ಮಂಗಳವಾರ, ಅಕ್ಟೋಬರ್ 27, 2020
18 °C

ಕಲಾಗ್ರಾಮ: ವರ್ಷಾಂತ್ಯಕ್ಕೆ ಗ್ರಾಫಿಕ್ ಸ್ಟುಡಿಯೊ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯ ಗ್ರಾಫಿಕ್ ಸ್ಟುಡಿಯೊ ವರ್ಷಾಂತ್ಯಕ್ಕೆ ಅನಾವರಣಗೊಳ್ಳಲಿದೆ. 

ಎಂ.ಎಸ್. ಮೂರ್ತಿ ಅವರು ಅಕಾಡೆಮಿಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಗ್ರಾಫಿಕ್ ಸ್ಟುಡಿಯೊದ ಶಂಕುಸ್ಥಾಪನೆ ನೆರವೇರಿತ್ತು. ಮೊದಲ ಹಂತದಲ್ಲಿ ₹3.31 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿತ್ತು. ಬಳಿಕ ಅನುದಾನ ಬಿಡುಗಡೆ ಆಗಿರಲಿಲ್ಲ. ಹಾಗಾಗಿ, ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಸರ್ಕಾರ ಇತ್ತೀಚೆಗೆ ₹ 3.33 ಕೋಟಿ ಬಿಡುಗಡೆ ಮಾಡಿದ್ದು, ಎರಡು ಮಹಡಿಯ ಕಟ್ಟಡ ನಿರ್ಮಾಣವಾಗುತ್ತಿದೆ. ಇದರ ವಿನ್ಯಾಸವು ದೆಹಲಿಯ ಗರಿ ಸ್ಟುಡಿಯೊ ಮಾದರಿ ಇರಲಿದ್ದು, ಡಿಸೆಂಬರ್‌ ವೇಳೆಗೆ ಕಾಮಗಾರಿ ಪೂರ್ಣಗೊಳಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೂಚಿಸಿದೆ.

’ಸುಸಜ್ಜಿತ ಗ್ರಾಫಿಕ್ ಸ್ಟುಡಿಯೊ ನಿರ್ಮಾಣ ಮಾಡಬೇಕೆನ್ನುವ ಕೂಗು ಹಲವು ವರ್ಷಗಳಿಂದಿತ್ತು. ಈಗ ಅದು ಸಾಕಾರಗೊಳ್ಳುತ್ತಿದೆ. ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಪ್ರಶಾಂತ ವಾತಾವರಣದಲ್ಲಿ ಕಲಾಕೃತಿಗಳ ರಚನೆ ಮತ್ತು ಪ್ರದರ್ಶನ ಮಾಡಲು ಈ ಸ್ಟುಡಿಯೊ ಅನುಕೂಲವಾಗಲಿದೆ‘ ಎಂದು ಅಕಾಡೆಮಿಯ ಅಧ್ಯಕ್ಷ ಡಿ. ಮಹೇಂದ್ರ ’ಪ್ರಜಾವಾಣಿ‘ಗೆ ತಿಳಿಸಿದರು.

ವಿಶಾಲವಾದ ಸ್ಟುಡಿಯೊ: ’25 ಕಲಾವಿದರು ಕೆಲಸ ಮಾಡುವಷ್ಟು ಅವಕಾಶ ಸ್ಟುಡಿಯೊದಲ್ಲಿ ಇರಲಿದೆ. ಲಿಥೋಗ್ರಾಫಿ ಸೇರಿದಂತೆ ಕಲೆಗೆ ಸಂಬಂಧಿಸಿದ ವಿವಿಧ ಯಂತ್ರಗಳು ಇರಲಿವೆ. ಪ್ರದರ್ಶನ ಗ್ಯಾಲರಿಯಲ್ಲಿ ಲಲಿತಕಲೆ ಹಾಗೂ ಶಿಲ್ಪಕಲೆಯ ಕಲಾಕೃತಿಗಳನ್ನು ಪ್ರದರ್ಶಿಸಲಾಗುತ್ತದೆ. ಕಲೆಯ ಬೆಳವಣಿಗೆಗೆ ಈ ಸ್ಟುಡಿಯೊ ಸಹಕಾರಿಯಾಗಲಿದೆ. ಅಕಾಡೆಮಿಯ ಆಡಳಿತ ಕಚೇರಿ ಕೂಡ ಕಲಾಗ್ರಾಮಕ್ಕೆ ಶೀಘ್ರದಲ್ಲಿಯೇ ಸ್ಥಳಾಂತರವಾಗಲಿದೆ‘ ಎಂದರು.

ಸ್ಟುಡಿಯೊದ ಕಟ್ಟಡವು 9,846 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗಲಿದೆ. ಕಟ್ಟಡದ ನೆಲಮಹಡಿಯ ವಿಸ್ತೀರ್ಣ 7,371 ಚದರ ಅಡಿ ಇದ್ದು, ಇದರಲ್ಲಿ ನಾಲ್ಕು ಸ್ಟುಡಿಯೊಗಳನ್ನು ನಿರ್ಮಿಸಲಾಗುತ್ತಿದೆ. ಪ್ರತಿಯೊಂದು ಸ್ಟುಡಿಯೊದಲ್ಲಿಯೂ ಪಡಸಾಲೆ, ಉಗ್ರಾಣ, ಶೌಚಾಲಯ ಇರಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.