ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದಾರ ಚನ್ನಯ್ಯ ಅಧ್ಯಯನ ಪೀಠ ಆರಂಭಿಸಲು ಪ್ರಯತ್ನ: ಗೋವಿಂದ ಕಾರಜೋಳ

Last Updated 11 ಮಾರ್ಚ್ 2021, 22:03 IST
ಅಕ್ಷರ ಗಾತ್ರ

ಬೆಂಗಳೂರು: ‘ಮಾದಾರ ಚನ್ನಯ್ಯ ಅಧ್ಯಯನ ಪೀಠ ಆರಂಭಿಸಲು ನಮ್ಮ ಸರ್ಕಾರ ಪ್ರಯತ್ನಿಸಲಿದೆ. ಈ ಸಂಬಂಧ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸುತ್ತೇನೆ’ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಕಾಯಕ ಶರಣರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಅಕ್ಕ ನಾಗಮ್ಮನವರ ಹೆಸರಲ್ಲಿ ಮುಂದಿನ ವರ್ಷದಿಂದ ಪ್ರಶಸ್ತಿ ನೀಡಲು ಸರ್ಕಾರ ನಿರ್ಧರಿಸಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ಇದನ್ನು ಕೊಡಲಾಗುತ್ತದೆ’ ಎಂದರು.

‘ನಾನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವನಾಗಿದ್ದಾಗ ಕಾಯಕ ಶರಣರ ಜಯಂತಿ ಆರಂಭಿಸಲು ಸೂಚಿಸಿದ್ದೆ. ಚದುರಿ ಹೋಗಿರುವ ಕಾಯಕ ಜೀವಿಗಳೆಲ್ಲಾ ಜಯಂತಿಯ ನೆಪದಲ್ಲಾದರೂ ಒಂದೆಡೆ ಸೇರಲಿ ಎಂಬ ಉದ್ದೇಶದಿಂದ ಇದನ್ನು ಶುರುಮಾಡಲಾಗಿತ್ತು. ಮಾದಾರ ಚನ್ನಯ್ಯನವರು ಇಡೀ ಶರಣ ಕುಲಕ್ಕೆ ಗೋತ್ರ ಪುರುಷರಾಗಿದ್ದರು ಎಂದು ಬಸವಣ್ಣನವರೇ ಬಣ್ಣಿಸಿದ್ದರು. ಹೀಗಾಗಿ ಮಾದರ ಎಂದು ಗುರುತಿಸಿಕೊಳ್ಳಲು ಯಾರೂ ಹಿಂಜರಿಯಬಾರದು’ ಎಂದು ತಿಳಿಸಿದರು.

‘ಸಮಾಜದಲ್ಲಿ ಅನೈತಿಕ ಸಂಬಂಧದಿಂದ ಜನಿಸಿದ ಮಗುವೂ ಕೀಳಲ್ಲ ಎಂಬುದನ್ನು ಬಸವಣ್ಣನವರು ಸಾರಿ ಹೇಳಿದ್ದರು. ಬಸವ ತತ್ವವು ಅನುಷ್ಠಾನಗೊಳ್ಳಬೇಕಾದರೆ ನಡೆ, ನುಡಿ ಹಾಗೂ ಸಿದ್ಧಾಂತ ಒಂದಾಗಬೇಕು. ಸಮುದಾಯದವರೆಲ್ಲಾ ಒಗ್ಗಟ್ಟಾಗಿ ಹೆಜ್ಜೆ ಇಟ್ಟರೆ ಮಾತ್ರ ನಾವು ಅಂದುಕೊಂಡಿರುವ ಗುರಿ ಮುಟ್ಟಲು ಸಾಧ್ಯ’ ಎಂದು ಹೇಳಿದರು.

ರಾಜ್ಯಸಭಾ ಸದಸ್ಯ ಎಲ್‌.ಹನುಮಂತಯ್ಯ ‘ತಳ ಸಮುದಾಯದ ಕಾಯಕ ಶರಣರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಗತ್ತಿಗೆ ಪರಿಚಯಿಸಿದರು. ಕೆಳ ವರ್ಗದ ಎಲ್ಲಾ ಶರಣರೂ ಅನುಭವ ಮಂಟಪದ ವಾರಸುದಾರರಾಗಿದ್ದರು’ ಎಂದರು.

‘ನೀತಿಗೆ ಮತ್ತೊಂದು ಹೆಸರೇ ಮಾದಾರ ಚನ್ನಯ್ಯ. ಕೆಳವರ್ಗದ ಶರಣರು ಸ್ವಾಭಿಮಾನದ ಸಂಕೇತ. ಆ ಗುಣವನ್ನು ನಾವೂ ಮೈಗೂಡಿಸಿಕೊಳ್ಳಬೇಕು. ಮೀಸಲಾತಿಯ ವರ್ಗೀಕರಣ ಆಗಬೇಕು ಎಂಬುದು ನಮ್ಮೆಲ್ಲರ ಬೇಡಿಕೆ. ಅದು ಈಡೇರಬೇಕಾದರೆ ಒಗ್ಗಟ್ಟಾಗಿ ಹೋರಾಡಬೇಕು’ ಎಂದು ತಿಳಿಸಿದರು.

‘ಹರಳಯ್ಯ ಗುರುಪೀಠದಲ್ಲಿ ಕಲ್ಯಾಣಮ್ಮ ಗದ್ದಿಗೆ ನಿರ್ಮಾಣಕ್ಕೆ ಸರ್ಕಾರದ ವತಿಯಿಂದ ₹5 ಕೋಟಿ ಅನುದಾನ ಒದಗಿಸುವಂತೆ ಬೇಡಿಕೆ ಇಡಲಾಗಿದೆ. ಈ ಸಂಬಂಧ ಮುಖ್ಯಮಂತ್ರಿಯವರ ಗಮನ ಸೆಳೆಯುತ್ತೇವೆ’ ಎಂದು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಜಿ.ಮರಿಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT