ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯಾಣಿಕರ ತಪಾಸಣೆ ಮತ್ತಷ್ಟು ‘ಸ್ಮಾರ್ಟ್‌’

ವಿಮಾನ ನಿಲ್ದಾಣದಲ್ಲಿ ಹೊಸ ವ್ಯವಸ್ಥೆ ಅಳವಡಿಕೆಗೆ ತಯಾರಿ l ಮಾರ್ಚ್‌ ಅಂತ್ಯಕ್ಕೆ ಸೇವೆ ಲಭ್ಯ
Last Updated 2 ಫೆಬ್ರುವರಿ 2019, 19:40 IST
ಅಕ್ಷರ ಗಾತ್ರ

ಬೆಂಗಳೂರು: ಕೇವಲ 45 ಸೆಕೆಂಡ್‌ನಲ್ಲಿ ಬ್ಯಾಗ್ ಪರಿಶೀಲನೆ ನಡೆಸಲು ‘ಸ್ವಯಂಚಾಲಿತ ಬ್ಯಾಗ್‌ ಪರಿಶೀಲನೆ’ ವ್ಯವಸ್ಥೆ ಜಾರಿಗೆ ತಂದಿದ್ದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಆಡಳಿತ ಮಂಡಳಿ, ಇದೀಗ ಪ್ರಯಾಣಿಕರ ತಪಾಸಣೆ ಪ್ರಕ್ರಿಯೆಯನ್ನು ಕಡಿಮೆ ಸಮಯದಲ್ಲಿ ಪೂರ್ಣಗೊಳಿಸುವುದಕ್ಕಾಗಿ ‘ಸ್ಮಾರ್ಟ್‌ ಸೆಕ್ಯುರಿಟಿ ಲೈನ್‌’ ವ್ಯವಸ್ಥೆ ಜಾರಿಗೆ ತರಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

ಪ್ರಯಾಣಿಕರ ತಪಾಸಣೆಗೆ ಸದ್ಯ ಹೆಚ್ಚಿನ ಸಮಯ ವ್ಯಯವಾಗುತ್ತಿದ್ದು, ನಿತ್ಯವೂ ಸರದಿಯಲ್ಲಿ ನಿಂತುಕೊಂಡು ಪ್ರಯಾಣಿಕರು ಸುಸ್ತಾಗುತ್ತಿದ್ದಾರೆ. ಅದಕ್ಕೆ ಅಂತ್ಯ ಹಾಡುವಉದ್ದೇಶದಿಂದ ಆಡಳಿತ ಮಂಡಳಿಯು ‘ಸ್ಮಾರ್ಟ್‌ ಸೆಕ್ಯುರಿಟಿ ಲೈನ್‌’ ವ್ಯವಸ್ಥೆ ರೂಪಿಸುತ್ತಿದ್ದು, ಮಾರ್ಚ್‌ ಕೊನೆಯ ವಾರದಲ್ಲಿ ಪ್ರಯಾಣಿಕರ ಸೇವೆಗೆ ಲಭ್ಯವಾಗಲಿದೆ.

2008ರಲ್ಲಿ ನಿಲ್ದಾಣ ಕಾರ್ಯಾರಂಭ ಮಾಡಿದಾಗ, ಆ ವರ್ಷ 90 ಲಕ್ಷ ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣಿಸಿದ್ದರು. 2018ರ ಅಂತ್ಯಕ್ಕೆ ಪ್ರಯಾಣಿಕರ ಸಂಖ್ಯೆ 2.70 ಕೋಟಿಗೆ ಏರಿದ್ದು, ಪ್ರತಿದಿನವೂ ದಟ್ಟಣೆ ಇದ್ದೆ ಇರುತ್ತದೆ. ಅಂತರರಾಷ್ಟ್ರೀಯ ಹಾಗೂ ರಾಷ್ಟ್ರೀಯ ವಿಮಾನಗಳ ಪ್ರಯಾಣಿಕರು, ನಿಗದಿತ ಅವಧಿಗೂ ಮುನ್ನ ನಿಲ್ದಾಣಕ್ಕೆ ಬರುತ್ತಿದ್ದಾರೆ.

ಅಂಥ ಪ್ರಯಾಣಿಕರನ್ನು ಮುಖ್ಯದ್ವಾರಗಳಲ್ಲಿ ತಪಾಸಣೆಗೆ ಒಳಪಡಿಸಿ ಒಳಗೆ ಕಳುಹಿಸಲು ಪ್ರತ್ಯೇಕ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರಯಾಣಿಕರು ಗುಂಪು ಗುಂಪಾಗಿ ನಿಲ್ದಾಣಕ್ಕೆ ಬರುವುದರಿಂದ ಅವ
ರನ್ನು ತಪಾಸಣೆಗೆ ಒಳಪಡಿಸಲು ಸಾಕಷ್ಟು ಸಮಯ ಹಿಡಿಯುತ್ತದೆ.ಸಮಯ ಉಳಿತಾಯಕ್ಕಾಗಿ ಕೆಐಎ ಆಡಳಿತ ಮಂಡಳಿ, ಆಧುನಿಕ ತಂತ್ರಜ್ಞಾನ ಒಳಗೊಂಡ ‘ಸ್ಮಾರ್ಟ್‌ ಸೆಕ್ಯುರಿಟಿ ಲೈನ್‌’ ವ್ಯವಸ್ಥೆ ಜಾರಿಗೆ ತರುತ್ತಿದೆ.

‘2028ರ ಹೊತ್ತಿಗೆ 8 ಕೋಟಿ ಪ್ರಯಾಣಿಕರು ನಿಲ್ದಾಣ ಬಳಸುವ ಸಾಧ್ಯತೆ ಇದೆ. ಅದೇ ಕಾರಣಕ್ಕೆ ನಿಲ್ದಾಣ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಅದರಲ್ಲಿ ‘ಸ್ಮಾರ್ಟ್‌ ಸೆಕ್ಯುರಿಟಿ ಲೈನ್‌’ ವ್ಯವಸ್ಥೆ ಜಾರಿ ಸಹ ಒಳಗೊಂಡಿದೆ. ಈವ್ಯವಸ್ಥೆ ಜಾರಿಗೆ ಬಂದರೆ ಪ್ರಯಾಣಿಕರ ತಪಾಸಣಾ ಸಮಯ ಶೇ 70ರಷ್ಟು ಕಡಿಮೆ ಆಗುವ ನಿರೀಕ್ಷೆ ಇದೆ’ ಎಂದು ಕೆಐಎ ಸಿಇಒ ಹರಿ ಮರಾರ್‌ ತಿಳಿಸಿದರು.

‘ಸ್ವಯಂಚಾಲಿತ ಬ್ಯಾಗ್‌ ಪರಿಶೀಲನೆ’ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದೆ. ಮುಂಬರುವ ದಿನಗಳಲ್ಲಿ‘ನಿಮ್ಮ ಮುಖವೇ ಬೋರ್ಡಿಂಗ್ ಪಾಸ್’ ಎಂಬ ಧ್ಯೇಯದೊಂದಿಗೆ ‘ಬಯೋಮೆಟ್ರಿಕ್ ಸೆಲ್ಫ್ ಬೋರ್ಡಿಂಗ್’ ವ್ಯವಸ್ಥೆ ಸಹ ಸೇವೆಗೆ ಸಿಗಲಿದೆ’ ಎಂದು ಅವರು ಹೇಳಿದರು.

ಏಕಕಾಲದಲ್ಲಿ ಹಲವರ ತಪಾಸಣೆ: ‘ಅಟೊಮೆಟಿಕ್ ಟ್ರೇ ರಿಟ್ರೈವ್ ಸಿಸ್ಟಂ’ (ಎಟಿಆರ್‌ಎಸ್‌) ಜೊತೆಯಲ್ಲಿ ‘ಸ್ಮಾರ್ಟ್‌ ಸೆಕ್ಯುರಿಟಿ ಲೈನ್‌’ ವ್ಯವಸ್ಥೆ ಇರಲಿದೆ. ಅದರಿಂದಾಗಿ ಏಕಕಾಲದಲ್ಲಿ ಹಲವು ಪ್ರಯಾಣಿಕರ ತಪಾಸಣೆ ಮಾಡಲು ಅವಕಾಶ ಸಿಗಲಿದೆ.

‘ವ್ಯವಸ್ಥೆ ನಿರ್ವಹಣೆಗೆ ಪ್ರತ್ಯೇಕನಿಯಂತ್ರಣ ಕೊಠಡಿ ಇರಲಿದ್ದು, ಅಲ್ಲಿಯ ಸಿಬ್ಬಂದಿಯೇ ತಪಾಸಣೆ ಮೇಲೆ ನಿಗಾ ವಹಿಸಲಿದ್ದಾರೆ. ಲೋಹಶೋಧಕ ಉಪಕರಣಗಳೂ ವ್ಯವಸ್ಥೆಯಲ್ಲಿ ಇರಲಿವೆ.ಅನುಮಾನ ಕಂಡುಬಂದರೆ ಅಂಥ ಪ್ರಯಾಣಿಕರನ್ನು ಪ್ರತ್ಯೇಕ ಕೊಠಡಿಯಲ್ಲಿ ತಪಾಸಣೆಗೆ ಒಳಪಡಿಸಲಿದ್ದಾರೆ. ಪ್ರಯಾಣಿಕರ ಮೇಲೆ ನಿಗಾ ಇರಿಸುವ ಉದ್ದೇಶದಿಂದ ಉಪಕರಣಗಳ ಪಕ್ಕದಲ್ಲಿ ಭದ್ರತಾ ಸಿಬ್ಬಂದಿ ಸಹ ನಿಂತುಕೊಳ್ಳುತ್ತಿದ್ದಾರೆ’ ಎಂದು ಮೂಲಗಳು ಹೇಳಿವೆ.

ಯುರೋಪ್‌, ಪಶ್ಚಿಮ ಏಷ್ಯಾ, ಉತ್ತರ ಅಮೆರಿಕ ಹಾಗೂ ಆಗ್ನೇಯ ಏಷ್ಯಾ ವಿಮಾನ ನಿಲ್ದಾಣಗಳಲ್ಲಿ ಸ್ಮಾರ್ಟ್‌ ಸೆಕ್ಯುರಿಟಿ ಲೈನ್‌ ವ್ಯವಸ್ಥೆ ಜಾರಿಯಲ್ಲಿದೆ. ಅದನ್ನು ಅಳವಡಿಸಿದ್ದ ಮೆಕ್‌ಡೋನಾಲ್ಡ್‌ ಹ್ಯಾಂಫ್ರೆ (ಅಟೊಮೆಷನ್) ಕಂಪನಿಯೇ ಬೆಂಗಳೂರಿನ ನಿಲ್ದಾಣದಲ್ಲೂ ವ್ಯವಸ್ಥೆ ಜಾರಿಗೆ ತರುವ ಜವಾಬ್ದಾರಿ ವಹಿಸಿಕೊಂಡಿದೆ.

ಪ್ರಾಯೋಗಿಕ ಜಾರಿ ಯಶಸ್ವಿ: ನಿಲ್ದಾಣದ ಒಂದು ಗೇಟ್‌ನಲ್ಲಿ ಎರಡು ತಿಂಗಳ ಹಿಂದೆಯೇ ಪ್ರಾಯೋಗಿಕವಾಗಿ ‘ಸ್ಮಾರ್ಟ್ ಸೆಕ್ಯುರಿಟಿ ಲೈನ್’ ಉಪಕರಣವನ್ನು ಅಳವಡಿಸಲಾಗಿದ್ದು, ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗ ನಿಲ್ದಾಣದ ಎಲ್ಲ ಗೇಟ್‌ಗಳಿಗೂ ಅಳವಡಿಸಲು ಕೆಐಎ ಮುಂದಾಗಿದೆ.

ಏನಿದು ಸ್ಮಾರ್ಟ್‌ ಸೆಕ್ಯುರಿಟಿ ಲೈನ್‌?
ನಿಲ್ದಾಣದ ದ್ವಾರಗಳಲ್ಲಿ ಒಂದರ ಪಕ್ಕದಲ್ಲೊಂದು (ಮಧ್ಯದಲ್ಲಿ ಪ್ರಯಾಣಿಕರು ಹೋಗಲು ಜಾಗ ಬಿಟ್ಟು) ಉಪಕರಣಗಳನ್ನು ಅಳವಡಿಸಲಾಗುತ್ತದೆ. ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಉಪಕರಣಗಳ ಜಾಗಕ್ಕೆ ಬಂದು ತಮ್ಮ ಸಾಮಗ್ರಿಗಳನ್ನು ಟ್ರೇನಲ್ಲಿ ಹಾಕಿ ಮುಂದಕ್ಕೆ ಹೋಗಬಹುದು.

ಆ ಟ್ರೇಗಳು ಪ್ರಯಾಣಿಕರ ಪಕ್ಕದಲ್ಲೇ ಸಾಗಲಿವೆ. ಅದರಿಂದ ಪ್ರಯಾಣಿಕರು ಹಾಗೂ ಸಾಮಗ್ರಿಗಳ ತಪಾಸಣೆ ಏಕಕಾಲದಲ್ಲಿ ಮುಕ್ತಾಯವಾಗಲಿದ್ದು, ನಿಂತಲೇ ನಿಲ್ಲಬೇಕಾದ ಅವಶ್ಯಕತೆ ಇರುವುದಿಲ್ಲ.

ಪ‍್ರಯಾಣಿಕ ಹಾಗೂ ಟ್ರೇನಲ್ಲಿರುವ ಸಾಮಗ್ರಿಗಳನ್ನು ಉಪಕರಣವೇ ಸ್ಕ್ಯಾನ್ ಮಾಡಲಿದೆ. ಆ ಮಾಹಿತಿಯನ್ನು ನಿಯಂತ್ರಣ ಕೊಠಡಿಯಲ್ಲಿರುವ ಸಿಬ್ಬಂದಿ, ಪರದೆಯ ಮೇಲೆ ವೀಕ್ಷಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT