ಶುಕ್ರವಾರ, ಜನವರಿ 27, 2023
19 °C

18 ವರ್ಷದಿಂದ ಸ್ವಾಧೀನಕ್ಕೆ ಬಾರದ ನಿವೇಶನ: ಸುರೇಶ್‌ಕುಮಾರ್‌ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನೇತ್ರ ತಜ್ಞರಾಗಿರುವ ಡಾ. ವಿಶ್ವಮೂರ್ತಿ ಅವರಿಗೆ 2014ರಲ್ಲಿ ಹಂಚಿಕೆಯಾಗಿದ್ದ ನಿವೇಶನವನ್ನು ಈವರೆಗೂ ಹಸ್ತಾಂತರಿಸದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧಿಕಾರಿಗಳ ಧೋರಣೆ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಪ್ರಾಧಿಕಾರದ ಆಯುಕ್ತರಿಗೆ ಪತ್ರ ಬರೆದಿರುವ ಶಾಸಕ ಎಸ್‌. ಸುರೇಶ್‌ಕುಮಾರ್‌, ಶೀಘ್ರವಾಗಿ ಸಮಸ್ಯೆ ಪರಿಹರಿಸುವಂತೆ ಕೋರಿದ್ದಾರೆ.

ಬಿಡಿಎ ಆಯುಕ್ತ ಜಿ. ಕುಮಾರ ನಾಯಕ್ ಅವರಿಗೆ ಬುಧವಾರ ಪತ್ರ ಬರೆದಿರುವ ಅವರು, ‘ವಿಶ್ವಮೂರ್ತಿಯವರು ನಿವೇಶನ ಕೋರಿ 1984ರಲ್ಲಿ ಬಿಡಿಎಗೆ ಅರ್ಜಿ ಸಲ್ಲಿಸಿದ್ದರು. 2004ರಲ್ಲಿ ಬನಶಂಕರಿ ಆರನೇ ಹಂತದ ಬಡಾವಣೆಯಲ್ಲಿ ಅವರಿಗೆ ನಿವೇಶನ ಹಂಚಿಕೆ ಮಾಡಲಾಗಿತ್ತು. ಸದರಿ ನಿವೇಶನ ತಲಘಟ್ಟಪುರ ಕೆರೆ ಪಕ್ಕದಲ್ಲಿತ್ತು. 2015ರವರೆಗೂ ಅಲ್ಲಿಗೆ ಯಾವುದೇ ಮೂಲಸೌಕರ್ಯ ಕಲ್ಪಿಸಿರಲಿಲ್ಲ. 2016ರಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ನಿವೇಶನವನ್ನು ಸ್ಮಶಾನ ಮಾಡಿಕೊಂಡಿದ್ದರು’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘2017ರಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನೀಡಿದ ಆದೇಶದಿಂದ ನಿವೇಶನದ ಜಮೀನು ಕೆರೆಯ ‘ಬಫರ್‌ ಝೋನ್‌’ ವ್ಯಾಪ್ತಿಗೆ ಸೇರಿತು. ನಂತರ ಅದೇ ಬಡಾವಣೆಯ ಆರನೇ ಟಿ ಬ್ಲಾಕ್‌ನಲ್ಲಿ ಬದಲಿ ನಿವೇಶನ ಹಂಚಿಕೆ ಮಾಡಲಾಗಿತ್ತು. ಈಗ ಅದೇ ನಿವೇಶನವನ್ನು ಪತ್ರಕರ್ತರೊಬ್ಬರಿಗೆ ಹಂಚಿಕೆ ಮಾಡಿರುವ ಮಾಹಿತಿ ಬಿಡಿಎ ಅಧಿಕಾರಿಗಳಿಂದ ಲಭಿಸಿದೆ. ಪುನಃ ಬದಲಿ ನಿವೇಶನ ಕೋರಿ ವಿಶ್ವಮೂರ್ತಿ ಸಲ್ಲಿಸಿರುವ ಅರ್ಜಿ ಬಿಡಿಎ ವಿಚಕ್ಷಣಾ ದಳದಲ್ಲಿದೆ’ ಎಂದು ಪ್ರಕರಣವನ್ನು ವಿವರಿಸಿದ್ದಾರೆ.

‘ವಿಶ್ವಮೂರ್ತಿಯವರ ಪ್ರಕರಣ ಯಾರಿಗೇ ಆದರೂ ಬೇಸರ ತರುವಂಥದ್ದು. 1984ರಿಂದ ನಿವೇಶನ ಪಡೆಯಲು ಪ್ರಯತ್ನಿಸುತ್ತಲೇ ಇರುವ, ನಿವೇಶನ ಹಂಚಿಕೆಯಾದರೂ ಸ್ವಾಧೀನಕ್ಕೆ ಪಡೆಯಲಾಗದೆ ವಂಚಿತ ರಾಗಿರುವ ಅವರಿಗೆ ತ್ವರಿತವಾಗಿ ಬದಲಿ ನಿವೇಶನ ನೀಡಬೇಕು’ ಎಂದು ಪತ್ರದಲ್ಲಿ ಸುರೇಶ್‌ಕುಮಾರ್‌ ಕೋರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು