ಗುರುವಾರ , ಆಗಸ್ಟ್ 22, 2019
22 °C
ಆರು ವರ್ಷದ ಬಳಿಕ ಶಿಕ್ಷೆ ಪ್ರಕಟ

ಸ್ನೇಹಿತನ ಹಲ್ಲೆ ಪ್ರಶ್ನಿಸಿದ್ದಕ್ಕೆ ಕೊಲೆ; ಶಿಕ್ಷೆ

Published:
Updated:

ಬೆಂಗಳೂರು: ಸ್ನೇಹಿತನ ಮೇಲಿನ ಹಲ್ಲೆಯನ್ನು ಪ್ರಶ್ನಿಸಿದ್ದ ಗೌರೀಶ್ ಎಂಬುವರನ್ನು ಕೊಲೆ ಮಾಡಿದ್ದ ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ನಗರದ 59ನೇ ಸಿಸಿಎಚ್‌ ನ್ಯಾಯಾಲಯ ತೀರ್ಪು ಹೊರಡಿಸಿದೆ.

ಶರತ್‌ ಕುಮಾರ್ ಹಾಗೂ ಅಬ್ಬಾಸ್ ಶಿಕ್ಷೆಗೆ ಗುರಿಯಾದವರು. ಅವರಿಬ್ಬರಿಗೂ ತಲಾ ₹ 40 ಸಾವಿರ ದಂಡ ಸಹ ವಿಧಿಸಲಾಗಿದೆ. ಕೆಂಗೇರಿ ಠಾಣೆ ವ್ಯಾಪ್ತಿಯಲ್ಲಿ 2013ರಲ್ಲಿ ನಡೆದಿದ್ದ ಕೊಲೆ ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶರಾದ ಕೆ.ಬಿ. ಗೀತಾ ನಡೆಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಎಸ್. ರೇವಣಸಿದ್ಧಪ್ಪ ವಾದಿಸಿದ್ದರು.

ಪ್ರಕರಣದ ವಿವರ: ‘ಕೆಂಗೇರಿ ಉಪನಗರ ಸಮೀಪದ ಗಾಂಧಿನಗರದಲ್ಲಿ ಮೋಹನ್ ಎಂಬುವರ ಜೊತೆಯಲ್ಲಿ ಸ್ನೇಹಿತ ಗೌರೀಶ್ ಹಾಗೂ ಹಲವರು ಮಾತನಾಡುತ್ತ ನಿಂತಿದ್ದರು. ಗ್ಯಾಂಗ್ ಕಟ್ಟಿಕೊಂಡು ಸ್ಥಳಕ್ಕೆ ಬಂದಿದ್ದ ಆರೋಪಿಗಳು, ಮೋಹನ್ ಅವರ ಜೊತೆ ಜಗಳ ತೆಗೆದು ಚಾಕುವಿನಿಂದ ಚುಚ್ಚಿ ಕೊಲೆ ಮಾಡಲು ಮುಂದಾಗಿದ್ದರು’ ಎಂದು ರೇವಣಸಿದ್ಧಪ್ಪ ಹೇಳಿದರು.

‘ಮೋಹನ್ ಅವರ ಸಹಾಯಕ್ಕೆ ಹೋದ ಗೌರೀಶ್, ‘ಏಕೆ ಹಲ್ಲೆ ಮಾಡುತ್ತಿದ್ದೀರಾ’ ಎಂದು ಪ್ರಶ್ನಿಸಿದ್ದರು. ಆತನ ವಿರುದ್ಧವೇ ತಿರುಗಿಬಿದ್ದಿದ್ದ ಆರೋಪಿಗಳು, ‘ಅದನ್ನೆಲ್ಲ ಕೇಳಲು ನೀನ್ಯಾರು’ ಎಂದು ಬೆದರಿಸಿ ಚಾಕುವಿನಿಂದ ಮೈಯೆಲ್ಲ ಇರಿದಿದ್ದರು. ಗಲಾಟೆ ಕಂಡ ಸ್ಥಳೀಯರು, ಆರೋ ಪಿಗಳನ್ನು ಹಿಡಿಯಲು ಹೋದಾಗ ಅವರೆಲ್ಲ ಅಲ್ಲಿಂದ ಪರಾರಿಯಾಗಿದ್ದರು.’

‘ಗಾಯಗೊಂಡಿದ್ದ ಗೌರೀಶ್ ಚಿಕಿತ್ಸೆಗೆ ಸ್ಪಂದಿಸದೇ 2013ರ ಮೇ 25ರಂದು ಅವರು ಮೃತಪಟ್ಟಿದ್ದರು. ಕೊಲೆ ಸಂಬಂಧ ಕೆಂಗೇರಿ ಠಾಣೆ ಇನ್‌ಸ್ಪೆಕ್ಟರ್ ಕೆ.ಪಿ. ಸತ್ಯನಾರಾಯಣ, 33 ಸಾಕ್ಷಿದಾರರ ಹೇಳಿಕೆ ಹಾಗೂ ಹಲವು ದಾಖಲೆಗಳ ಸಮೇತ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು’ ಎಂದು ರೇವಣಸಿದ್ಧಪ್ಪ ವಿವರಿಸಿದರು. 

Post Comments (+)