ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ನಗರದಾದ್ಯಂತ ಶ್ರೀಕೃಷ್ಣನ ಆರಾಧನೆ

ರಾಧಾ–ಕೃಷ್ಣರ ಮೂರ್ತಿಗಳಿಗೆ ವಿಶೇಷ ಅಲಂಕಾರ * ಉತ್ಸವ ಮೂರ್ತಿಗಳಿಗೆ ಉಯ್ಯಾಲೆ ಸೇವೆ
Last Updated 30 ಆಗಸ್ಟ್ 2021, 21:41 IST
ಅಕ್ಷರ ಗಾತ್ರ

ಬೆಂಗಳೂರು: ನಗರದಾದ್ಯಂತ ಶ್ರೀಕೃಷ್ಣನ ಜನ್ಮಾಷ್ಟಮಿಯನ್ನು ಸಡಗರದಿಂದ ಸೋಮವಾರ ಆಚರಿಸಲಾಯಿತು. ಭಾನುವಾರದಿಂದಲೇ ಆರಂಭವಾಗಿದ್ದ ಉತ್ಸವವು ಎರಡನೇ ದಿನವೂ ಮುಂದುವರಿಯಿತು.

ದೇವಾಲಯಗಳಲ್ಲಿ ಶ್ರೀಕೃಷ್ಣ–ರಾಧೆ, ಕೃಷ್ಣ–ಬಲರಾಮರ ಮೂರ್ತಿಗಳಿಗೆ ಪುಷ್ಪಾಲಂಕಾರ ಮಾಡಿ, ವಿಶೇಷ ಪೂಜೆ ಮಾಡಲಾಯಿತು. ಕೆಲವರು ಮನೆಗಳಲ್ಲಿ ಶ್ರೀಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಿ, ವಿಶೇಷ ಪೂಜೆ ಮಾಡಿ ನೈವೇದ್ಯ ಅರ್ಪಿಸಿದರು.

ಇಸ್ಕಾನ್‌ನಲ್ಲಿ ವೈಭವ:

ನಗರದ ಇಸ್ಕಾನ್‌ನ ಹರೇಕೃಷ್ಣ ಗಿರಿಯಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ವೈಭವದಿಂದ ಆಚರಿಸಲಾಯಿತು. ರಾಧಾಕೃಷ್ಣಚಂದ್ರರ ಮೂರ್ತಿಗಳನ್ನು ವಜ್ರಾಭರಣಗಳಿಂದ, ಚಿನ್ನದ ನೇಯ್ಗೆಯುಳ್ಳ ಚಿತ್ತಾಕರ್ಷಕ ವಸ್ತ್ರಗಳಿಂದ ಅಲಂಕರಿಸಲಾಗಿತ್ತು.

ಭಗವಂತನ ಅವತಾರವನ್ನು ಸಂಭ್ರಮಿಸಲು ಮಂದಿರದ ಶ್ರೀರಾಧಾಕೃಷ್ಣ, ಕೃಷ್ಣ ಬಲರಾಮ ವಿಗ್ರಹಗಳನ್ನು ಸುಂದರವಾಗಿ ಅಲಂಕರಿಸಲಾಗಿತ್ತು. ಈ ಎರಡೂ ದಿನ ಶ್ರೀ ರಾಧಾಕೃಷ್ಣರಿಗೆ ಬೆಳಿಗ್ಗೆ 4.30ಕ್ಕೆ ಮಹಾಮಂಗಳಾರತಿ ಮತ್ತು ಕೀರ್ತನೆಗಳಿಂದ ಪೂಜಾ ಕಾರ್ಯಕ್ರಮಗಳು ಪ್ರಾರಂಭವಾಗಿ ನಂತರ ಪಂಚಾಮೃತ, ಪಂಚಗವ್ಯ, ಪುಷ್ಪೋದಕ, ಫಲೋದಕಗಳಿಂದ ಅಭಿಷೇಕ ಮಾಡಲಾಯಿತು.

ಕೃಷ್ಣನಿಗೆ ಪ್ರಿಯವಾದ 108 ಭಕ್ಷ್ಯಗಳ ನೈವೇದ್ಯಗಳ ಸೇವೆ ಸಲ್ಲಿಸಲಾಯಿತು. ಇಡೀ ಮಂದಿರವನ್ನು ಬಗೆಬಗೆಯ ಸುಗಂಧ ಭರಿತ ಹೂವಿನ ಮಾಲೆಗಳಿಂದ ಅಲಂಕರಿಸಲಾಗಿತ್ತು.

ದೇವಸ್ಥಾನದ ಗೋಶಾಲೆಯಲ್ಲಿ ಗೋಪೂಜೆ ಮಾಡಲಾಯಿತು ಮತ್ತು ಶ್ರೀ ರಾಧಾಕೃಷ್ಣಚಂದ್ರ ಉತ್ಸವ ಮೂರ್ತಿಗಳಿಗೆ ಉಯ್ಯಾಲೆ ಸೇವೆ, ತೆಪ್ಪೋತ್ಸವ ನಡೆಯಿತು.ನಾಟಕಕಾರ ಚಂದ್ರಶೇಖರ ಕಂಬಾರ ಮತ್ತು ಜೆಡಿಎಸ್ ಮುಖಂಡ ಚೆಲುವರಾಯ ಸ್ವಾಮಿ ಸೇರಿದಂತೆ ಹಲವು ಗಣ್ಯರು ದೇವರಿಗೆ ಉಯ್ಯಾಲೆ ಸೇವೆ ನೆರವೇರಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ:

ಪೂರ್ಣಪ್ರಜ್ಞ ನಗರದ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಾನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.ಭಾನುವಾರ ಮತ್ತು ಸೋಮವಾರ ಅಭಿಷೇಕ, ವಿಶೇಷ ಪೂಜೆ, ಅಲಂಕಾರ, ತುಳಸಿ ಅರ್ಚನೆ, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ನೇತೃತ್ವ ವಹಿಸಿದ್ದರು.

ಶ್ರೀಗಳ ನೇತೃತ್ವದಲ್ಲಿ ಮಂಗಳವಾರವೂ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.ಸಂಜೆ 5.30ಕ್ಕೆ ವಿಟ್ಲಪಿಂಡಿ ರಥೋತ್ಸವ, ರಾತ್ರಿ 8.30ಕ್ಕೆ ರಂಗಪೂಜೆ, ದೀಪಾರಾಧನೆ, ಮಹಾಮಂಗಳಾರತಿ, ತೊಟ್ಟಿಲು ಪೂಜೆ, ಮಹಾ ಮಂಗಳಾರತಿ ನಡೆಯಲಿವೆ.

ಪೂಜೆ–ಪ್ರವಚನ:

ಬಸವನಗುಡಿಯಲ್ಲಿರುವ ಶ್ರೀ ಗೋವರ್ಧನಗಿರಿ ಗುಹಾಲಯ ಕ್ಷೇತ್ರ, ಉಡುಪಿ ಶ್ರೀ ಪುತ್ತಿಗೆ ಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಡಗರದಿಂದ ಆಚರಿಸಲಾಯಿತು. ಅಲಂಕಾರ ಪೂಜೆ, ಸುಪ್ರಭಾತ ನಾದಸ್ವರ, ತುಳಸಿ ಅರ್ಚನೆ, ಮಹಾಪೂಜೆ ನೆರವೇರಿತು.

ಸಂಜೆ ಶ್ರೀ ಅಗ್ನಿಹೋತ್ರಿ ವೇಣುಗೋಪಾಲಾಚಾರ್ಯ ಅವರಿಂದ ‘ಶ್ರೀ ಕೃಷ್ಣ ಸಂದೇಶ', ಪೇಜಾವರ ಪೀಠಾಧಿಪತಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರಿಂದ ಅನುಗ್ರಹ ಸಂದೇಶ ನಡೆಯಿತು.

ಗೋವರ್ಧನ ಗಿರಿಯಲ್ಲಿ ಮಂಗಳವಾರಶ್ರೀ ಕೃಷ್ಣ ಲೀಲೋತ್ಸವ ನಡೆಯಲಿದೆ. ಭಕ್ತರು ಆನ್‌ಲೈನ್‌ ಮೂಲಕವೂ ಪೂಜಾ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು.

ತಿಂಡಿ–ತಿನಿಸು:

ನಗರದ ಹಲವರು ತಮ್ಮ ಮನೆಗಳಲ್ಲಿ ವಿಶಿಷ್ಟವಾಗಿ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ಕೃಷ್ಣನ ವಿಗ್ರಹವಿಟ್ಟು, ಅವನಿಗೆ ಪ್ರಿಯವಾದ ಚಕ್ಕುಲಿ, ಕೋಡುಬಳೆ, ರವೆ ಉಂಡೆ, ಕರ್ಜಿಕಾಯಿ, ಒಬ್ಬಟ್ಟು ಇತ್ಯಾದಿಗಳನ್ನು ನೈವೇದ್ಯಕ್ಕೆ ಇಟ್ಟು ಪೂಜೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT