ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಲ್‌ಬಾಗ್‌ನಲ್ಲಿ 215ನೇ ಫಲಪುಷ್ಪ ಪ್ರದರ್ಶನ: ಗಾಜಿನ ಮನೆಯಲ್ಲಿ ಅನುಭವ ಮಂಟಪ

Published 16 ಜನವರಿ 2024, 22:35 IST
Last Updated 16 ಜನವರಿ 2024, 22:35 IST
ಅಕ್ಷರ ಗಾತ್ರ

ಬೆಂಗಳೂರು: ತೋಟಗಾರಿಕೆ ಇಲಾಖೆಯು ಗಣರಾಜ್ಯೋತ್ಸವದ ಪ್ರಯುಕ್ತ ಇದೇ 18ರಿಂದ 28ರವರೆಗೆ ಲಾಲ್‌ಬಾಗ್‌ನಲ್ಲಿ 215ನೇ ಫಲಪುಷ್ಪ ಪ್ರದರ್ಶನವನ್ನು ಹಮ್ಮಿಕೊಂಡಿದೆ.ಈ ಬಾರಿಯ ಪ್ರದರ್ಶನವು ಬಸವಣ್ಣ ಮತ್ತು ವಚನ ಸಾಹಿತ್ಯವನ್ನು ಆಧರಿಸಿದ್ದು, ಗಾಜಿನ ಮನೆಯ ಒಳಗಡೆ 12ನೇ ಶತಮಾನದ ‘ಅನುಭವ ಮಂಟಪ’ ಹೂವುಗಳಲ್ಲಿ ಅರಳಲಿದೆ. 

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಲಾಖೆಯ ನಿರ್ದೇಶಕ ರಮೇಶ್ ಡಿ.ಎಸ್., ‘11 ದಿನಗಳು ನಡೆಯಲಿರುವ ಫಲಪುಷ್ಪ ಪ್ರದರ್ಶನವು 12ನೇ ಶತಮಾನಕ್ಕೆ ಕರೆದೊಯ್ಯಲಿದೆ. ಗಾಜಿನ ಮನೆಯ ಪ್ರವೇಶ ದ್ವಾರದ ಬಳಿ ಇಂಡೋ–ಅಮೆರಿಕನ್ ಹೈಬ್ರಿಡ್ ಸೀಡ್ಸ್ ಕಂಪನಿಯ ಹೂ ಜೋಡಣೆ ಇರಿಸಲಾಗುತ್ತದೆ. ಪೆಲನಾಪ್ಸಿಸ್, ಡೆಂಡ್ರೊಬಿಯಂ ವಾಂಡಾ ಸೇರಿ 20 ಬಗೆಯ ಹೂವುಗಳನ್ನು ಬಳಸಲಾಗುತ್ತದೆ' ಎಂದರು.

‘ಇಲ್ಲಿ ಬಸವಣ್ಣ ಅವರ ಪುತ್ಥಳಿಯನ್ನೂ ಇರಿಸಲಾಗುತ್ತದೆ. ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ಅನುಭವ ಮಂಟಪದ ಪುಷ್ಪ ಮಾದರಿ ತಲೆಯೆತ್ತಲಿದೆ. ಇದು ಬಸವಕಲ್ಯಾಣದಲ್ಲಿ ನಿರ್ಮಾಣದ ಹಂತದಲ್ಲಿರುವ ಅನುಭವ ಮಂಟಪದ ಯಥಾವತ್ ಕಿರು ಪುಷ್ಪ ಪ್ರತಿರೂಪವಾಗಿದ್ದು, 34 ಅಡಿ ಅಗಲ ಮತ್ತು 30 ಅಡಿ ಎತ್ತರ ಇರುತ್ತದೆ. 4.8 ಲಕ್ಷ ಹೂವುಗಳನ್ನು ಬಳಸುತ್ತಿದ್ದು, ಪ್ರದರ್ಶನದ ಅವಧಿಯಲ್ಲಿ ಎರಡು ಬಾರಿಗೆ 9.6 ಲಕ್ಷ ಹೂವುಗಳನ್ನು ಅಳವಡಿಸಲಾಗುತ್ತದೆ’ ಎಂದರು. 

‘ಅನುಭವ ಮಂಟಪದ ಪುಷ್ಪ ಮಾದರಿಯ ಮುಂದೆ ಬಸವಣ್ಣ ಅವರ 10 ಅಡಿ ಎತ್ತರದ ಪ್ರತಿಮೆ ಇರಲಿದೆ. ಬಸವಣ್ಣ ಅವರು ವಚನ ರಚಿಸುವ ಭಂಗಿಯನ್ನು ಇಲ್ಲಿ ನೋಡಬಹುದಾಗಿದೆ. ಗಾಜಿನ ಮನೆಯ ಕೇಂದ್ರ ಭಾಗದ ಬಲಬದಿಗೆ ವಚನಾನುಭವ ಗೋಷ್ಠಿಯನ್ನು ನೆನಪಿಸುವಂತಹ ಕಲಾಕೃತಿಗಳನ್ನು ಪ್ರದರ್ಶಿಸಲಾಗುತ್ತದೆ. ಬಸವಣ್ಣ ಅವರು ವಚನಗಳನ್ನು ವಾಚಿಸುತ್ತಿರುವ ಸನ್ನಿವೇಶದ ಪ್ರತಿಕೃತಿ ಇದಾಗಿರಲಿದೆ’ ಎಂದು ತಿಳಿಸಿದರು.

‘ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ಅನುಭವ ಮಂಟಪದ ಹಿಂಬದಿಗೆ ಬಸವಣ್ಣ ಅವರ ಬದುಕಿನ ವಿವಿಧ ಹಂತಗಳನ್ನು ಪ್ರತಿಬಿಂಬಿಸುವ 5 ಕಲಾಕೃತಿಗಳು ವಿಶೇಷ ಹೂ–ಗಿಡಗಳ ಜೋಡಣೆಯ ನಡುವೆ ಪ್ರದರ್ಶನಗೊಳ್ಳಲಿವೆ. ಕೇಂದ್ರಭಾಗದಲ್ಲಿ ಕೂಡಲಸಂಗಮದಲ್ಲಿರುವ ಬಸವಣ್ಣ ಅವರ ಐಕ್ಯ ಮಂಟಪದ ಪುಷ್ಪ ಮಾದರಿ ಇರುತ್ತದೆ. ಈ ಮಾದರಿಗೆ 1.5 ಲಕ್ಷ ಗುಲಾಬಿ ಹಾಗೂ 2 ಲಕ್ಷ ಸೇವಂತಿಗೆ ಹೂವುಗಳನ್ನು ಬಳಸಲಾಗಿದೆ’ ಎಂದು ತಿಳಿಸಿದರು. 

ಶರಣರ ಪ್ರತಿಮೆ: ‘ಗಾಜಿನ ಮನೆಯ ಒಳಾಂಗಣದ ಹಿಂಬದಿಯ ಆವರಣದಲ್ಲಿ ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ, ಹಡಪದ ಅಪ್ಪಣ್ಣ, ಕುಂಬಾರ ಗುಂಡಣ್ಣ, ಅಕ್ಕ ನಾಗಲಾಂಬಿಕೆ, ಮಡಿವಾಳ ಮಾಚಿದೇವ, ಸಮಗಾರ ಹರಳಯ್ಯ, ಬಾಚಿಕಾಯಕದ ಬಸವಣ್ಣ ಮತ್ತು ಶರಣೆ ಸತ್ಯಕ್ಕನವರ ಪ್ರತಿಮೆಗಳನ್ನು ಪೀಠದ ಮೇಲಿರಿಸಿ, ಪೀಠವನ್ನು ಹೂಗಳಿಂದ ಅಲಂಕರಿಸಲಾಗುತ್ತದೆ. ಗಾಜಿನ ಮನೆಯ ಕೇಂದ್ರ ಭಾಗದ ಎಡಬದಿಗೆ ಆಕರ್ಷಕ ವರ್ಟಿಕಲ್ ಗಾರ್ಡನ್ ಮತ್ತು ಇಷ್ಟಲಿಂಗ ಪರಿಕಲ್ಪನೆಯ ಕಲಾಕೃತಿ ಪ್ರದರ್ಶಿಸಲಾಗುತ್ತದೆ. ಗಾಜಿನ ಮನೆಯ ಒಳಾಂಗಣದಲ್ಲಿ 8 ಅಡಿ ಅಗಲ ಮತ್ತು 7 ಅಡಿ ಉದ್ದದ ಪ್ರದೇಶದಲ್ಲಿ ಪ್ರಾಚೀನ ಓಲೆಗರಿ ಹಸ್ತಪ್ರತಿಗಳು ಮತ್ತು ಅವುಗಳ ಸಂರಕ್ಷಣಾ ವಿಧಾನ, ಮಹತ್ವ ಕುರಿತಂತೆ ವಿಶೇಷ ಪ್ರದರ್ಶನ ಇರುತ್ತದೆ’ ಎಂದು ಹೇಳಿದರು. 

‘ಗಾಜಿನ ಮನೆಯ ಮೂಲೆಯಲ್ಲಿ ಪುಷ್ಪ ಪಿರಮಿಡ್‌ಗಳು ತಲೆಯೆತ್ತಲಿವೆ. ಇದಕ್ಕೆ 15 ಸಾವಿರಕ್ಕೂ ಅಧಿಕ ಹೂ ಕುಂಡಗಳನ್ನು ಬಳಸಲಾಗುತ್ತದೆ. ಬಸವಾದಿ ಶರಣರ ಚಿತ್ರ ಮತ್ತು ವಚನಗಳನ್ನೂ ಗಾಜಿನ ಮನೆಯ ಒಳಗಡೆ ಪ್ರದರ್ಶಿಸಲಾಗುತ್ತದೆ. ಗಾಜಿನ ಮನೆಯ ಹೊರಗಡೆಯೂ ವಿವಿಧ ಆಕರ್ಷಣೆಗಳು ಇರಲಿವೆ. ಆಯ್ದ ಆರು ಸ್ಥಳದಲ್ಲಿ ಎಲ್‌ಇಡಿ ಸ್ಕ್ರೀನ್‌ಗಳ ಮೂಲಕ ಬಸವಣ್ಣ ಅವರ ತತ್ವಗಳನ್ನು ಪ್ರದರ್ಶಿಸಲಾಗುತ್ತದೆ’ ಎಂದು ತಿಳಿಸಿದರು. 

ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ಶಮ್ಲಾ ಇಕ್ಬಾಲ್, ಜಂಟಿ ನಿರ್ದೇಶಕ ಎಂ. ಜಗದೀಶ್, ಉಪನಿರ್ದೇಶಕಿ ಜಿ. ಕುಸುಮಾ ಇದ್ದರು.

ಗಾಜಿನ ಮನೆಯಲ್ಲಿ ಹೂವುಗಳ ಕುಂಡಗಳನ್ನು ಜೋಡಿಸಿ ಇಟ್ಟಿರುವುದು
ಗಾಜಿನ ಮನೆಯಲ್ಲಿ ಹೂವುಗಳ ಕುಂಡಗಳನ್ನು ಜೋಡಿಸಿ ಇಟ್ಟಿರುವುದು
ಬಸವಣ್ಣ ಸೇರಿ ವಿವಿಧ ಶರಣರ ಪ್ರತಿಮೆಗಳನ್ನು ಅನುಭವ ಮಂಟಪ ಮಾದರಿ ಹಿಂಭಾಗ ಇಟ್ಟಿರುವುದು
ಬಸವಣ್ಣ ಸೇರಿ ವಿವಿಧ ಶರಣರ ಪ್ರತಿಮೆಗಳನ್ನು ಅನುಭವ ಮಂಟಪ ಮಾದರಿ ಹಿಂಭಾಗ ಇಟ್ಟಿರುವುದು

Highlights - ಅಂಕಿ–ಅಂಶಗಳು  136 ಉದ್ಯಾನದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾಗಳು 32 ಲಕ್ಷ  ಪ್ರದರ್ಶನಕ್ಕೆ ಬಳಕೆಯಾಗುವ ಹೂವುಗಳು  ₹ 2.85 ಕೋಟಿ ಫಲಪುಷ್ಪ ಪ್ರದರ್ಶನಕ್ಕೆ ಮಂಜೂರಾದ ಅನುದಾನ

ಜೇನು ತುಪ್ಪ ಬ್ರ್ಯಾಂಡ್ ಅನಾವರಣ‌

‘ಫಲಪುಷ್ಪ ಪ್ರದರ್ಶನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ.18ರಂದು ಸಂಜೆ 6 ಗಂಟೆಗೆ ಉದ್ಘಾಟಿಸುತ್ತಾರೆ. ಇದೇ ವೇಳೆ ಕರ್ನಾಟಕದ ಜೇನು ತುಪ್ಪವನ್ನು ನೂತನ ಬ್ರ್ಯಾಂಡ್‌ ಅಡಿ ಲೋಕಾರ್ಪಣೆ ಮಾಡಲಾಗುತ್ತದೆ. ಇಲ್ಲಿನ ಜೇನು ತುಪ್ಪ ತನ್ನದೆಯಾದ ವಿಶೇಷತೆ ಹೊಂದಿದ್ದು ಅದನ್ನು ನೂತನ ಬ್ರ್ಯಾಂಡ್‌ ಅಡಿ ಇನ್ನಷ್ಟು ಜನರಿಗೆ ತಲುಪಿಸಲಾಗುತ್ತದೆ’ ಎಂದು ಶಮ್ಲಾ ಇಕ್ಬಾಲ್ ತಿಳಿಸಿದರು. 

ಮೆಟ್ರೊ ಬಳಸಲು ಮನವಿ

‘ಲಾಲ್‌ಬಾಗ್ ಸುತ್ತಮುತ್ತ ವಾಹನ ಪಾರ್ಕಿಂಗ್‌ಗೆ ಸೂಕ್ತ ಸ್ಥಳಾವಕಾಶ ಇಲ್ಲದಿರುವುದರಿಂದ ಸಾಧ್ಯವಾದಷ್ಟು ಮೆಟ್ರೊ ರೈಲುಗಳನ್ನು ಬಳಸುವುದು ಉತ್ತಮ. ಲಾಲ್‌ಬಾಗ್ ಪಶ್ಚಿಮ ದ್ವಾರಕ್ಕೆ ಹೊಂದಿಕೊಂಡು ಮೆಟ್ರೊ ನಿಲ್ದಾಣ ಇರುವುದರಿಂದ ಬರುವವರಿಗೆ ಅನುಕೂಲ ಆಗಲಿದೆ. ನಾಲ್ಕು ಚಕ್ರಗಳ ವಾಹನಗಳಿಗೆ ಶಾಂತಿನಗರ ಬಸ್‌ನಿಲ್ದಾಣದ ಬಹುಮಹಡಿ ವಾಹನ ನಿಲ್ದಾಣ ಜೋಡಿ ರಸ್ತೆಯ ಬಳಿಯ ಹಾಪ್‌ಕಾಮ್ಸ್ ಆವರಣ ಹಾಗೂ ಜೆ.ಸಿ. ರಸ್ತೆಯಲ್ಲಿರುವ ಬಿಬಿಎಂಪಿ ಬಹುಮಹಡಿ ವಾಹನ ನಿಲ್ದಾಣದಲ್ಲಿ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ. ದ್ವಿಚಕ್ರ ವಾಹನಗಳಿಗೆ ಲಾಲ್‌ಬಾಗ್ ಮುಖ್ಯದ್ವಾರದ ಬಳಿ ಇರುವ ಅಲ್ ಅಮೀನ್ ಕಾಲೇಜು ಆವರಣದಲ್ಲಿ ಅವಕಾಶ ನೀಡಲಾಗುತ್ತದೆ’ ಎಂದು ರಮೇಶ್ ಡಿ.ಎಸ್. ವಿವರಿಸಿದರು. 

ಪ್ರವೇಶ ಶುಲ್ಕ 

*ವಯಸ್ಕರಿಗೆ; ₹ 80

* ಮಕ್ಕಳಿಗೆ (12 ವರ್ಷದೊಳಗೆ) ₹ 30

* ರಜಾ ದಿನಗಳಲ್ಲಿ; ₹ 100

* ಸಮವಸ್ತ್ರ ಧರಿಸಿದ 10ನೇ ತರಗತಿವರೆಗಿನ ಶಾಲಾ ವಿದ್ಯಾರ್ಥಿಗಳಿಗೆ ಪ್ರವೇಶ ಉಚಿತ

*ಪ್ರದರ್ಶನದ ಸಮಯ ಬೆಳಿಗ್ಗೆ 6ರಿಂದ ಸಂಜೆ 6.30

ಟಿಕೆಟ್‌ ಎಲ್ಲಿ ಲಭ್ಯ?

ಲಾಲ್‌ಬಾಗ್‌ನ ನಾಲ್ಕೂ ಪ್ರವೇಶ ದ್ವಾರಗಳಲ್ಲಿ ಟಿಕೆಟ್ ದೊರೆಯಲಿದೆ. ತೋಟಗಾರಿಕೆ ಇಲಾಖೆಯ ಜಾಲತಾಣದ ಮೂಲಕ ಆನ್‌ಲೈನ್‌ನಲ್ಲಿಯೂ ಟಿಕೆಟ್ ಪಡೆಯುವ ಅವಕಾಶ ನೀಡಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT