ಬುಧವಾರ, ಜುಲೈ 28, 2021
23 °C
ಸುರಕ್ಷತಾ ಕ್ರಮ ಪಾಲಿಸುವುದಾದರೆ ಮಾತ್ರ ವಹಿವಾಟಿಗೆ ಅನುಮತಿ– ಪಾಲಿಕೆ ಷರತ್ತು

ಕೆ.ಆರ್‌.ಮಾರುಕಟ್ಟೆ, ರಸೆಲ್‌ ಮಾರುಕಟ್ಟೆ ಜೂನ್ 8ರಿಂದ ಪುನರಾರಂಭ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಪ್ರಮುಖ ಮಾರುಕಟ್ಟೆಗಳಾದ ಕೆ.ಆರ್.ಮಾರುಕಟ್ಟೆ, ರಸೆಲ್‌ ಮಾರುಕಟ್ಟೆ, ಕಲಾಸಿಪಾಳ್ಯ ಮಾರುಕಟ್ಟೆಗಳಲ್ಲಿ ಜೂನ್‌ 8ರಿಂದ ವಹಿವಾಟು ಪುನರಾರಂಭ ಮಾಡಲು ಬಿಬಿಎಂಪಿ ಸಹಮತ ಸೂಚಿಸಿದೆ.

ಈ ಮಾರುಕಟ್ಟೆಗಳ ವ್ಯಾಪಾರಿಗಳ ಸಂಘದ ಪ್ರಮುಖರ ಜೊತೆ ಮೇಯರ್‌ ಎಂ.ಗೌತಮ್‌ ಕುಮಾರ್‌, ಸಂಸದ ಪಿ.ಸಿ.ಮೋಹನ್‌ ಹಾಗೂ ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್ ಕುಮಾರ್‌ ಜೊತೆ ಸಭೆ ನಡೆಸಿದರು.

ಈ ಮಾರುಕಟ್ಟೆಗಳಲ್ಲಿ ವಹಿವಾಟು ಸ್ಥಗಿತಗೊಂಡು 70ದಿನಗಳು ಕಳೆದಿವೆ. ಇಲ್ಲಿನ ವ್ಯಾಪಾರಿಗಳು ತೀವ್ರ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ.

‘ಜೂನ್‌ 8ರ ಬಳಿಕ ವಹಿವಾಟು ಪುನರಾರಂಭಿಸಲು ಮೇಯರ್‌ ಹಾಗೂ ಪಾಲಿಕೆ ಆಯುಕ್ತರು ಒಪ್ಪಿದ್ದಾರೆ. ಕೆಲವೊಂದು ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಸೂಚಿಸಿದ್ದಾರೆ’ ಎಂದು ಕೆ.ಆರ್.ಮಾರುಕಟ್ಟೆಯ ಹಣ್ಣು ಮತ್ತು ತರಕಾರಿ ಸಗಟು ವ್ಯಾಪಾರಿಗಳ ಸಂಘದ ಅಧ್ಯಕ್ಷ ಆರ್.ವಿ. ಗೋಪಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಾರುಕಟ್ಟೆಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ವ್ಯಾಪಾರ ನಡೆಸುವಾಗ ಜನ ಸುರಕ್ಷಿತ ಅಂತರ ಕಾಪಾಡಲು ಕ್ರಮ ಕೈಗೊಳ್ಳಬೇಕು. ಕಸ ವಿಲೇವಾರಿ ಕ್ರಮಬದ್ಧವಾಗಿ ನಡೆಸಲು ಸಹಕರಿಸಬೇಕು. ಹಾಗಿದ್ದರೆ ಮಾತ್ರ ವಹಿವಾಟು ಆರಂಭಕ್ಕೆ ಅವಕಾಶ ಕಲ್ಪಿಸುವುದಾಗಿ ಬಿಬಿಎಂಪಿ ಆಯುಕ್ತರು ಸೂಚಿಸಿದ್ದಾರೆ. ಈ ಷರತ್ತುಗಳಿಗೆ ಒಪ್ಪಿದ್ದೇವೆ’ ಎಂದರು. 

‘ಬಾಕಿ ಬಾಡಿಗೆ ಪಾವತಿಸಬೇಕು, ಮಳಿಗೆಗಳ ಬಾಡಿಗೆ ಕರಾರನ್ನು ನವೀಕರಿಸಬೇಕು ಎಂದೂ ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ. ಇದಕ್ಕೆ ಸಮಯಾವಕಾಶ ಕೋರಿದ್ದೇವೆ’ ಎಂದು ತಿಳಿಸಿದರು.

‘ರಸೆಲ್‌ ಮಾರುಕಟ್ಟೆ ಹಾಗೂ ಅದರ ಆಸುಪಾಸಿನ ಏಳೆಂಟು ಮಾರುಕಟ್ಟೆಗಳಲ್ಲಿ ಜೂನ್ 6ರಿಂದ ವಹಿವಾಟು ನಡೆಸಲು ಒಪ್ಪಿಗೆ ನೀಡಲು ಮೇಯರ್‌ ಹಾಗೂ ಆಯುಕ್ತರು ಸಹಮತ ವ್ಯಕ್ತಪಡಿಸಿದ್ದರು. ಮಾರುಕಟ್ಟೆಯನ್ನು ಸ್ವಚ್ಛಗೊಳಿಸುವುದಕ್ಕೆ ಎರಡು ದಿನಗಳು ಬೇಕಾಗುತ್ತದೆ. ನಾವು ಇದೇ 8 ರಿಂದ ವಹಿವಾಟು ಆರಂಭಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದು ರಸೆಲ್‌ ಮಾರುಕಟ್ಟೆ ವ್ಯಾಪಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಇದ್ರಿಸ್ ಚೌಧರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕಲಾಸಿಪಾಳ್ಯ ಮಾರುಕಟ್ಟೆಯನ್ನು ಸಿಂಗೇನ ಅಗ್ರಹಾರಕ್ಕೆ ಬಿಬಿಎಂಪಿ ಎರಡು ತಿಂಗಳ ಹಿಂದೆ ಸ್ಥಳಾಂತರಿಸಿತ್ತು. ಅಲ್ಲಿ ಮೂಲಸೌಕರ್ಯಗಳಿಲ್ಲ. ಹಾಗಾಗಿ ಮತ್ತೆ ಕಲಾಸಿಪಾಳ್ಯದಲ್ಲೇ ಸಗಟು ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಬೇಕು ಎಂದು ವ್ಯಾಪಾರಿಗಳು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು