ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿದ್ವಾಯಿ ಸಂಸ್ಥೆ: ‘ಅಧಿಕಾರ’ ಸಂಘರ್ಷ

ನಿರ್ದೇಶಕರ ಅಧಿಕಾರ ಮೊಟಕುಗೊಳಿಸಿದ ಸರ್ಕಾರ, ಗೊಂದಲದಲ್ಲಿ ವೈದ್ಯರು, ಸಿಬ್ಬಂದಿ
Published 19 ಮಾರ್ಚ್ 2024, 23:33 IST
Last Updated 19 ಮಾರ್ಚ್ 2024, 23:33 IST
ಅಕ್ಷರ ಗಾತ್ರ

ಬೆಂಗಳೂರು: ಕ್ಯಾನ್ಸರ್ ಚಿಕಿತ್ಸೆಗೆ ಹೆಸರಾಗಿದ್ದ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ನಿರ್ವಹಣೆಗೆ ಸಂಬಂಧಿಸಿದಂತೆ ಆಡಳಿತಾಧಿಕಾರಿ ಮತ್ತು ನಿರ್ದೇಶಕರ ನಡುವೆ ಆಂತರಿಕ ಸಂಘರ್ಷ ಏರ್ಪಟ್ಟಿದೆ. ಇದರಿಂದಾಗಿ ಸರ್ಕಾರವು ನಿರ್ದೇಶಕರ ಅಧಿಕಾರವನ್ನೇ ಮೊಟಕುಗೊಳಿಸಿದೆ.

ಸಂಸ್ಥೆಯ ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ಸರ್ಕಾರವು ಕಳೆದ ತಿಂಗಳು ಐಎಎಸ್ ಅಧಿಕಾರಿ ಎನ್. ಮಂಜುಶ್ರೀ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿತ್ತು. ಇದೇ ವೇಳೆ ಸಂಸ್ಥೆಯ ನಿರ್ದೇಶಕ ಹುದ್ದೆಯಿಂದ ವಜಾಗೊಂಡಿದ್ದ ರೇಡಿಯೇಷನ್ ಆಂಕಾಲಜಿ ವಿಭಾಗದ ಮುಖ್ಯಸ್ಥ ಡಾ‌.ವಿ.ಲೋಕೇಶ್ ಅವರನ್ನು ಸೇವೆಯಿಂದಲೇ ಅಮಾನತುಗೊಳಿಸಲಾಗಿತ್ತು. ಸರ್ಜಿಕಲ್ ಆಂಕಾಲಜಿ ವಿಭಾಗದ ಮುಖ್ಯಸ್ಥ ಡಾ. ಸೈಯದ್ ಅಲ್ತಾಫ್ ಅವರನ್ನು ಪ್ರಭಾರ ನಿರ್ದೇಶಕರನ್ನಾಗಿ ನೇಮಿಸಿ, ಸರ್ಕಾರ ಆದೇಶ ಹೊರಡಿಸಿತ್ತು. ಸರ್ಕಾರದ ಈ ಆದೇಶದ ವಿರುದ್ಧ ಡಾ. ಲೋಕೇಶ್ ಕೋರ್ಟ್ ಮೆಟ್ಟಿಲೇರಿದ್ದರು. ಬಳಿಕ ಸರ್ಕಾರದ ಆದೇಶಗಳಿಗೆ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಇದರಿಂದಾಗಿ ಸರ್ಕಾರ ಹೊಸದಾಗಿ ಆದೇಶ ಹೊರಡಿಸದಿದ್ದರೂ ಡಾ. ಲೋಕೇಶ್ ನಿರ್ದೇಶಕ ಹುದ್ದೆಗೆ ಮತ್ತೆ ಮರಳಿದ್ದಾರೆ. ‌ಅವರ ಈ ನಡೆಯಿಂದ ಸಂಸ್ಥೆಯ ವೈದ್ಯರು ಹಾಗೂ ಸಿಬ್ಬಂದಿ ಗೊಂದಲಕ್ಕೆ ಒಳಗಾಗಿದ್ದಾರೆ. 

ಕರ್ತವ್ಯಕ್ಕೆ ಹಾಜರಾಗಿರುವ ಡಾ. ಲೋಕೇಶ್ ಅವರು, ಅಧಿಕಾರ ದುರ್ಬಳಕೆ, ಅಕ್ರಮ ಸೇವಾ ಬಡ್ತಿ, ವೈದ್ಯಕೀಯ ನಿರ್ಲಕ್ಷ್ಯ ಸೇರಿ ವಿವಿಧ ಆರೋಪಗಳಿಗೆ ಸಂಬಂಧಿಸಿದಂತೆ ಇಲಾಖೆ ವಿಚಾರಣೆ ಎದುರಿಸುತ್ತಿದ್ದಾರೆ. ಇಷ್ಟಾಗಿಯೂ ಅವರು ನಿರ್ದೇಶಕ ಹುದ್ದೆಯಲ್ಲಿ ಮುಂದುವರಿಯುತ್ತಿರುವುದು ಸಂಸ್ಥೆಯ ವೈದ್ಯರ ಅಸಮಾಧಾನಕ್ಕೆ ಕಾರಣವಾಗಿದೆ. ಕರ್ತವ್ಯಕ್ಕೆ ಮರಳಿದ ಅವರು ಟೆಂಡರ್‌ಗೆ ಸಂಬಂಧಿಸಿದ ಕೆಲವು ಕಡತಗಳನ್ನು ವಶಕ್ಕೆ ಪಡೆದಿರುವುದಾಗಿ ಸಂಸ್ಥೆಯ ಸಿಬ್ಬಂದಿ ಆಡಳಿತಾಧಿಕಾರಿಗೆ ದೂರು ನೀಡಿದ್ದರು. ಇದರ ಬೆನ್ನಲ್ಲಿಯೇ ಎಲ್ಲ ದಾಖಲೆಗಳನ್ನು ಒಪ್ಪಿಸಲು ಸೂಚಿಸಿದ್ದ ಆಡಳಿತಾಧಿಕಾರಿ, ಕಡತಗಳ ದಾಖಲೆಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಲ್ಲಿ ನೀವೇ ಹೊಣೆಯೆಂದು ಎಚ್ಚರಿಸಿದ್ದರು.

ಕ್ಲಿನಿಕಲ್ ವಿಷಯಕ್ಕೆ ಅವಕಾಶ: ವೈದ್ಯಕೀಯ ಶಿಕ್ಷಣ ಇಲಾಖೆಯು ಇದೇ 15ರಂದು ಮತ್ತೊಂದು ಆದೇಶ ಹೊರಡಿಸಿ, ಸಂಸ್ಥೆಯ ಆಡಳಿತ ಹಾಗೂ ಹಣಕಾಸು  ನಿರ್ವಹಣೆಗೆ ಸಂಬಂಧಿಸಿದ ಸಂಪೂರ್ಣ ಜವಾಬ್ದಾರಿಯನ್ನು ಆಡಳಿತಾಧಿಕಾರಿಗೆ ವಹಿಸಿದೆ. ನಿರ್ದೇಶಕರಿಗೆ ವಹಿಸಲಾಗಿದ್ದ ಸಾಮಾನ್ಯ ಆಡಳಿತಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ಆಡಳಿತಾಧಿಕಾರಿ ವ್ಯಾಪ್ತಿಗೆ ನೀಡಲಾಗಿದೆ. ಔಷಧಗಳ ಖರೀದಿ ಸೇರಿ ವಿವಿಧ ವಸ್ತುಗಳ ಸಂಗ್ರಹಣೆ ಹಾಗೂ ಖರೀದಿ, ಮಾನವ ಸಂಪನ್ಮೂಲ ನಿರ್ವಹಣೆಯ ಅಧಿಕಾರವನ್ನೂ ನಿರ್ದೇಶಕರಿಂದ ಕಸಿದುಕೊಳ್ಳಲಾಗಿದೆ. ಆರೋಗ್ಯ ಸೇವೆಗಳನ್ನೊಳಗೊಂಡ ಕ್ಲಿನಿಕಲ್ ವಿಷಯಗಳ ನಿರ್ವಹಣೆಯನ್ನು ಮಾತ್ರ ನಿರ್ದೇಶಕರಿಗೆ ವಹಿಸಲಾಗಿದೆ.

ಡಾ.ವಿ. ಲೋಕೇಶ್ ಅವರ ವಿರುದ್ಧ ಸಂಸ್ಥೆಯ ವೈದ್ಯರೇ ಅಧಿಕಾರ ದುರ್ಬಳಕೆ, ಅಕ್ರಮ ಸೇವಾ ಬಡ್ತಿ, ವೈದ್ಯಕೀಯ ನಿರ್ಲಕ್ಷ್ಯ ಸೇರಿ ವಿವಿಧ ಆರೋಪಗಳನ್ನು ಈ ಹಿಂದೆ ಮಾಡಿದ್ದರು. ಈ ದೂರುಗಳ ಬಗ್ಗೆ ತನಿಖೆ ನಡೆಸಿದ ಐಎಎಸ್ ಅಧಿಕಾರಿ ಅರುಂಧತಿ ಚಂದ್ರಶೇಖರ್ ನೇತೃತ್ವದ ಸಮಿತಿ, ವರದಿಯಲ್ಲಿ ಆಡಳಿತ ವ್ಯವಸ್ಥೆ ಕುಸಿದಿರುವ ಬಗ್ಗೆ ತಿಳಿಸಿತ್ತು.

ಉತ್ತಮ ಆಡಳಿತ ಒದಗಿಸಲು ಸಂಸ್ಥೆಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿದೆ. ಅವರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದ್ದು ಅವರೇ ಎಲ್ಲ ನಿರ್ಣಯ ಕೈಗೊಳ್ಳುತ್ತಾರೆ.
ಡಾ. ಸುಜಾತಾ ರಾಥೋಡ್, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕಿ

ಆಡಳಿತಾಧಿಕಾರಿಗೆ ನಿರ್ದೇಶಕರ ಕೊಠಡಿ 

ಸಂಸ್ಥೆಯ ಆಡಳಿತ ಹಣಕಾಸು ನಿರ್ವಹಣೆ ಸೇರಿ ಪ್ರಮುಖ ಜವಾಬ್ದಾರಿಗಳನ್ನು ಆಡಳಿತಾಧಿಕಾರಿಗೆ ನೀಡಿದ್ದರಿಂದ ಕೊಠಡಿಯನ್ನೂ ಅವರಿಗೇ ಬಿಟ್ಟುಕೊಡುವಂತೆ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ನಿರ್ದೇಶಕರಿಗೆ ಸೂಚಿಸಿದ್ದಾರೆ. ಪ್ರಸ್ತುತ ವೈದ್ಯಕೀಯ ಅಧೀಕ್ಷಕರು ಕಾರ್ಯನಿರ್ವಹಿಸುತ್ತಿರುವ ಕೊಠಡಿಯಲ್ಲಿ ನಿರ್ದೇಶಕರು ಪ್ರಾಧ್ಯಾಪಕರ ಕೊಠಡಿಯಲ್ಲಿ ವೈದ್ಯಕೀಯ ಅಧೀಕ್ಷಕರು ಕಾರ್ಯನಿರ್ವಹಿಸುವಂತೆ ಆದೇಶ ಹೊರಡಿಸಿದ್ದಾರೆ. ಇದು ಕೂಡ ಸಂಘರ್ಷಕ್ಕೆ ಕಾರಣವಾಗಿದೆ.

ಅಂಕಿ–ಅಂಶಗಳು

863 ರೋಗಿಗಳ ಚಿಕಿತ್ಸೆಗೆ ಸಂಸ್ಥೆ ಹೊಂದಿರುವ ಬೆಡ್‌ಗಳು

1,767 ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ

1,400 ನಿತ್ಯ ಭೇಟಿ ನೀಡುವ ಸರಾಸರಿ ಹೊರರೋಗಿಗಳು

3 ಲಕ್ಷ ಸಂಸ್ಥೆಯಲ್ಲಿ ಪ್ರತಿವರ್ಷ ಚಿಕಿತ್ಸೆ ಪಡೆದುಕೊಳ್ಳುವವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT