ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಗೆ ಹೋಗುವ ಮುಖ್ಯಮಂತ್ರಿ ಬಗ್ಗೆ ನಾನೇಕೆ ಮಾತನಾಡಲಿ?

ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯ ಮಟ್ಟದ ಸಮಾವೇಶದಲ್ಲಿ ಬಿ.ಎಸ್. ಯಡಿಯೂರಪ್ಪ ಟಾಂಗ್
Last Updated 4 ಏಪ್ರಿಲ್ 2018, 13:01 IST
ಅಕ್ಷರ ಗಾತ್ರ

ಕಾಗಿನೆಲೆ (ಹಾವೇರಿ ಜಿಲ್ಲೆ): ‘ಮುಂದಿನ 42 ದಿನಗಳಲ್ಲಿ ಮನೆಗೆ ಹೋಗುವ ಮುಖ್ಯಮಂತ್ರಿ ಬಗ್ಗೆ ನಾನೇಕೆ ಟೀಕೆ ಮಾಡಲಿ?’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಪರೋಕ್ಷವಾಗಿ ಸಿ.ಎಂ. ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದರು.ಇಲ್ಲಿ ಮಂಗಳವಾರ ಬಿಜೆಪಿ ಆಯೋಜಿಸಿದ ರಾಜ್ಯಮಟ್ಟದ ಹಿಂದುಳಿದ ವರ್ಗಗಳ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಇನ್ನು 42 ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿದ್ದು, ಈ ಮಾತು ಸೂರ್ಯ ಮತ್ತು ಚಂದ್ರರು ಇರುವಷ್ಟೇ ಸತ್ಯ’ ಎಂದ ಅವರು, ಅಧಿಕಾರಕ್ಕೆ ಬಂದರೆ ನೀರಾವರಿ ಯೋಜನೆಗಳಿಗೆ ₹ 1 ಲಕ್ಷ ಕೋಟಿ ಅನುದಾನ ಮೀಸಲು ಇಡುವ ಮೂಲಕ ಸಮಗ್ರ ಅಭಿವೃದ್ಧಿ ಕೈಗೊಳ್ಳುತ್ತೇನೆ’ ಎಂದರು. ‘ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ, ಕನಕ ಜಯಂತಿ ಘೋಷಣೆ, ಕಾಗಿನೆಲೆಯ ಅಭಿವೃದ್ಧಿ ಕಾರ್ಯಗಳು ನನ್ನ ಅವಧಿಯಲ್ಲಿ ಆಗಿದೆಯೇ ವಿನಃ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದ ಬಳಿಕ ಅಲ್ಲ’ ಎಂದ ಅವರು, ‘ಮುಂದಿನ ಅವಧಿಯಲ್ಲಿ ಸ್ವಚ್ಛ, ದಕ್ಷ ಮತ್ತು ಪ್ರಾಮಾಣಿಕ ಆಡಳಿತ ನೀಡುತ್ತೇನೆ’ ಎಂದು ಭರವಸೆ ನೀಡಿದರು.

ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಮಾತನಾಡಿ, ‘ಕುಲ ಕುಲ ಕುಲ ಎಂದು ಹೊಡೆದಾಡದಿರಿ ಎಂದು ಹೇಳಿದ ಕನಕರ ಕಾಗಿನೆಲೆಯಲ್ಲಿ ನಾವೆಲ್ಲ ಒಗ್ಗಟ್ಟಿನಿಂದ ಸೇರಿದ್ದೇವೆ. ಸಂಕುಚಿತ ಭಾವನೆಗಳನ್ನು ಮರೆತು ಎಲ್ಲರೂ ಒಂದಾಗಿದ್ದೇವೆ. ಆದರೆ, ಇಂತಹ ಪುಣ್ಯ ನೆಲಕ್ಕೆ ಸಿ.ಎಂ. ಸಿದ್ದರಾಮಯ್ಯ ಎಷ್ಟು ಬಾರಿ ಬಂದಿದ್ದಾರೆ? ಎಂದು ಪ್ರಶ್ನಿಸಿದರು. ‘ಸಂಗೊಳ್ಳಿ ರಾಯಣ್ಣನವರ ನಂದಗಢಕ್ಕೆ ಒಂದು ಬಾರಿಯೂ ಹೋಗಿಲ್ಲ’ ಎಂದು ದೂರಿದರು.‘ಇದು ತನ್ನ ಕೊನೆಯ ಚುನಾವಣೆ’ ಎಂದು ಸಿ.ಎಂ. ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಹಾಗೂ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಇದೇ ಕೊನೆಯು ಚುನಾವಣೆಯಾಗಿದೆ’ ಎಂದರು.‘ಸಿದ್ದರಾಮಯ್ಯ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಬಿ.ಎಸ್. ಯಡಿಯೂರಪ್ಪ, ಅಮಿತ್ ಶಾ ಹಾಗೂ ನರೇಂದ್ರ ಮೋದಿ ಅವರನ್ನೇ ಟೀಕಿಸುತ್ತಾರೆ. ಸಿದ್ದರಾಮಯ್ಯ ಅವರು ಸಚಿವ ಮಹದೇವಪ್ಪ ಜೊತೆ ಸೇರಿ ಮರಳು ಲೂಟಿ ಹೊಡೆದ ವಿಚಾರ ನಾಡಿಗೆ ಗೊತ್ತಿದೆ. ಬಡವರಿಗೆ ಸೂರು ಕಟ್ಟಲೂ ಮರಳು ಇಲ್ಲದಂತೆ ಮಾಡಿದ್ದಾರೆ’ ಎಂದು ದೂರಿದರು.‘ಹಿಂದುಳಿದ ಮತ್ತು ದಲಿತ 36 ಮಠಗಳು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರಲು ಕಾಯುತ್ತಿವೆ. ಹಿಂದುಳಿದ ಸಮುದಾಯಗಳಿಗೆ ಪಂಗನಾಮ ಹಾಕಿದ ಸಿದ್ದರಾಮಯ್ಯಗೆ ನಾಮ ಹಾಕಲು ಜನತೆ ಕಾಯುತ್ತಿದ್ದಾರೆ’ ಎಂದರು.

ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ ಮಾತನಾಡಿ, ‘ಸಿದ್ದರಾಮಯ್ಯ ಹೇಳಿಕೆಗಳು ಉತ್ತರ ಕುಮಾರನ ಜಂಭದಂತೆ. ಅವರೊಬ್ಬ ನಕಲಿ ಹಿಂದುಳಿದ ನಾಯಕ’ ಎಂದರು.

ಸಂಸದ ಶ್ರೀರಾಮುಲು ಮಾತನಾಡಿ, ‘ಹಿಂದುಳಿದ ವರ್ಗಗಳನ್ನು 650 ವರ್ಷಗಳ ಕಾಲ ಮುಸ್ಲಿಂ ದೊರೆಗಳು ಹಾಗೂ 300 ವರ್ಷಗಳ ಕಾಲ ಬ್ರಿಟಿಷರು ಶೋಷಿಸಿದರು. ಸ್ವಾತಂತ್ರ್ಯ ಬಳಿಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನಿರ್ಲಕ್ಷಿಸಿತು. ಹೀಗಾಗಿ ಹಿಂದುಳಿದ ವರ್ಗಗಳು ಇನ್ನಷ್ಟು ಹಿಂದುಳಿಯಿತು’ ಎಂದರು. ‘ಸಿದ್ದರಾಮಯ್ಯ ಅವರು ಕೋಮು ಮತ್ತು ಜಾತಿ ರಾಜಕಾರಣ ಮಾಡುತ್ತಿದ್ದಾರೆ ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್, ಶಾಸಕರಾದ ಯು.ಬಿ. ಬಣಕಾರ, ಬಸವರಾಜ ಬೊಮ್ಮಾಯಿ, ಸಂಸದರಾದ ಪ್ರಹ್ಲಾದ್ ಜೋಶಿ, ಶಿವಕುಮಾರ್ ಉದಾಸಿ, ಜಿ. ಸಿದ್ದೇಶ್ವರ, ಬಿಜೆಪಿ ಮುಖಂಡರಾದ ಕುಮಾರ ಬಂಗಾಪ್ಪ, ಎನ್‌. ರವಿ ಕುಮಾರ್, ಸಿ.ಎಂ.ಉದಾಸಿ, ವೀರಯ್ಯ, ಹುಲಿನಾಯ್ಕ, ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್, ವಿರೂಪಾಕ್ಷಪ್ಪ ಬಳ್ಳಾರಿ, ಮಾ. ನಾಗರಾಜ, ಹರತಾಳು ಹಾಲಪ್ಪ, ನೆಹರೂ ಓಲೇಕಾರ, ವಿರೂಪಾಕ್ಷಪ್ಪ ಹಾಗೂ ಮಾ. ನಾಗರಾಜ ಇದ್ದರು.

ಬಿಜೆಪಿ ಸೇರದ ಆರ್. ಶಂಕರ್

ಕಾಗಿನೆಲೆಯಲ್ಲಿ ಮಂಗಳವಾರ ನಡೆದ ಬಿಜೆಪಿ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ರಾಣೆಬೆನ್ನೂರು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಆರ್. ಶಂಕರ್ ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹಗಳು ಸುಳ್ಳಾದವು. ಶಂಕರ್ ಅವರು ಬಿಜೆಪಿ ಸೇರ್ಪಡೆಗೊಳ್ಳಲಿಲ್ಲ.‘ಏಪ್ರಿಲ್ 8ರ ಬಳಿಕ ನನ್ನ ನಿರ್ಧಾರ ಪ್ರಕಟಿಸುತ್ತೇನೆ’ ಎಂದು ಆರ್. ಶಂಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಡ್ರೋಣ್‌ ವಶಕ್ಕೆ ಪಡೆದ ಪೊಲೀಸರು

ಅಮಿತ್ ಶಾ ಕಾರ್ಯಕ್ರಮದ ಶೂಟಿಂಗ್‌ಗೆ ಆಯೋಜಕರು ಬಳಿಸಿದ ‘ಡ್ರೋಣ್‌ ಕ್ಯಾಮೆರಾ’ ವನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ‘ಝಡ್’ ಶ್ರೇಣಿಯ ಭದ್ರತೆ ಹೊಂದಿದ ನಾಯಕರ ಕಾರ್ಯಕ್ರಮದಲ್ಲಿ ಡ್ರೋಣ್ ಕ್ಯಾಮೆರಾ ಬಳಸಬಾರದು ಎಂದು ವಿಮಾನಯಾನ ನಿರ್ದೇಶ
ನಾಲಯ ಮಾರ್ಚ್ 2017ರಲ್ಲಿ ಆದೇಶ ಹೊರಡಿಸಿದೆ. ಅದರನ್ವಯ ವಶಪಡಿಸಿಕೊಂಡಿದ್ದು, ಕಾರ್ಯಕ್ರಮದ ಬಳಿಕ ವಾಪಾಸ್ ನೀಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಂ ‘ಪ್ರಜಾವಾಣಿ’ಗೆ ತಿಳಿಸಿದರು.

**

ಚುನಾವಣೆ ಬಳಿಕ ವಿಧಾನಸೌಧದಲ್ಲಿ ಬಿಜೆಪಿ ‘ಇನ್’ (ಒಳಗೆ) ಹಾಗೂ ಕಾಂಗ್ರೆಸ್ ‘ಔಟ್’ (ಹೊರಗೆ) ಆಗಲಿದೆ – ಕೆ.ಎಸ್. ಈಶ್ವರಪ್ಪ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT