ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿದ್ವಾಯಿಯಲ್ಲಿ ಸೋಂಕು ಪತ್ತೆ ಪರೀಕ್ಷೆಗೆ ಚಾಲನೆ

ಕೋವಿಡ್ ಪರೀಕ್ಷೆ ಬಳಿಕ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ
Last Updated 26 ಏಪ್ರಿಲ್ 2020, 19:47 IST
ಅಕ್ಷರ ಗಾತ್ರ

ಬೆಂಗಳೂರು: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಕೋವಿಡ್‌ ಪರೀಕ್ಷೆಗೆ ಭಾನುವಾರ ಚಾಲನೆ ದೊರೆತಿದೆ. ಸೋಮವಾರದಿಂದಕ್ಯಾನ್ಸರ್ ರೋಗಿಗಳಿಗೆ ಕೋವಿಡ್ ಪರೀಕ್ಷೆ ನಡೆಸಿ, ಅಗತ್ಯ ಚಿಕಿತ್ಸೆಗಳನ್ನು ಒದಗಿಸಲಾಗುತ್ತದೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹಾಗೂ ಸಂಸದ ತೇಜಸ್ವಿ ಸೂರ್ಯ ಇದಕ್ಕೆ ಚಾಲನೆ ನೀಡಿದರು. ಕೊರೊನಾ ಸೋಂಕು ಭೀತಿ ಹಾಗೂ ಲಾಕ್‌ ಡೌನ್‌ನಿಂದ ತುರ್ತಾಗಿ ಅಗತ್ಯವಲ್ಲದ ಚಿಕಿತ್ಸೆಯನ್ನು ಸಂಸ್ಥೆಯಲ್ಲಿ ಸ್ಥಗಿತ ಮಾಡಲಾಗಿತ್ತು. ಇದರಿಂದ ರೋಗಿಗಳ ಸಂಖ್ಯೆಯಲ್ಲಿ ಶೇ 85ರಷ್ಟು ಇಳಿಕೆಯಾಗಿತ್ತು. ಈಗಾಗಲೇ ಫಾಲೋಅಪ್‌ಗೆ ಸೂಚಿಸಿದ ರೋಗಿಗಳ ಸಂಖ್ಯೆ 200ರ ಗಡಿ ದಾಟಿದ ಪರಿಣಾಮ ಚಿಕಿತ್ಸೆಗಳನ್ನು ಪುನಃ ಆರಂಭಿಸಲಾಗುತ್ತಿದೆ.

ಕೋವಿಡ್ ಪರೀಕ್ಷೆಗೆ ಅತ್ಯಾಧುನಿಕ ಮಾಲಿಕ್ಯೂಲರ್ ಪ್ರಯೋಗಾಲಯವನ್ನು ಬಳಸಿಕೊಳ್ಳಲಾಗುತ್ತಿದೆ. ಸೋಂಕು ಪತ್ತೆಯಾಗದ ರೋಗಿಗಳಿಗೆ ರೇಡಿಯೋಥೆರಪಿ, ಕಿಮೋಥೆರಪಿ ಸೇರಿದಂತೆ ಅಗತ್ಯ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಕೋವಿಡ್ ಪರೀಕ್ಷೆಯ ವರದಿಯನ್ನು ಮೂರು ಗಂಟೆಯಲ್ಲಿ ನೀಡಲಾಗುತ್ತದೆ. ಅಲ್ಲಿಯವರೆಗೆ ಕುಳಿತುಕೊಳ್ಳಲು ರೋಗಿಗಳಿಗೆ ಸಂಸ್ಥೆಯ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದೆ.

ಸಾಮರ್ಥ್ಯ ಹೆಚ್ಚಳ: ‘ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ಮಾರ್ಗಸೂಚಿಯ ಅನುಸಾರ ಕೋವಿಡ್ ಪರೀಕ್ಷೆ ಮಾಡಲಾಗುತ್ತದೆ. ಬೆಕ್‍ಮ್ಯಾನ್ ಕೌಲ್ಟರ್ ಬಯೋಮೆಕ್ - 4000 ಮತ್ತು ಕ್ವಾಂಟ್ ಸ್ಟುಡಿಯೋ 5 ಉಪಕರಣಗಳನ್ನು ಪ್ರಯೋಗಾಲಯದಲ್ಲಿ ಬಳಸಲಾಗುತ್ತಿದೆ. ಮೂರೂವರೆ ಗಂಟೆಯ 380 ಮಂದಿಯ ರಕ್ತ ಹಾಗೂ ಗಂಟಲು ದ್ರವದ ಪರೀಕ್ಷೆ ನಡೆಸಲು ಸಾಧ್ಯ.ಶೀಘ್ರದಲ್ಲೇ ಹೆಚ್ಚಿನ ಸಾಮರ್ಥ್ಯದ ಉಪಕರಣ ಅಳವಡಿಸಲಾಗುವುದು’ ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ.ರಾಮಚಂದ್ರ ತಿಳಿಸಿದರು.

ಇದೇ ವೇಳೆ ರೆಡ್ ಕ್ರಾಸ್‌ನಿಂದ ಆಶಾ ಕಾರ್ಯಕರ್ತರಿಗೆ ಮುಖಗವಸುಗಳು ಹಾಗೂ ರೋಟರಿ ಸಂಸ್ಥೆಯಿಂದ ಸಂಸ್ಥೆಗೆ ವೈಯಕ್ತಿಕ ಸುರಕ್ಷಾ ಸಾಧನಗಳನ್ನು (ಪಿಪಿಇ ಕಿಟ್‌) ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT