ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಡೆತಡೆಯಿಂದ ಕೆರೆ ಅಭಿವೃದ್ಧಿ ವಿಳಂಬ: ಶಾಸಕ ಎಸ್. ರಘು

ಡಿಸೆಂಬರ್‌ ವೇಳೆಗೆ ಕಗ್ಗದಾಸಪುರ ಕೆರೆ ಅನಾವರಣ: ಶಾಸಕ ಎಸ್‌. ರಘು
Published 13 ಜೂನ್ 2024, 15:48 IST
Last Updated 13 ಜೂನ್ 2024, 15:48 IST
ಅಕ್ಷರ ಗಾತ್ರ

ಬೆಂಗಳೂರು: ನ್ಯಾಯಾಲಯದ ತಡೆ ಹಾಗೂ ಕಿರಿದಾದ ರಸ್ತೆಗಳಲ್ಲಿ ಬೃಹತ್‌ ವಾಹನಗಳು ಸಾಗಲು ಸಾಧ್ಯವಾಗದ್ದರಿಂದ ಕಗ್ಗದಾಸಪುರ ಕೆರೆ ಅಭಿವೃದ್ಧಿ ವಿಳಂಬವಾಗಿದೆ. ಡಿಸೆಂಬರ್ ವೇಳೆಗೆ ಕೆರೆ ಅಭಿವೃದ್ಧಿ ಪೂರ್ಣಗೊಳ್ಳಲಿದೆ ಎಂದು ಸಿ.ವಿ. ರಾಮನ್‌ ನಗರ ವಿಧಾನಸಭೆ ಕ್ಷೇತ್ರದ ಶಾಸಕ ಎಸ್. ರಘು ತಿಳಿಸಿದರು.

ಕಗ್ಗದಾಸಪುರ ಕೆರೆಯ ಅಭಿವೃದ್ಧಿ ಕಾರ್ಯವನ್ನು ಗುರುವಾರ ಪರಿಶೀಲಿಸಿ, ಕಾಮಗಾರಿಯನ್ನು ಶೀಘ್ರ ಮುಗಿಸುವಂತೆ ಬಿಬಿಎಂಪಿ ಹಾಗೂ ಜಲಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು. ‘ಡಿಸೆಂಬರ್‌ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಲಾಗುವುದು’ ಎಂದು ಅಧಿಕಾರಿಗಳು ಭರವಸೆ ನೀಡಿದರು.

‘ಕೆರೆ ಅಭಿವೃದ್ಧಿ ಕಾಮಗಾರಿಗೆ 2019ರ ಅಂತ್ಯದಲ್ಲಿ ಕಾರ್ಯಾದೇಶ ನೀಡಿದ ಮೇಲೆ ನ್ಯಾಯಾಲಯ ತಡೆ ನೀಡಿತ್ತು. ನಂತರ ಕೋವಿಡ್‌ ಸಂದರ್ಭದಲ್ಲಿ ಕಾಮಗಾರಿ ನಡೆಸಲು ಸಾಧ್ಯವಾಗಲಿಲ್ಲ. 2022ರಲ್ಲಿ ಅತಿ ಹೆಚ್ಚು ಮಳೆಯಾದ್ದರಿಂದ ನೀರು ತುಂಬಿಕೊಂಡು ಯಾವುದೇ ಕಾಮಗಾರಿ ನಡೆಸಲು ಸಾಧ್ಯವಾಗಲಿಲ್ಲ. ಹೀಗಾಗಿ ಅಭಿವೃದ್ಧಿ ಕಾಮಗಾರಿ ವಿಳಂಬವಾಯಿತು. ಈ ಕಾಮಗಾರಿಗೆ ಹೆಚ್ಚುವರಿ ಹಣವನ್ನೇನೂ ಬಿಡುಗಡೆ ಮಾಡಿಲ್ಲ. ಆಗಿರುವ ಕೆಲಸಕ್ಕೆ ಟೆಂಡರ್‌ನಲ್ಲಿ ನಮೂದಿಸಿರುವ ಹಣವನ್ನಷ್ಟೆ ನೀಡಲಾಗುತ್ತಿದೆ’ ಎಂದು ಬಿಬಿಎಂಪಿ ಕೆರೆಗಳ ವಿಭಾಗದ ಎಂಜಿನಿಯರ್‌ಗಳು ಮಾಹಿತಿ ನೀಡಿದರು.

‘47 ಎಕರೆ ವಿಸ್ತೀರ್ಣದ ಕಗ್ಗದಾಸಪುರ ಕೆರೆಗೆ ₹8 ಕೋಟಿ ವೆಚ್ಚ ಮಾಡಲಾಗುತ್ತಿದೆ. ಇನ್ನಷ್ಟು ಅಭಿವೃದ್ಧಿಗೆ ಇದೀಗ ₹4 ಕೋಟಿ ವೆಚ್ಚದ ಹೆಚ್ಚುವರಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ’ ಎಂದು ಮುಖ್ಯ ಎಂಜಿನಿಯರ್‌ ವಿಜಯಕುಮಾರ್‌ ಹರಿದಾಸ್‌ ತಿಳಿಸಿದರು.

ಎಸ್‌ಟಿಪಿ ವಿಳಂಬ: ಕಗ್ಗದಾಸಪುರ ಕೆರೆಗೆ ಸಂಸ್ಕರಿತ ನೀರನ್ನು ಮಾತ್ರ ಬಿಡುಗಡೆ ಮಾಡಲು 5 ಎಂಎಲ್‌ಡಿ ತ್ಯಾಜ್ಯ ನೀರು ಸಂಸ್ಕರಣೆ ಘಟಕವನ್ನು ನಿರ್ಮಿಸಲಾಗುತ್ತಿದೆ. ಇದು ಡಿಸೆಂಬರ್‌ ಅಂತ್ಯಕ್ಕೆ ಮುಗಿಯಲಿದೆ ಎಂದು ಜಲಮಂಡಳಿ ಮುಖ್ಯ ಎಂಜಿನಿಯರ್‌ ಗಂಗಾಧರ್‌ ತಿಳಿಸಿದರು.

ಕೆರೆಯ ಅಂಗಳದಲ್ಲಿ ಸುಮಾರು ಎರಡೂವರೆ ಎಕರೆಯಷ್ಟು ಜಾಗವನ್ನು ಮೊದಲು ನಿಗದಿ ಮಾಡಿ, ಎಸ್‌ಟಿಪಿ ನಿರ್ಮಿಸಲು ಆರಂಭಿಸಲಾಗಿತ್ತು. ನ್ಯಾಯಾಲಯದಿಂದ ಇದಕ್ಕೆ ಅನುಮತಿ ಸಿಗದಿದ್ದರಿಂದ ಆ ಪ್ರದೇಶದಿಂದ ಮತ್ತೊಂದು ಬದಿಗೆ ಎಸ್‌ಟಿಪಿಯನ್ನು ಸ್ಥಳಾಂತರಿಸಲಾಯಿತು. ಸಾಮರ್ಥ್ಯ ಕಡಿಮೆಗೊಳಿಸದೆ, ಎಸ್‌ಟಿಪಿ ನಿರ್ಮಿಸಲಾಗುತ್ತಿದೆ. ಬೃಹತ್ ವಾಹನಗಳು ಇಲ್ಲಿಗೆ ಬರಲು ಸಾಧ್ಯವಿಲ್ಲ. ಹೀಗಾಗಿ ಕಾಮಗಾರಿ ವಿಳಂಬವಾಗುತ್ತಿದೆ. ಇದು ಟರ್ನ್‌ಕೀ ಯೋಜನೆಯಾಗಿದ್ದು, ಎಷ್ಟೇ ವಿಳಂಬವಾದರೂ ₹26 ಕೋಟಿಯಷ್ಟೇ ನೀಡಲಾಗುತ್ತದೆ. ಇದರಲ್ಲಿ ಜಿಎಸ್‌ಟಿ ಸೇರಿದಂತೆ ಹತ್ತು ವರ್ಷಗಳ ನಿರ್ವಹಣೆಯೂ ಗುತ್ತಿಗೆದಾರರದ್ದೇ ಆಗಿದೆ ಎಂದರು.

Cut-off box - 162 ದಶಲಕ್ಷ ಲೀಟರ್‌ ಸಾಮರ್ಥ್ಯ ‘ಕಗ್ಗದಾಸಪುರ ಕೆರೆ ಅಭಿವೃದ್ಧಿ ಬಗ್ಗೆ ಅನಗತ್ಯವಾಗಿ ಅಪಪ್ರಚಾರ ಮಾಡಲಾಗುತ್ತಿದೆ. 47 ಎಕರೆಯ ದೊಡ್ಡ ಕೆರೆಯನ್ನು ಕಿರಿದಾದ ರಸ್ತೆಗಳ ನಡುವೆ ಅಭಿವೃದ್ಧಿ ಮಾಡುವುದೇ ಸವಾಲು. 67 ದಶಲಕ್ಷ ಲೀಟರ್‌ ನೀರಿನ ಸಂಗ್ರಹ ಸಾಮರ್ಥ್ಯವನ್ನು 162 ದಶಲಕ್ಷ ಲೀಟರ್‌ಗೆ ಹೆಚ್ಚಿಸಲಾಗಿದೆ. ಎಲ್ಲ ರೀತಿಯ ಒತ್ತುವರಿಯನ್ನು ತೆರವು ಮಾಡಿದ್ದು ಸುಮಾರು ಒಂದು ಎಕರೆ ಪ್ರದೇಶದ ಒತ್ತುವರಿ ಪ್ರಕರಣ ನ್ಯಾಯಾಲಯದಲ್ಲಿದೆ’ ಎಂದು ಶಾಸಕ ರಘು ತಿಳಿಸಿದರು. ‘ಕಗ್ಗದಾಸಪುರ ಕೆರೆ ಅಭಿವೃದ್ಧಿ ವಿಳಂಬವಾಗಿದ್ದು ಹಣ ದುರುಪಯೋಗವಾಗುತ್ತಿದೆ’ ಆಮ್‌ ಆದ್ಮಿ ಪಕ್ಷದವರು ದೂರಿದ್ದರು. ‘ಕೆರೆಯ ಸಾಮರ್ಥ್ಯ ಹಾಗೂ ಕಾಮಗಾರಿಯನ್ನು ಪರಿಶೀಲಿಸಿದರೆ ಎಷ್ಟು ವ್ಯಯವಾಗಿದೆ ಎಂಬುದು ಎಲ್ಲರಿಗೂ ಅರಿವಾಗುತ್ತದೆ’ ಎಂದು ರಘು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT