆಯಲ್ಲೂ ಜನಸಂಖ್ಯೆ ವಿರಳ : ನಗರದ ವಿಕ್ಟೋರಿಯಾ, ಮಿಂಟೊ, ಬೌರಿಂಗ್ ಸೇರಿದಂತೆ ಹಲವು ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ಸಂಖ್ಯೆ ತೀರಾ ಕಡಿಮೆ ಇತ್ತು.

ರಾತ್ರಿಯೇ ವಿಮಾನ ನಿಲ್ದಾಣ ಸೇರಿದ್ದ ಜನ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಪ್ರಯಾಣಿಕರ ಸಂಖ್ಯೆ ಯಥಾಪ್ರಕಾರವಿತ್ತು. ಬಂದ್ ಮಾಹಿತಿ ಅರಿತಿದ್ದ ಪ್ರಯಾಣಿಕರು, ರಾತ್ರಿಯೇ ನಿಲ್ದಾಣಕ್ಕೆ ತಲುಪಿದ್ದರು. ತಮ್ಮ ವಿಮಾನದ ಸರದಿಗಾಗಿ ಕಾಯುತ್ತ ನಿಲ್ದಾಣದಲ್ಲಿ ಸಮಯ ಕಳೆದರು.

ಎಪಿಎಂಸಿ, ಕೈಗಾರಿಕೆಗಳು ಬಂದ್: ಪೀಣ್ಯ ಕೈಗಾರಿಕೆ ಪ್ರದೇಶ, ಯಶವಂತಪುರ, ಆರ್‌ಎಂಸಿ ಯಾರ್ಡ್, ಹಾಗೂ ಸುತ್ತಮುತ್ತಲಿನ ವ್ಯಾಪಾರ ವಹಿವಾಟು ಸಂಪೂರ್ಣ ಬಂದ್ ಆಗಿತ್ತು. ಎಪಿಎಂಸಿ ವರ್ತಕರು, ಉದ್ಯಮಗಳು ಹಾಗೂ ಕೈಗಾರಿಕೆಗಳ ಮಾಲೀಕರು, ಸ್ವಯಂಪ್ರೇರಿತವಾಗಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದರು.

ಕೈಗಾರಿಕೆಗಳು ಹೆಚ್ಚಿರುವ ಪ್ರದೇಶಗಳಲ್ಲಿ ಕಾರ್ಮಿಕರ ಓಡಾಟ ಇರಲಿಲ್ಲ. ಅಗತ್ಯ ವಸ್ತುಗಳ ಕೈಗಾರಿಕೆ ಹೊರತು ಪಡಿಸಿ ಉಳಿದೆಲ್ಲ ಕೈಗಾರಿಗಳ ಬಾಗಿಲುಗಳು ಬಂದ್ ಆಗಿದ್ದವು. ಕೆಲ ಕೈಗಾರಿಕಾ ಘಟಕಗಳ ಎದುರು ಯುವಕರ ಗುಂಪು, ಕ್ರಿಕೆಟ್ ಆಡುತ್ತಿದ್ದ ದೃಶ್ಯಗಳು ಕಂಡುಬಂದವು.

ಬಂದ್‌ನಿಂದಾಗಿ ಹೆಚ್ಚಿನ ವಾಹನಗಳು ರಸ್ತೆಗಿಳಿಯಲಿಲ್ಲ. ತುಮಕೂರು ರಸ್ತೆ, ಬಳ್ಳಾರಿ ರಸ್ತೆ, ಕನಕಪುರ, ಬನ್ನೇರುಘಟ್ಟ ರಸ್ತೆ, ಮಾಗಡಿ ರಸ್ತೆ, ಮೈಸೂರು ರಸ್ತೆ, ಹೊರವರ್ತುಲ ರಸ್ತೆಗಳು ಹಾಗೂ ಇತರೆ ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ಕಡಿಮೆ ಇತ್ತು.

ಬಿಗಿ ಭದ್ರತೆ: ಪುರಭವನ, ಮೈಸೂರು ಬ್ಯಾಂಕ್ ವೃತ್ತ, ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನ, ಸ್ವಾತಂತ್ರ್ಯ ಉದ್ಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಡಿಸಿಪಿ, ಎಸಿಪಿಗಳಿಗೆ ಭದ್ರತೆ ಹೊಣೆ ವಹಿಸಲಾಗಿತ್ತು. ಪ್ರಮುಖ ರಸ್ತೆಗಳು ಹಾಗೂ ಒಳ ರಸ್ತೆಗಳಲ್ಲೂ ಪೊಲೀಸರು ಗಸ್ತು ತಿರುಗಿದರು. ಕೆಎಸ್‌ಆರ್‌ಪಿ, ಸಿಎಆರ್ ಪೊಲೀಸರೂ ಭದ್ರತೆಯಲ್ಲಿದ್ದರು.

ತಮಿಳುನಾಡು ಗಡಿ ಪ್ರದೇಶವಾದ ಅತ್ತಿಬೆಲೆ, ಆನೇಕಲ್ ಹಾಗೂ ಸುತ್ತಮುತ್ತ ಭದ್ರತೆ ಹೆಚ್ಚಿತ್ತು. ಮುಂಜಾಗ್ರತಾ ಕ್ರಮವಾಗಿ ತಮಿಳುನಾಡು ಬಸ್‌ಗಳ ಸಂಚಾರ ಮಂಗಳವಾರ ಬಂದ್ ಮಾಡಲಾಗಿತ್ತು. ಹೊಸೂರು ರಸ್ತೆಯುದ್ದಕ್ಕೂ ನಿಂತಿದ್ದ ಪೊಲೀಸರು, ತಮಿಳುನಾಡು ನೋಂದಣಿ ಸಂಖ್ಯೆ ವಾಹನಗಳು ಕಂಡಾಗ ಭದ್ರತೆ ಒದಗಿಸಿ ಸುರಕ್ಷಿತವಾಗಿ ಮುಂದಕ್ಕೆ ಕಳುಹಿಸಿದರು.

ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಾಲಕನೊಬ್ಬ ಭಿತ್ತಿಪತ್ರ ಪ್ರದರ್ಶಿಸಿ ಘೋಷಣೆ ಕೂಗಿದ

ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಾಲಕನೊಬ್ಬ ಭಿತ್ತಿಪತ್ರ ಪ್ರದರ್ಶಿಸಿ ಘೋಷಣೆ ಕೂಗಿದ

– ಪ್ರಜಾವಾಣಿ ಚಿತ್ರ

ಗಾಂಧಿನಗರದಲ್ಲಿ ಬಿಎಂಟಿಸಿ ಬಸ್‌ ಸಂಚಾರಕ್ಕೆ ಅಡ್ಡಿಪಡಿಸಲು ಯತ್ನಿಸಿದ್ದ ಪ್ರತಿಭಟನಕಾರರೊಬ್ಬರನ್ನು ಪೊಲೀಸರು ವಶಕ್ಕೆ ಪಡೆದು ಎಳೆದೊಯ್ದರು

ಗಾಂಧಿನಗರದಲ್ಲಿ ಬಿಎಂಟಿಸಿ ಬಸ್‌ ಸಂಚಾರಕ್ಕೆ ಅಡ್ಡಿಪಡಿಸಲು ಯತ್ನಿಸಿದ್ದ ಪ್ರತಿಭಟನಕಾರರೊಬ್ಬರನ್ನು ಪೊಲೀಸರು ವಶಕ್ಕೆ ಪಡೆದು ಎಳೆದೊಯ್ದರು

– ಪ್ರಜಾವಾಣಿ ಚಿತ್ರ 

ನಗರದ ಎಂ.ಜಿ.ರಸ್ತೆಯಲ್ಲಿ ವಾಹನಗಳ ಓಡಾಟ ವಿರಳವಾಗಿತ್ತು

ನಗರದ ಎಂ.ಜಿ.ರಸ್ತೆಯಲ್ಲಿ ವಾಹನಗಳ ಓಡಾಟ ವಿರಳವಾಗಿತ್ತು

– ಪ್ರಜಾವಾಣಿ ಚಿತ್ರ

ಹೊರ ಜಿಲ್ಲೆಯಿಂದ ಯಶವಂತಪುರ ರೈಲು ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರು ಆಟೊ ಸಿಗದಿದ್ದರಿಂದ ಲಗೇಜು ಹೊತ್ತು ಸಾಗಿದರು

ಹೊರ ಜಿಲ್ಲೆಯಿಂದ ಯಶವಂತಪುರ ರೈಲು ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರು ಆಟೊ ಸಿಗದಿದ್ದರಿಂದ ಲಗೇಜು ಹೊತ್ತು ಸಾಗಿದರು

– ಪ್ರಜಾವಾಣಿ ಚಿತ್ರ

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ವಾಹನಗಳ ಓಡಾಟವಿಲ್ಲದೇ ಬಿಕೊ ಎನ್ನುತ್ತಿತ್ತು

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ವಾಹನಗಳ ಓಡಾಟವಿಲ್ಲದೇ ಬಿಕೊ ಎನ್ನುತ್ತಿತ್ತು

– ಪ್ರಜಾವಾಣಿ ಚಿತ್ರ

ಸ್ಯಾಟ್‌ಲೈಟ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು

ಸ್ಯಾಟ್‌ಲೈಟ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು

– ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.

ಜನರಿಗೆ ಕುಡಿಯಲು ನೀರು ಕೊಡಿ ಎಂದರೆ ರಾಜ್ಯದ ಕಾಂಗ್ರೆಸ್‌ ಸರ್ಕಾರ ಬ್ರಾಂಡಿ ಕೊಡ್ತೀನಿ ಎನ್ನುತ್ತಿದೆ.

-‘ಮುಖ್ಯಮಂತ್ರಿ’ ಚಂದ್ರು ರಾಜ್ಯ ಅಧ್ಯಕ್ಷ ಎಎಪಿ

ಪ್ರಯಾಣಿಕರ ಸಂಖ್ಯೆ ವಿರಳ

ಖಾಸಗಿ ವಾಹನಗಳ ಚಾಲಕರು ಹಾಗೂ ಮಾಲೀಕರ ಒಕ್ಕೂಟ ಬಂದ್‌ಗೆ ಬೆಂಬಲ ನೀಡಿತ್ತು. ಐಟಿ ಬಿಟಿ ಕಂಪನಿಗಳ ವಾಹನಗಳು ಶಾಲಾ–ಕಾಲೇಜು ಮಕ್ಕಳ ವಾಹನಗಳು ಪ್ರಯಾಣಿಕರ ಬಸ್‌ಗಳು ಹಾಗೂ ಮ್ಯಾಕ್ಸಿ ಕ್ಯಾಬ್‌ಗಳ ಓಡಾಟ ಸಂಪೂರ್ಣ ಸ್ಥಗಿತಗೊಂಡಿತ್ತು. ಖಾಸಗಿ ವಾಹನಗಳ ಚಾಲಕರು ಹಾಗೂ ಮಾಲೀಕರು ಬಸವನಗುಡಿ ಮೈದಾನದಿಂದ ಪುರಭವನದವರೆಗೆ ಮೆರವಣಿಗೆ ನಡೆಸಲು ಮುಂದಾಗಿದ್ದರು. ಅವರನ್ನು ವಶಕ್ಕೆ ಪಡೆದ ಪೊಲೀಸರು ಸ್ವಾತಂತ್ರ್ಯ ಉದ್ಯಾನಕ್ಕೆ ತಂದು ಬಿಟ್ಟರು. ಮೊಬೈಲ್ ಆ್ಯಪ್ ಆಧರಿತ ಕ್ಯಾಬ್ ಸೇವೆ ಮಂಗಳವಾರ ಲಭ್ಯವಿತ್ತು. ಓಲಾ–ಉಬರ್ ಹಾಗೂ ಇತರೆ ಕಂಪನಿಗಳ ಕ್ಯಾಬ್‌ಗಳು ಯಥಾಪ್ರಕಾರ ಸಂಚರಿಸಿದವು. ಕೆಲವೆಡೆ ಆಟೊಗಳ ಓಡಾಟವೂ ಇತ್ತು. ಆದರೆ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು.  ‘ನಿತ್ಯ ಬರುವಂತೆ ಇಂದು ಬೆಳಿಗ್ಗೆ 6 ಗಂಟೆಗೆ ಕೆಲಸಕ್ಕೆ ಬಂದಿದ್ದೇನೆ. ಪ್ರಯಾಣಿಕರಿಗಾಗಿ ಕಾಯುತ್ತಿದ್ದೇನೆ. ಆದರೆ ಇದುವರೆಗೂ ಒಬ್ಬ ಪ್ರಯಾಣಿಕರು ಬಂದಿಲ್ಲ. ಬಂದ್‌ಗೆ ಹೆದರಿ ಜನರು ಮನೆಯಲ್ಲಿದ್ದಾರೆ’ ಎಂದು ಓಲಾ ಕ್ಯಾಬ್ ಚಾಲಕ ಚಂದ್ರಶೇಖರ್ ತಿಳಿಸಿದರು.

ಮೂರು ಹೋಟೆಲ್‌ಗಳಿಗೆ ನುಗ್ಗಿ ಗಲಾಟೆ: ಇಬ್ಬರು ವಶಕ್ಕೆ

ಬೆಂಗಳೂರು: ಬಂದ್ ಸಂದರ್ಭದಲ್ಲಿ ಜಯನಗರ ಬಳಿಯ ಮೂರು ಹೋಟೆಲ್‌ಗಳಿಗೆ ನುಗ್ಗಿ ಕಿಡಿಗೇಡಿಗಳು ಗಲಾಟೆ ಮಾಡಿದ್ದಾರೆ. ಪ್ರಕರಣವೊಂದರಲ್ಲಿ ಇಬ್ಬರು ಆರೋಪಿಗಳನ್ನು ಜಯನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಯನಗರ ಬಳಿಯ ‘ಉಡುಪಿ ಹಬ್’ ಹೋಟೆಲ್‌ಗೆ ನುಗ್ಗಿದ್ದ ಆರೋಪಿ ಗಾಜಿನ ಟೇಬಲ್‌ಗೆ ಕಲ್ಲಿನಿಂದ ಹೊಡೆದು ಪುಡಿ ಪುಡಿ ಮಾಡಿದ್ದು ಕೃತ್ಯದ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ‘ಬೆಂಗಳೂರು ಬಂದ್ ಇದೆ. ಬಾಗಿಲು ಬಂದ್ ಮಾಡಿ’ ಎಂದು ಕೂಗಾಡುತ್ತ ಹೋಟೆಲ್‌ಗೆ ನುಗ್ಗಿದ್ದ ಕಿಡಿಗೇಡಿಗಳು ಕೃತ್ಯ ಎಸಗಿ ಪರಾರಿಯಾಗಿದ್ದರು. ಮಾಹಿತಿ ಬರುತ್ತಿದ್ದಂತೆ ಹೋಟೆಲ್‌ ಮಾಲೀಕನಿಂದ ದೂರು ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳಾದ ಶಿವ ಹಾಗೂ ವಿಶ್ವ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಇವರಿಬ್ಬರು ಸ್ಥಳೀಯ ಶಾಸಕನ ಜೊತೆ ಓಡಾಡಿಕೊಂಡಿದ್ದ ಮಾಹಿತಿ ಇದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ. ಪ್ರತ್ಯೇಕ ಪ್ರಕರಣದಲ್ಲಿ ಜಯನಗರದ 3ನೇ ಹಂತದ ಎರಡು ಹೋಟೆಲ್‌ಗಳಿಗೆ ನುಗ್ಗಿ ಗಲಾಟೆ ಮಾಡಲಾಗಿದೆ. ಮಾಲೀಕರ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ. ಈ ಸಂಬಂಧ ಸದ್ಯಕ್ಕೆ ಪ್ರಕರಣ ದಾಖಲಾಗಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT