ಬೆಂಗಳೂರು: ಮೈಸೂರು–ಬೆಂಗಳೂರು ನಡುವೆ ಕಾರ್ಯಾಚರಣೆ ಮಾಡುತ್ತಿರುವ ಕೆಎಸ್‌ಆರ್‌ಟಿಸಿ ಎಲೆಕ್ಟ್ರಿಕ್ ಬಸ್‌ಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಒಂದೂವರೆ ತಿಂಗಳಲ್ಲಿ ₹9.13 ಲಕ್ಷ ವರಮಾನ ಸಂಗ್ರಹಿಸಿದೆ.
ಕೆಎಸ್‌ಆರ್‌ಟಿಸಿಗೆ ಬಂದಿರುವ ಮೊದಲ ಎಲೆಕ್ಟ್ರಿಕ್ ಬಸ್ ‘ಪವರ್ ಪ್ಲಸ್’ ಜ.16ರಿಂದ ಕಾರ್ಯಾಚರಣೆ ಆರಂಭಿಸಿತ್ತು. ಜನವರಿ ಅಂತ್ಯದೊಳಗೆ ₹3.77 ಲಕ್ಷ ವರಮಾನ ಸಂಗ್ರಹಿಸಿದ್ದು, ಫೆಬ್ರುವರಿಯಲ್ಲಿ ₹5.36 ಲಕ್ಷ ವರಮಾನ ಸಂಗ್ರಹಿಸಿದೆ.
ಪ್ರತಿ ಕಿಲೋ ಮೀಟರ್‌ಗೆ ₹68 ವೆಚ್ಚವಾಗುತ್ತಿದ್ದು, ಸರಾಸರಿ ₹83.77 ವರಮಾನ ಸಂಗ್ರಹವಾಗಿದೆ. ಇದು ಕೆಎಸ್‌ಆರ್‌ಟಿಸಿ ಅಧಿಕಾರಿಗಳಲ್ಲಿ ಹೊಸ ಹುರುಪು ತಂದಿದ್ದು, ಶೀಘ್ರದಲ್ಲೇ ಇನಷ್ಟು ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಳಿಸಲು ಸಜ್ಜಾಗುತ್ತಿದ್ದಾರೆ.
‘ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮೈಸೂರಿಗೆ ಒಂದೇ ಒಂದು ಬಸ್ ಹೋಗಿ ಬರುತ್ತಿದ್ದು, ಆನ್‌ಲೈನ್ ಬುಕಿಂಗ್‌ಗೆ ಇನ್ನೂ ಅವಕಾಶ ನೀಡಿಲ್ಲ. 50 ಬಸ್‌ಗಳು ರಸ್ತೆಗೆ ಇಳಿದ ಬಳಿಕ ಆನ್‌ಲೈನ್‌ನಲ್ಲಿ ಆಸನ ಕಾಯ್ದಿರಿಸಲು ಅವಕಾಶ ನೀಡಲಾಗುವುದು’ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ತಿಳಿಸಿದರು.
ಇನ್ನು 10 ದಿನಗಳಲ್ಲಿ 25 ಎಲೆಕ್ಟ್ರಿಕ್ ಬಸ್‌ಗಳು ಕೆಎಸ್‌ಆರ್‌ಟಿಗೆ ಸೇರ್ಪಡೆಯಾಗಲಿವೆ. ಮಾರ್ಚ್ 15ರ ಒಳಗೆ ಎಲ್ಲ 50 ಬಸ್‌ಗಳು ರಸ್ತೆಗೆ ಇಳಿಯಲಿವೆ ಎಂದು ವಿವರಿಸಿದರು.
ಹವಾನಿಯಂತ್ರಿತ ಎಲೆಕ್ಟ್ರಿಕ್ ಬಸ್‌ನಲ್ಲಿ ಮೈಸೂರಿಗೆ ಹೋಗಲು ಪ್ರಯಾಣ ದರ ₹300 ಮಾತ್ರ ಇದ್ದು, ಜನ ಉತ್ಸಾಹದಿಂದ ಬಸ್ ಹತ್ತುತ್ತಿದ್ದಾರೆ. ಬೇಸಿಗೆ ಇರುವುದರಿಂದ ಮುಂದಿನ ದಿನಗಳಲ್ಲಿ ಎಲ್ಲ ಎಲೆಕ್ಟ್ರಿಕ್ ಬಸ್‌ಗಳಿಗೂ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಲಿದೆ ಎಂದು ಅನ್ಬುಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಮಡಿಕೇರಿ, ವಿರಾಜಪೇಟೆ, ಶಿವಮೊಗ್ಗ, ದಾವಣಗೆರೆ ಮತ್ತು ಚಿಕ್ಕಮಗಳೂರಿಗೆ ಎಲೆಕ್ಟ್ರಿಕ್ ಬಸ್‌ಗಳು ಕಾರ್ಯಾಚರಣೆ ಮಾಡಲು ಕೆಎಸ್‌ಆರ್‌ಟಿಸಿ ಉದ್ದೇಶಿಸಿದೆ.
ಅಂಬಾರಿ ಉತ್ಸವ ಕಾರ್ಯಾಚರಣೆ ಆರಂಭ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇತ್ತೀಚೆಗೆ ಉದ್ಘಾಟನೆ ಮಾಡಿದ ಕೆಎಸ್‌ಆರ್‌ಟಿಸಿಯಲ್ಲೇ ಐಶಾರಾಮಿ ಬಸ್ ‘ಅಂಬಾರಿ ಉತ್ಸವ’ ಭಾನುವಾರದಿಂದ ಕಾರ್ಯಾಚರಣೆ ಆರಂಭಿಸಿವೆ.
ಮೊದಲ ಬಸ್ ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿತು. ಬಸ್‌ಗೆ ಹತ್ತಿದ ಪ್ರಯಾಣಿಕರಿಗೆ ಅಧಿಕಾರಿಗಳು ಗುಲಾಬಿ ಹೂ ನೀಡಿ ಸ್ವಾಗತಿಸಿದರು. ಮೊದಲ ಬಸ್‌ನಲ್ಲಿ ಎಲ್ಲಾ ಸೀಟುಗಳು ಭರ್ತಿಯಾಗಿದ್ದವು ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.