ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾಸಿಪಾಳ್ಯ, ಕೆ.ಆರ್‌. ಮಾರುಕಟ್ಟೆ ಇನ್ನೊಂದು ತಿಂಗಳು ಬಂದ್

Last Updated 31 ಜುಲೈ 2020, 14:01 IST
ಅಕ್ಷರ ಗಾತ್ರ

ಬೆಂಗಳೂರು: ಕೆ.ಆರ್. ಮಾರುಕಟ್ಟೆ ಮತ್ತು ಕಲಾಸಿಪಾಳ್ಯ ಮಾರುಕಟ್ಟೆಗಳನ್ನು ಇನ್ನೂ ಒಂದು ತಿಂಗಳು ತೆರೆಯದಿರಲು ಬಿಬಿಎಂಪಿ ನಿರ್ಧರಿಸಿದೆ.

‘ಈ ಎರಡು ಮಾರುಕಟ್ಟೆಗಳಲ್ಲಿ ಸೋಂಕು ಉಲ್ಬಣವಾಗುತ್ತಿರುವ ಕಾರಣ ಜು.31ರವರೆಗೆ ಮಾರುಕಟ್ಟೆಗಳನ್ನು ಸೀಲ್‌ಡೌನ್ ಮಾಡಲಾಗಿತ್ತು. ಕಂಟೈನ್‌ಮೆಂಟ್ ವಲಯಗಳ ಲಾಕ್‌ಡೌನ್ ಅವಧಿಯನ್ನು ಆ.31ರವರೆಗೆ ಮುಂದುವರಿಸಲು ಕೇಂದ್ರ ಸರ್ಕಾರ ಆದೇಶಿಸಿರುವ ಹಿನ್ನೆಲೆಯಲ್ಲಿ ಈ ಮಾರುಕಟ್ಟೆಗಳಲ್ಲಿ ಆ.31ರವರೆಗೆ ಸೀಲ್‌ಡೌನ್ ಮುಂದುವರಿಸಲಾಗುತ್ತಿದೆ’ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಈ ಮಾರುಕಟ್ಟೆಗಳುನಾಲ್ಕು ತಿಂಗಳಿಂದಲೂ ಸೀಲ್‌ಡೌನ್ ಸ್ಥಿತಿಯಲ್ಲೇ ಇದ್ದು, ಇವುಗಳನ್ನು ನಂಬಿಕೊಂಡಿರುವ ಸಾವಿರಾರು ಜನರ ಜೀವನ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.

ಕೆ.ಆರ್. ಮಾರುಕಟ್ಟೆ ಒಂದರಲ್ಲೇ 2,200 ಅಂಗಡಿಗಳಿವೆ. ಹೂವು, ಹಣ್ಣು, ತರಕಾರಿ, ತೆಂಗಿನಕಾಯಿ, ಬಾಳೆ ಎಲೆ, ವೀಳ್ಯದೆಲೆ, ಕುಂಕುಮ, ಅಲ್ಯೂಮಿನಿಯಂ ಪಾತ್ರೆ, ಗ್ಯಾಸ್ ಸ್ಟವ್, ಸ್ಟೀಲ್ ಪಾತ್ರೆ,‍ದಿನಸಿ ಅಂಗಡಿ, ಬಟ್ಟೆ, ಪೇಪರ್, ಪುಸ್ತಕ, ಪ್ಲಾಸ್ಟಿಕ್ ಅಂಗಡಿಗಳು, ಕಾಂಡಿಮೆಂಟ್‌ ಸ್ಟೋರ್‌ಗಳು, ಮೀನು, ಮಾಂಸದ ಅಂಗಡಿಗಳು ಇಲ್ಲಿವೆ.

‘ಸಣ್ಣ ಅಂಗಡಿಗಳಲ್ಲಿ ಒಬ್ಬರು ಅಥವಾ ಇಬ್ಬರು ಕೆಲಸಗಾರರಿದ್ದರೆ, ಕೆಲವು ಅಂಗಡಿಗಳಲ್ಲಿ 30ರಿಂದ 40 ಕೆಲಸಗಾರರಿದ್ದಾರೆ. ಸರಾಸರಿ ಐವರು ಕೆಲಸಗಾರರು ಎಂದು ಪರಿಗಣಿಸಿದರೂ 11 ಸಾವಿರ ಮಂದಿ ಇಲ್ಲಿ ಜೀವನ ಕಟ್ಟಿಕೊಂಡಿದ್ದಾರೆ. ಅವರನ್ನು ಆಶ್ರಯಿಸಿರುವ ಕುಟುಂಬದಲ್ಲಿ ಕನಿಷ್ಠ 5 ಜನ ಎಂದರೂ 55 ಸಾವಿರ ಜನರಹಸಿವನ್ನೂ ಈ ಮಾರುಕಟ್ಟೆಯೇ ನೀಗಿಸಬೇಕಿದೆ’ ಎನ್ನುತ್ತಾರೆ ಕೆ.ಆರ್. ಮಾರುಕಟ್ಟೆ ವರ್ತಕರ ಸಂಘದ ಅಧ್ಯಕ್ಷ ದಿವಾಕರ್.

‘ಮಾರುಕಟ್ಟೆ ಹೊರಭಾಗದಲ್ಲಿ 1,200 ಬೀದಿಬದಿ ವ್ಯಾಪಾರಿಗಳಿದ್ದಾರೆ. ಅವರ ಜೀವನವೂ ಈಗ ದುಸ್ತರವಾಗಿದೆ. ಅಂದೇ ದುಡಿದು ತಿನ್ನಬೇಕಿದ್ದ ಸಣ್ಣಪುಟ್ಟ ವ್ಯಾಪಾರಿಗಳು ಮತ್ತು ಕೆಲಸಗಾರರ ಸ್ಥಿತಿ ಹೇಳತೀರದಾಗಿದೆ. ಕೊರೊನಾ ಸೋಂಕಿಗೆ ಹೆದರಿ ಸೀಲ್‌ಡೌನ್ ಮಾಡಲಾಗಿದೆ. ಆದರೆ, ಹಸಿವಿನಿಂದ ಸಾಯುವುದನ್ನು ತಪ್ಪಿಸುವವರು ಯಾರು’ ಎಂದು ಅವರು ಪ್ರಶ್ನಿಸಿದರು.

‘ಮಕ್ಕಳಿಗೆ ಊಟ, ಶಾಲೆಗೆ ಶುಲ್ಕ ಪಾವತಿಸಲು ಸಾಧ್ಯವಾಗದೆ ವ್ಯಾಪಾರಿಗಳು ಮತ್ತು ಕೆಲಸಗಾರರು ಪರದಾಡುತ್ತಿದ್ದಾರೆ. ದುಡಿಮೆ ಇಲ್ಲದ ಈ ಕಾಲದಲ್ಲಿ ಸಾಲವೂ ಹುಟ್ಟುತ್ತಿಲ್ಲ’ ಎಂದು ಅವರು ನೋವಿನಿಂದ ಹೇಳಿದರು.

‘ಕಲಾಸಿಪಾಳ್ಯ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರ ನಡೆಯುತ್ತದೆ. ಇಲ್ಲಿ ವಹಿವಾಟು ಬಂದ್ ಆಗಿರುವ ಕಾರಣ ರೈತರು ಮತ್ತು ಗ್ರಾಹಕರು ಇಬ್ಬರಿಗೂ ತೊಂದರೆಯಾಗಿದೆ. ಮನೆ ಮುಂದೆ ಬರುವ ದುಬಾರಿ ಬೆಲೆಯ ತರಕಾರಿ ಖರೀದಿ ಮಾಡಬೇಕಾದ ಅನಿವಾರ್ಯತೆ ಇದೆ’ ಎಂದರು.

‘ಸುರಕ್ಷತಾ ಕ್ರಮಗಳನ್ನು ಪಾಲಿಸಿಕೊಂಡು ಮಾರುಕಟ್ಟೆಗಳನ್ನು ತೆರೆಯಲು ಸರ್ಕಾರ ಅವಕಾಶ ನೀಡಬೇಕು. ಸಮಸ್ಯೆ ಮನವರಿಕೆ ಮಾಡಲು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲು ಉದ್ದೇಶಿಸಿದ್ದೇವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT