ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೆ.ಆರ್.ಪುರ: ನ್ಯಾಯಾಲಯ ಸ್ಥಾಪನೆ ಮರೀಚಿಕೆ’

Last Updated 20 ಅಕ್ಟೋಬರ್ 2021, 19:53 IST
ಅಕ್ಷರ ಗಾತ್ರ

ಕೆ.ಆರ್.ಪುರ: ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳ ಶೀಘ್ರ ವಿಲೇವಾರಿ ಹಾಗೂ ಸ್ಥಳೀಯ ಕಕ್ಷಿದಾರರಿಗೆ ಸಕಾಲದಲ್ಲಿ ನ್ಯಾಯ ಒದಗಿಸಲು ಬೆಂಗಳೂರು ಪೂರ್ವ ತಾಲ್ಲೂಕಿನ ಕೆ.ಆರ್.ಪುರ ಕೇಂದ್ರ ಸ್ಥಾನದಲ್ಲಿ ನ್ಯಾಯಾಲಯ ಸ್ಥಾಪನೆ ಇನ್ನೂ ಮರೀಚಿಕೆಯಾಗಿ ಉಳಿದಿದೆ.

ಬೆಂಗಳೂರು ಪೂರ್ವ ತಾಲ್ಲೂಕಿನ ಕೆ.ಆರ್.ಪುರ, ಬಿದರಹಳ್ಳಿ ಹಾಗೂ ವರ್ತೂರು ಮೂರು ಕಂದಾಯ ವೃತ್ತವನ್ನೊಳಗೊಂಡ ಕೆ.ಆರ್.ಪುರದಲ್ಲಿ ನ್ಯಾಯಾಲಯ ಸ್ಥಾಪಿಸುವಂತೆ 2004ರಫೆ.27ರಲ್ಲಿ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿ ನ್ಯಾಯಾಲಯ ಕಾರ್ಯಾರಂಭಕ್ಕೆ ಸಮ್ಮತಿ ಸೂಚಿಸಿತ್ತು. ಆದರೂ, ಇದುವರೆಗೆ ನ್ಯಾಯಾಲಯ ಕಾರ್ಯಾಚರಣೆ ಆರಂಭಿಸಿಲ್ಲ.

ಕೆ.ಆರ್‌.ಪುರ ಸಂತೆ ಮೈದಾನದಲ್ಲಿದ್ದ ಉಪನೊಂದಣಾಧಿಕಾರಿ ಕಚೇರಿಯನ್ನು ಬೇರೆಡೆಗೆ ಸ್ಥಳಾಂತರಿಸುವ ಮೂಲಕ ಹಳೆಯ ಕಟ್ಟಡವನ್ನು ₹60 ಲಕ್ಷ ವೆಚ್ಚದಲ್ಲಿ ನ್ಯಾಯಾಲಯ ಅಭಿವೃದ್ಧಿಪಡಿಸಲಾಗಿತ್ತು. ಅಲ್ಲೂ ನ್ಯಾಯಾಲಯ ಕಾರ್ಯನಿರ್ವಹಿಸದೆ ಸಾರ್ವಜನಿಕರಿಗೆ ನಿರಾಸೆ ಉಂಟಾಗಿತ್ತು.

ಬೆಂಗಳೂರು ಪೂರ್ವ ತಾಲ್ಲೂಕು 2001ರಲ್ಲಿ ರಚನೆಯಾಗಿದೆ. ಐಟಿಐನ ಮೂರು ಎಕರೆಯನ್ನು 99 ವರ್ಷಗಳಿಗೆ ಗುತ್ತಿಗೆ ಪಡೆದುಕೊಂಡು ಅದರಲ್ಲಿ ಒಂದೂವರೆ ಎಕರೆಯಲ್ಲಿ ತಾಲ್ಲೂಕು ಕಚೇರಿ ನಿರ್ಮಿಸಲಾಗಿದೆ. ಉಳಿದ ಜಾಗವನ್ನು ನ್ಯಾಯಾಲಯ ಸ್ಥಾಪನೆಗೆ ಮೀಸಲಿಡಲಾಗಿದೆ.

ತಾಲ್ಲೂಕು ಕಚೇರಿ ಕಟ್ಟಡದಲ್ಲಿ ದಕ್ಷಿಣ ವಲಯದ ಕಚೇರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಹಲವು ಸರ್ಕಾರಿ ಕಚೇರಿಗಳು ಬೇರೆಡೆಗೆ ಸ್ಥಳಾಂತರಗೊಂಡಿವೆ. ತಾಲ್ಲೂಕು ಕಚೇರಿ ಕಟ್ಟಡದ ನೆಲ ಮಹಡಿಯಲ್ಲಿ ಸದ್ಯದ ಮಟ್ಟಿಗೆ ಕಾರ್ಯನಿರ್ವಹಿಸಲು ಜಿಲ್ಲಾ ನ್ಯಾಯಾಧೀಶರು ಆದೇಶ ನೀಡಿದ್ದಾರೆ. ಅಗತ್ಯ ಮೂಲಸೌಕರ್ಯಗಳನ್ನೊಳಗೊಂಡ ನ್ಯಾಯಾಲಯದ ನಿರ್ಮಾಣ ಕಾಮಗಾರಿ ಆರೇಳು ವರ್ಷಗಳಿಂದ ನಡೆಯುತ್ತಿದೆ. ಇದುವರೆಗೆ ಮುಗಿಯುವ ಹಂತಕ್ಕೆ ಬಂದಿಲ್ಲ.

ತಾಲ್ಲೂಕು ಕಚೇರಿ ನಿರ್ಮಾಣವಾಗಿ ಹಲವು ವರ್ಷ ಕಳೆದಿದೆ. ಬಹಳ ಹಿಂದೆಯೇ ಪೂರ್ವ ತಾಲ್ಲೂಕಿನಲ್ಲಿ ನ್ಯಾಯಾಲಯ ಆರಂಭವಾಗಬೇಕಿತ್ತು. ಸರ್ಕಾರದ ವಿಳಂಬ ನೀತಿಯಿಂದಾಗಿ ನಾಗರಿಕರು ನ್ಯಾಯಕ್ಕಾಗಿ ಬೆಂಗಳೂರು ಹೃದಯ ಭಾಗಕ್ಕೆ ಅಲೆದಾಡುವ ಸ್ಥಿತಿ ಮುಂದುವರೆದಿದೆ. ಕೆ.ಆರ್.ಪುರ ಇನ್ನಿತರ ಕಂದಾಯ ವಿಭಾಗಗಳಿಂದ ನಗರಕ್ಕೆ ಬರಲು ಸಂಚಾರ ದಟ್ಟಣೆಯಲ್ಲಿ ಅರ್ಧ ದಿನ ಕಳೆದುಹೋಗುತ್ತದೆ. ನಿಗದಿತ ಸಮಯಕ್ಕೆ ನ್ಯಾಯಾಲಯಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಪಟ್ಟಂದೂರು ಅಗ್ರಹಾರದ ನಿವಾಸಿ ಮಂಜುನಾಥ್ ತಿಳಿಸಿದರು.

ಪೂರ್ವ ತಾಲ್ಲೂಕು ಕೆ.ಆರ್.ಪುರದಲ್ಲಿ ನ್ಯಾಯಲಯ ಆರಂಭಿಸುವಂತೆ ಆನೇಕ ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ಇದುವರೆಗೆ ನ್ಯಾಯಾಲಯ ಆರಂಭಗೊಂಡಿಲ್ಲ. ನಗರಕ್ಕೆ ತೆರಳಲು ಕಕ್ಷಿದಾರನಿಗೆ ಹಾಗೂ ವಕೀಲರಿಗೆ ತೊಂದರೆಯಾಗುತ್ತಿದೆ.

ಪೂರ್ವ ತಾಲ್ಲೂಕು ವ್ಯಾಪ್ತಿಯ ಸಾವಿರಾರು ಪ್ರಕರಣಗಳು ಇತ್ಯರ್ಥವಾಗದೆ ಹಾಗೆಯೇ ಉಳಿದಿವೆ. ಶೀಘ್ರವಾಗಿ ನ್ಯಾಯಾಲಯ ಆರಂಭಿಸಬೇಕು ಎಂದು ಬೆಂಗಳೂರು ಪೂರ್ವ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ರಾಜೇಂದ್ರ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT