ಭಾನುವಾರ, ಏಪ್ರಿಲ್ 11, 2021
33 °C

₹ 48 ಕೋಟಿ ವಂಚನೆ; ಸಿಕ್ಕಿದ್ದು ಮಾತ್ರ ₹11.50 ಲಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಕೃಷಿ ಮಾರಾಟ ಮಂಡಳಿಯ ₹ 48 ಕೋಟಿ ನಿಶ್ಚಿತ ಠೇವಣಿ (ಎಫ್‌ಡಿ) ಹಣವನ್ನು ಬೇರೆ ಖಾತೆಗಳಿಗೆ ವರ್ಗಾಯಿಸಿ ವಂಚಿಸಿದ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಬಂಧಿಸಿರುವ 8 ಆರೋಪಿಗಳ ಬಳಿ ₹ 11.50 ಲಕ್ಷ ಮಾತ್ರ ಸಿಕ್ಕಿದೆ.

ವಂಚನೆ ಸಂಬಂಧ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಕರಿಗೌಡ ಅವರು ಕಮರ್ಷಿಯಲ್ ಸ್ಟ್ರೀಟ್ ಠಾಣೆಗೆ ನೀಡಿರುವ ದೂರು ಆಧರಿಸಿ ಸಿಸಿಬಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಆಕಾಶ್ ಎಂಬಾತ ತಲೆಮರೆಸಿಕೊಂಡಿದ್ದಾನೆ. ವಂಚನೆಯ ಉಳಿದ ಹಣ ಎಲ್ಲಿದೆ? ಎಂಬುದು ಆತನಿಗೆ ಗೊತ್ತಿರುವುದಾಗಿ ಸಿಸಿಬಿ ಮೂಲಗಳು ತಿಳಿಸಿವೆ.

‘ಪ್ರಕರಣ ಸಂಬಂಧ ಸಿಂಡಿಕೇಟ್ ಬ್ಯಾಂಕ್‌ನ ಉತ್ತರಹಳ್ಳಿ ಶಾಖೆಯ ಸಹಾಯಕ ವ್ಯವಸ್ಥಾಪಕ ಜಯರಾಮ್, ಮಂಡಳಿಯ ಮಾರುಕಟ್ಟೆ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ (ಡಿಜಿಎಂ) ಸಿದ್ದಗಂಗಯ್ಯ, ಭರತ್, ಮುಸ್ತಫಾ, ಮಹಮ್ಮದ್ ಅಸ್ಲಾಂ, ರೇವಣ್ಣ, ಮಂಡಳಿಯ ನಿವೃತ್ತ ಉಪ ನಿಯಂತ್ರಕ ಲಕ್ಷ್ಮಣ ಹಾಗೂ ಆಂಧ್ರ ಬ್ಯಾಂಕ್‌ನ ವ್ಯವಸ್ಥಾಪಕ ಸಿರಿಲ್ ಎಂಬುವರನ್ನು ಈಗಾಗಲೇ ಬಂಧಿಸಲಾಗಿದೆ’ ಎಂದು ಮೂಲಗಳು ಹೇಳಿವೆ.

ವಿಲ್ಲಾ ನಿರ್ಮಾಣಕ್ಕೆ ತಯಾರಿ: ‘ವಂಚನೆಯಿಂದ ಬಂದ ಹಣದಲ್ಲೇ ಆರೋಪಿಗಳು ಚೆನ್ನೈನಲ್ಲಿ ವಿಲ್ಲಾ ನಿರ್ಮಾಣ ಮಾಡಲು ತಯಾರಿ ನಡೆಸಿದ್ದರು. ಈ ಸಂಬಂಧ ಆರೋಪಿಗಳು ಹೇಳಿಕೆ ನೀಡಿದ್ದಾರೆ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

‘ಹಣ ವರ್ಗಾವಣೆ ಮಾಡಿದ್ದ ವಿವಿಧ ಬ್ಯಾಂಕ್‌ಗಳ 106 ನಕಲಿ ಖಾತೆಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಮೂಲಗಳು ಹೇಳಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು