ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎನ್‌ಒಸಿ ಪಡೆಯದೇ 30 ಫ್ಲ್ಯಾಟ್ ಅಕ್ರಮ ಮಾರಾಟ

₹ 8 ಕೋಟಿ ಸಾಲ ನೀಡಿದ್ದ ಕೆಎಸ್‌ಎಫ್‌ಸಿ * ಅಲ್ಟಿಮೇಟ್ ಸಿವಿಕ್ ಬಿಲ್ಡ್ ಟೆಕ್ ಕಂಪನಿ ಪಾಲುದಾರರ ವಿರುದ್ಧ ಎಫ್‌ಐಆರ್
Published 2 ಜೂನ್ 2024, 23:31 IST
Last Updated 2 ಜೂನ್ 2024, 23:31 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ರಾಜ್ಯ ಹಣಕಾಸು ನಿಗಮದಿಂದ (ಕೆಎಸ್‌ಎಫ್‌ಸಿ) ₹ 8 ಕೋಟಿ ಸಾಲ ಪಡೆದು ನಿರ್ಮಿಸಿದ್ದ ಅಪಾರ್ಟ್‌ಮೆಂಟ್ ಸಮುಚ್ಚಯದ ಫ್ಲ್ಯಾಟ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗಿದ್ದು, ಈ ಸಂಬಂಧ ಅಲ್ಟಿಮೇಟ್ ಸಿವಿಕ್ ಬಿಲ್ಡ್ ಟೆಕ್ ಕಂಪನಿ ಆಡಳಿತ ಪಾಲುದಾರರ ವಿರುದ್ಧ ಪ್ರಕರಣ ದಾಖಲಾಗಿದೆ.

‘ಫ್ಲ್ಯಾಟ್‌ಗಳ ಅಕ್ರಮ ಮಾರಾಟಕ್ಕೆ ಸಂಬಂಧಪಟ್ಟಂತೆ ಕೆಎಸ್‌ಎಫ್‌ಸಿ ಸಹಾಯಕ ಪ್ರಧಾನ ವ್ಯವಸ್ಥಾಪಕ ಜಿ. ವಿಶ್ವನಾಥ್ ಅವರು ಇತ್ತೀಚೆಗೆ ದೂರು ನೀಡಿದ್ದಾರೆ. ಅಲ್ಟಿಮೇಟ್ ಸಿವಿಕ್ ಬಿಲ್ಡ್ ಟೆಕ್ ಆಡಳಿತ ಪಾಲುದಾರರಾದ ಹರಿಪ್ರಸಾದ್, ರಘುವೀರ್ ಸ್ವಾಮಿ ಹಾಗೂ ಎಂ. ಸುಬ್ರಮಣಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಹೈಗ್ರೌಂಡ್ಸ್ ಠಾಣೆ ಪೊಲೀಸ್ ಮೂಲಗಳು ಹೇಳಿವೆ.

‘ದೂರುದಾರರು ಪ್ರಕರಣದ ಹಲವು ದಾಖಲೆಗಳನ್ನು ಒದಗಿಸಿದ್ದಾರೆ. ಅವುಗಳ ಪರಿಶೀಲನೆ ನಡೆಸಲಾಗುತ್ತಿದೆ. ಆರೋಪಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಿ ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

85 ಫ್ಲ್ಯಾಟ್‌ಗಳ ನಿರ್ಮಾಣ: ‘ಯಲಹಂಕ ಹೋಬಳಿಯ ಹಾರೋಹಳ್ಳಿ ಗ್ರಾಮದಲ್ಲಿ 85 ಫ್ಲ್ಯಾಟ್‌ಗಳ ವಸತಿ ಅಪಾರ್ಟ್‌ಮೆಂಟ್ ಸಮುಚ್ಚಯ ನಿರ್ಮಿಸಲು ಆರೋ‍ಪಿಗಳು ಯೋಜನೆ ರೂಪಿಸಿದ್ದರು. ಯೋಜನೆ ಜಾರಿಗೆ ಅಗತ್ಯವಿದ್ದ ₹ 8 ಕೋಟಿ ಸಾಲ ಕೇಳಿ ಕೆಎಸ್ಎಫ್‌ಸಿಗೆ ಅರ್ಜಿ ಸಲ್ಲಿಸಿದ್ದರು. ಅಪಾರ್ಟ್‌ಮೆಂಟ್ ಸಮುಚ್ಚಯ ನಿರ್ಮಿಸಿದ ನಂತರ, ಕೆಎಸ್‌ಎಫ್‌ಸಿಯಿಂದ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆದು ಫ್ಲ್ಯಾಟ್ ಮಾರಾಟ ಮಾಡುವುದಾಗಿಯೂ ಆರೋಪಿಗಳು ಅಫಿಡ್‌ವಿಟ್ ಸಲ್ಲಿಸಿದ್ದರು. ಜೊತೆಗೆ, ಸಾಲದ ಭದ್ರತೆಗೆಂದು ಜಾಗವನ್ನು ಅಡವಿಟ್ಟಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಅಪಾರ್ಟ್‌ಮೆಂಟ್ ಸಮುಚ್ಚಯ ನಿರ್ಮಾಣ ಕೆಲಸ ಪೂರ್ಣಗೊಂಡಿದ್ದು, 85 ಫ್ಲ್ಯಾಟ್‌ಗಳು ಮಾರಾಟಕ್ಕೆ ಸಿದ್ಧವಾಗಿವೆ. ಈ ಸಂದರ್ಭದಲ್ಲಿ ಆರೋಪಿಗಳು, ಕೆಎಸ್‌ಎಫ್‌ಸಿ ಕಡೆಯಿಂದ ಎನ್‌ಒಸಿ ಪಡೆದು ಫ್ಲ್ಯಾಟ್‌ ಮಾರಾಟ ಮಾಡಬೇಕು. ಆದರೆ, ಆರೋಪಿಗಳು ಯಾವುದೇ ಎನ್‌ಒಸಿ ಪಡೆಯದೇ 32 ಫ್ಲ್ಯಾಟ್‌ಗಳನ್ನು ಈಗಾಗಲೇ ಮಾರಾಟ ಮಾಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಸಾಲ ಮರುಪಾವತಿಗೆ ಶೋಕಾಸ್: ‘ಅಪಾರ್ಟ್‌ಮೆಂಟ್ ಸಮುಚ್ಚಯ ನಿರ್ಮಿಸಿ ಫ್ಲ್ಯಾಟ್ ಮಾರುತ್ತಿದ್ದರೂ ಆರೋಪಿಗಳು ನಿಗದಿತ ಸಮಯಕ್ಕೆ ಸಾಲ ಹಾಗೂ ಅದರ ಬಡ್ಡಿ ಪಾವತಿ ಮಾಡುತ್ತಿರಲಿಲ್ಲ. ₹ 9.73 ಕೋಟಿ ಸಾಲ ಬಾಕಿ ಇತ್ತು. ಈ ಬಗ್ಗೆ ಕೆಎಸ್‌ಎಫ್‌ಸಿ ಅಧಿಕಾರಿಗಳು ಹಲವು ಬಾರಿ ನೋಟಿಸ್ ನೀಡಿದ್ದರು. ಅಷ್ಟಾದರೂ ಆರೋಪಿಗಳು, ಉತ್ತರ ನೀಡಿರಲಿಲ್ಲ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ನೋಟಿಸ್‌ಗೆ ಉತ್ತರ ಬಾರದಿದ್ದರಿಂದ ಕೆಎಸ್‌ಎಫ್‌ಸಿ ಅಧಿಕಾರಿಗಳು, ಸ್ಥಳ ಪರಿಶೀಲನೆ ನಡೆಸಿದ್ದರು. ಆವಾಗಲೇ, ಆರೋಪಿಗಳು 32 ಫ್ಲ್ಯಾಟ್ ಮಾರಿದ್ದ ಸಂಗತಿ ಗೊತ್ತಾಗಿತ್ತು. ನಂತರ, ಉಳಿದ ಫ್ಲ್ಯಾಟ್‌ಗಳನ್ನು ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ’ ಎಂದು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT