ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪನ್ಮೂಲದ ಕೊರತೆ: ಸಮುದಾಯ ಬಾನುಲಿ ಕೇಂದ್ರಗಳಿಗೆ ಸಂಕಷ್ಟ

Published 31 ಜನವರಿ 2024, 15:36 IST
Last Updated 31 ಜನವರಿ 2024, 15:36 IST
ಅಕ್ಷರ ಗಾತ್ರ

ಬೆಂಗಳೂರು: ‘ಸಮುದಾಯ ಬಾನುಲಿ ಕೇಂದ್ರಗಳು ಆರ್ಥಿಕ ಸಂಪನ್ಮೂಲವಿಲ್ಲದೇ ಸಂಕಷ್ಟದಲ್ಲಿದ್ದು, ರಾಜ್ಯ ಸರ್ಕಾರ ಇತರೆ ಮಾಧ್ಯಮಗಳಿಗೆ ನೀಡುತ್ತಿರುವ ಜಾಹೀರಾತು ನೀತಿಯನ್ನೇ ಸಮುದಾಯ ರೇಡಿಯೊಗಳಿಗೂ ಅನ್ವಯಿಸಬೇಕು’ ಎಂದು ಕರ್ನಾಟಕ ಸಮುದಾಯ ಬಾನುಲಿ ಕೇಂದ್ರಗಳ ಸಂಘ ಆಗ್ರಹಿಸಿದೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಿಗೆ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿ, ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ 24 ಸಮುದಾಯ ಬಾನುಲಿ ಕೇಂದ್ರಗಳು ನಿರಂತರವಾಗಿ ಕಾರ್ಯ ನಿರ್ವಹಿಸಿಕೊಂಡು ಬರುತ್ತಿವೆ. ಇನ್ನು ಕೆಲವು ಸಂಸ್ಥೆಗಳು ಬಾನುಲಿ ಕೇಂದ್ರಗಳನ್ನು ಪ್ರಾರಂಭಿಸುವ ಪ್ರಕ್ರಿಯೆಯಲ್ಲಿ ಇವೆ. ಆದರೆ, ಈಗಿರುವ ಕೇಂದ್ರಗಳು ಸಂಕಷ್ಟದಲ್ಲಿದ್ದು, ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಸಂಘದ ಅಧ್ಯಕ್ಷರಾದ ಡಾ.ರಶ್ಮಿ ಅಮ್ಮೆಂಬಳ ಹಾಗೂ ಕಾರ್ಯದರ್ಶಿ ಭರತ್‌ ಬಿ. ಬಡಿಗೇರ್‌ ಅವರು ಕೋರಿದ್ದಾರೆ.

ಮಾಧ್ಯಮ ಜಾಹೀರಾತು ಪಟ್ಟಿಯಲ್ಲಿ ಸಮುದಾಯ ಬಾನುಲಿಗಳನ್ನು ಸೇರಿಸಬೇಕು. ಆಯಾ ಜಿಲ್ಲಾಮಟ್ಟದಲ್ಲಿನ ಇಲಾಖೆಗಳು, ಸ್ಥಳೀಯ ಪತ್ರಿಕೆಗಳಿಗೆ ಮತ್ತು ರಾಜ್ಯಮಟ್ಟದ ಪತ್ರಿಕೆಗಳಿಗೆ ನೀಡುವ ಜಾಹೀರಾತನ್ನು ಜಿಲ್ಲೆಯ ಸಮುದಾಯ ಬಾನುಲಿಗಳಿಗೂ ನೀಡಬೇಕು ಎಂದು ಕೋರಿದ್ದಾರೆ.

ಇಲಾಖೆಗಳು, ರಾಜ್ಯಮಟ್ಟದ ಕಾರ್ಯಕ್ರಮಗಳ ಕುರಿತಂತೆ ಸಮುದಾಯ ಬಾನುಲಿಗಳಿಗೆ ಜಾಹೀರಾತು ಅಥವಾ ಪ್ರಾಯೋಜಿತ ಕಾರ್ಯಕ್ರಮ ನೀಡಬೇಕು. ಸರ್ಕಾರ ಸಮಗ್ರ ನೀತಿ ರೂಪಿಸಬೇಕು ಎಂದು ಮನವಿ ಮಾಡಿದ್ದಾರೆ.

ಕೇಂದ್ರ ಸರ್ಕಾರ ಹೊಸ ಮಾಧ್ಯಮ ಕರಡು ನೀತಿಯನ್ನು ಸಿದ್ಧಪಡಿಸಿದ್ದು, ಸಮುದಾಯ ಬಾನುಲಿಗಳನ್ನು ಒಂದು ಪ್ರಬಲ ಶ್ರವಣ ಮಾಧ್ಯಮವನ್ನಾಗಿ ಪರಿಗಣಿಸಿರುವುದು ಗೊತ್ತಾಗಿದೆ. ರಾಜ್ಯ ಸರ್ಕಾರ ಸಹ ಸಮುದಾಯ ಬಾನುಲಿಗಳನ್ನು ಸಮರ್ಥ ಮಾಧ್ಯಮ ಎಂದು ಪರಿಗಣಿಸಿ ಈ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿರುವ ಒಬ್ಬರಿಗಾದರೂ ಮಾಧ್ಯಮ ಮಾನ್ಯತಾ ಪ್ರಮಾಣ ಪತ್ರ ನೀಡಬೇಕು. ಇದರಿಂದ ಸರ್ಕಾರದ ಕಾರ್ಯಕ್ರಮಗಳ ವರದಿ ಮಾಡಲು ಅನುಕೂಲವಾಗಲಿದೆ ಎಂದು ಮನವಿ ಮಾಡಿದ್ದಾರೆ.

ವಿವಿಧ ಇಲಾಖೆಗಳಲ್ಲಿ ಲಭ್ಯವಿರುವ ಐ.ಇ.ಸಿ ಚಟುವಟಿಕೆಗಳನ್ನು ಸಮುದಾಯ ಬಾನುಲಿಗಳ ಮೂಲಕ ಬಿತ್ತರಿಸಲು ಅವಕಾಶ ಮಾಡಿಕೊಡಬೇಕು. ಸರ್ಕಾರಿ ಅಧಿಕಾರಿಗಳು, ತಮ್ಮ ಇಲಾಖೆಗಳ ಯೋಜನೆ ಕುರಿತು ಮಾಹಿತಿ ನೀಡಲು ಬಾನುಲಿ ಕೇಂದ್ರಗಳ ಜತೆಗೆ ಕೈಜೋಡಿಸಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT