ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಕೃಷಿ ವಿವಿ: 160 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಘಟಿಕೋತ್ಸವ ನಾಳೆ
Published 1 ಆಗಸ್ಟ್ 2023, 15:55 IST
Last Updated 1 ಆಗಸ್ಟ್ 2023, 15:55 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 57ನೇ ಘಟಿಕೋತ್ಸವವು ಆಗಸ್ಟ್‌ 3ರಂದು ನಡೆಯಲಿದ್ದು ಈ ವರ್ಷ 160 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು’ ಎಂದು ಕೃಷಿ ವಿವಿ ಕುಲಪತಿ ಎಸ್‌.ವಿ. ಸುರೇಶ ಮಾಹಿತಿ ನೀಡಿದರು.

‘ಒಟ್ಟು 66 ವಿದ್ಯಾರ್ಥಿಗಳಿಗೆ, ವಿಶ್ವವಿದ್ಯಾಲಯದ 54 ಚಿನ್ನದ ಪದಕ ಹಾಗೂ ದಾನಿಗಳ 86 ಚಿನ್ನದ ಪದಕ, 20 ವಿದ್ಯಾರ್ಥಿಗಳಿಗೆ ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರವನ್ನು ವಿತರಿಸಲಾಗುವುದು. ಅಂದು ಬೆಳಿಗ್ಗೆ 11ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌, ಕೃಷಿ ಸಚಿವ ಎನ್‌. ಚೆಲುವರಾಯಸ್ವಾಮಿ ಪದಕ ಪ್ರದಾನ ಮಾಡಲಿದ್ದಾರೆ. ಭಾರತೀಯ ಕೃಷಿ ಅನುಸಂಧಾನ ಪರಿಷತ್‌ ಮಹಾನಿರ್ದೇಶಕ ಹಿಮಾಂಶು ಪಾಠಕ್‌ ಅವರು ಘಟಿಕೋತ್ಸವದಲ್ಲಿ ಪ್ರದಾನ ಭಾಷಣ ಮಾಡಲಿದ್ದಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದರು.

‘49 ವಿದ್ಯಾರ್ಥಿನಿಯರು, 42 ಚಿನ್ನದ ಪದಕ, 56 ದಾನಿಗಳ ಚಿನ್ನದ ಪದಕ ಹಾಗೂ 11 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪಡೆಯಲಿದ್ದಾರೆ. 17 ವಿದ್ಯಾರ್ಥಿಗಳು, ವಿಶ್ವವಿದ್ಯಾಲಯದ 12 ಚಿನ್ನದ ಪದಕ, 30 ದಾನಿಗಳ ಚಿನ್ನದ ಪದಕ, 9 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ಪಡೆಯಲಿದ್ದಾರೆ’ ಎಂದು ಹೇಳಿದರು.

ಗೌರವ ಡಾಕ್ಟರೇಟ್‌:

ಈ ಬಾರಿ ಭಾರತ್‌ ಬಯೋಟೆಕ್‌ನ ವಿಜ್ಞಾನಿ ಕೃಷ್ಣ ಎಲ್ಲ ಅವರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಗುವುದು. ಕೋವಿಡ್‌ ವೇಳೆ ಭಾರತದಲ್ಲಿ ಕಂಡು ಹಿಡಿದ ಮೊದಲ ಕೋವಿಡ್‌ ಲಸಿಕೆ ಸಂಶೋಧನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆರೋಗ್ಯ ಕ್ಷೇತ್ರಕ್ಕೆ ಕೃಷ್ಣ ಅವರ ಕೊಡುಗೆ ಅಪಾರ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಸಸ್ಯರೋಗ ವಿಜ್ಞಾನ ವಿಭಾಗದ ಹಳೇ ವಿದ್ಯಾರ್ಥಿ ಅವರು. ತಮಿಳುನಾಡಿನ ಕೃಷ್ಣ ಅವರು ಪ್ರಸ್ತುತ ಆಂಧ್ರಪ್ರದೇಶದಲ್ಲಿ ನೆಲೆಸಿದ್ದಾರೆ’ ಎಂದರು.

‘ಕಳೆದ ವರ್ಷ ರೈತರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಗಿತ್ತು. ಈ ವರ್ಷ ನೀಡುತ್ತಿಲ್ಲ. ಹಾಗಂತ ರೈತರನ್ನು ವಿಶ್ವವಿದ್ಯಾಲಯ ಮರೆತಿಲ್ಲ. ಅವರಿಗಾಗಿಯೇ ಕೃಷಿ ವಿಶ್ವವಿದ್ಯಾಲಯ ಕೆಲಸ ಮಾಡುತ್ತಿರುವುದು’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಶಿಕ್ಷಣ ನಿರ್ದೇಶಕ ಡಾ.ಕೆ.ಸಿ. ನಾರಾಯಣಸ್ವಾಮಿ, ಡಾ.ಬಸವೇಗೌಡ ಹಾಜರಿದ್ದರು.

ಮ್ಯೂಸಿಯಂನಲ್ಲಿ ರೈತರನ್ನು ಆಕರ್ಷಿಸುವ ಕುಕ್ಕುಟ ವಿಭಾಗ.
ಮ್ಯೂಸಿಯಂನಲ್ಲಿ ರೈತರನ್ನು ಆಕರ್ಷಿಸುವ ಕುಕ್ಕುಟ ವಿಭಾಗ.

ಡಿ.ದರ್ಶನ್‌ಗೆ 13 ಪದಕ

ಬಿಎಸ್‌ಸಿಯಲ್ಲಿ ಡಿ.ದರ್ಶನ್‌ ಒಟ್ಟು 13 ಪದಗಳನ್ನು ಗಳಿಸಿದ್ದಾರೆ. ಕೃಷಿ ವಿವಿಯ 1 ಚಿನ್ನದ ಪದಕ ದಾನಿಗಳ 7 ಚಿನ್ನದ ಪದಕಗಳು ಹಾಗೂ ದಾನಿಗಳ7 ಚಿನ್ನದ ಪದಕಗಳ ಪ್ರಮಾಣ ಪತ್ರಗಳನ್ನು ಗಳಿಸಿದ್ದಾರೆ. ಇವರ ತಂದೆ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ತಾಯಿ ಗೃಹಿಣಿ ಎಂದು ಕುಲಪತಿ ಹೇಳಿದರು. ಅತ್ಯುತ್ತಮ ಕ್ರೀಡಾಪಟುಗಳಿಗೆ ನೀಡುವ ಚಿನ್ನದ ಪದಕವು ಬಿ.ಎಸ್‌.ರಕ್ಷಿತಾ ಅವರಿಗೆ ಲಭಿಸಿದೆ. ಇವರು ಅಥ್ಲೆಟಿಕ್ಸ್‌ನಲ್ಲಿ ಸಾಧನೆ ಮಾಡಿದ್ದಾರೆ. ಸಕಾಲ ಬಂಧು ವಾರ ಪತ್ರಿಕೆಯ ಸಂಪಾದಕರಾಗಿದ್ದ ದಿವಂಗತ ಬಿ.ಸಿ.ರಾಮಲಿಂಗಯ್ಯ ಅವರ ಪುತ್ರಿ ಬಿ.ಆರ್‌.ಗಾನವಿ ಎರಡು ಚಿನ್ನದ ಪದಕಗಳನ್ನು ಗಳಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಕೃಷಿ ವಿಜ್ಞಾನಗಳ ವಸ್ತು ಸಂಗ್ರಹಾಲಯದ ಉದ್ಘಾಟನೆಗೆ ಸಜ್ಜು

ಜಿಕೆವಿಕೆ ಆವರಣದಲ್ಲಿ ನಿರ್ಮಿಸಿರುವ ಕೃಷಿ ವಿಜ್ಞಾನಗಳ ವಸ್ತು ಸಂಗ್ರಹಾಲಯ ಹಾಗೂ ತರಬೇತಿಗೆ ಬರುವ ರೈತರಿಗೆ ವಾಸ್ತವ್ಯ ಕಟ್ಟಡದ ಉದ್ಘಾಟನೆಯೂ ಆಗಸ್ಟ್‌ 3ರಂದೇ ನಡೆಯಲಿದೆ ಎಂದು ಕುಲಪತಿ ಮಾಹಿತಿ ನೀಡಿದರು. 2013ರಲ್ಲೇ ಈ ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ಹಂತ ಹಂತವಾಗಿ ಕಾಮಗಾರಿ ನಡೆಸಿ ಈಗ ಉದ್ಘಾಟನೆಗೆ ಸಜ್ಜಾಗಿದೆ ಎಂದು ಹೇಳಿದರು. ವಸ್ತು ಸಂಗ್ರಹಾಲಯವು ಕೃಷಿ ಇತಿಹಾಸ ಸಾರಲಿದೆ. ಹಳ್ಳಿ ಸಂತೆ ಕೃಷಿ ಮಾರುಕಟ್ಟೆ ಪಶುಪಾಲನೆ ಕುಕ್ಕುಟೋದ್ಯಮ ಅರಣ್ಯ ಹವಾಮಾನ ವೈಪರೀತ್ಯ ಕೃಷಿ ಯಾಂತ್ರೀಕರಣ ನವೀಕರಿಸಬಹುದಾದ ಇಂಧನ ಧಾನ್ಯ ಶೇಖರಣೆ ವಿಸ್ತರಣಾ ತಂತ್ರಜ್ಞಾನವನ್ನು ಒಳಗೊಂಡಿದೆ. ನೀರಾವರಿ ಪದ್ಧತಿ ರಾಜ್ಯದಲ್ಲಿನ ಕೃಷಿ ಚಟುವಟಿಕೆ ಬೆಳೆಗಳ ಮಾಹಿತಿ ಬೇಸಾಯ ವಿಧಾನ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಕುರಿತೂ ಮಾಹಿತಿ ನೀಡಲಿದೆ. ವಿವಿ ಕೆಲಸದ ಅವಧಿಯಲ್ಲಿ ಸಾರ್ವಜನಿಕರಿಗೆ ಉಚಿತ ಪ್ರವೇಶ ಇರಲಿದೆ. ಕೃಷಿ ವಿಜ್ಞಾನಿಯೊಬ್ಬರನ್ನು ಇಲ್ಲಿ ನಿಯೋಜಿಸಲಾಗುವುದು. ಈ ವಸ್ತು ಸಂಗ್ರಹಾಲಯಕ್ಕೆ ₹ 1.5 ಕೋಟಿ ವೆಚ್ಚವಾಗಿದೆ. ರಾಜ್ಯದ ಬೇರೆಲ್ಲೂ ಈ ಮಾದರಿಯ ವಸ್ತು ಸಂಗ್ರಹಾಲಯ ಇಲ್ಲ ಎಂದು ಹೇಳಿದರು. ರೈತರಿಗೆ ನಿರ್ಮಿಸಿರುವ ಕೊಠಡಿಯಲ್ಲಿ 45 ಮಂದಿ ವಾಸ್ತವ್ಯಕ್ಕೆ ಅವಕಾಶವಿದೆ. ತರಬೇತಿ ದಿನಗಳನ್ನು ಆಧರಿಸಿ ರೈತರು ವಾಸ್ತವ್ಯ ಮಾಡಬಹುದಾಗಿದೆ ಎಂದು ಮಾಹಿತಿ ನೀಡಿದರು.

ಪದವಿ ಪ್ರದಾನದ ವಿವರ

ಸ್ನಾತಕ ಪದವಿ;891 ಸ್ನಾತಕೋತ್ತರ ಪದವಿ;299 ಪಿಎಚ್‌.ಡಿ;105 ಒಟ್ಟು ವಿದ್ಯಾರ್ಥಿಗಳು;1295 ಚಿನ್ನದ ಪದಕಗಳ ವಿತರಣೆ  ಪಿ.ಎಚ್‌ಡಿಯಲ್ಲಿ 29 ಸ್ನಾತಕೋತ್ತರ ಪದವಿಯಲ್ಲಿ 74 ಪದವಿ ವಿಭಾಗದಲ್ಲಿ 57

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT