ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯ ವಶ: ಎಫ್ಐಆರ್ ರದ್ದುಪಡಿಸಿದ ಹೈಕೋರ್ಟ್

Published 11 ಮೇ 2024, 16:32 IST
Last Updated 11 ಮೇ 2024, 16:32 IST
ಅಕ್ಷರ ಗಾತ್ರ

ಬೆಂಗಳೂರು: ‘ಒಂದೆಡೆ ಮದ್ಯ ಪೂರೈಕೆಗೆ ಅನುಮತಿ ನೀಡಿ, ಮತ್ತೊಂದೆಡೆ ಮಾದರಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹೆಸರಿನಲ್ಲಿ ಎರಡು ಟ್ರಕ್‌ ಗಳಲ್ಲಿದ್ದ ಮದ್ಯ ವಶಕ್ಕೆ ತೆಗೆದುಕೊಂಡಿದ್ದು ಎಷ್ಟರಮಟ್ಟಿಗೆ ಸರಿ’ ಎಂದು ಪ್ರಶ್ನಿಸಿರುವ ಹೈಕೋರ್ಟ್, ಈ ಸಂಬಂಧ ‘ಕಲ್ಪತರು ಬ್ರಿವರೀಸ್‌ ಆ್ಯಂಡ್‌ ಡಿಸ್ಟಿಲರೀಸ್‌ ಸಂಸ್ಥೆ’ ವಿರುದ್ಧ ದಾಖಲಿಸಲಾಗಿದ್ದ ಎರಡು ಎಫ್‌ಐಆರ್‌ಗಳನ್ನು ರದ್ದುಪಡಿಸಿದೆ.

ಎರಡು ಟ್ರಕ್‌ ಗಳಲ್ಲಿದ್ದ ಮದ್ಯ ವಶಪಡಿಸಿಕೊಂಡು, ಎಫ್‌ಐಆರ್‌ ದಾಖಲಿಸಿದ್ದನ್ನು ಪ್ರಶ್ನಿಸಿ, ‘ಕಲ್ಪತರು ಬ್ರಿವರೀಸ್‌ ಆ್ಯಂಡ್‌ ಡಿಸ್ಟಿಲರೀಸ್‌ ಸಂಸ್ಥೆ’ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ರಜಾಕಾಲದ ಪೀಠದಲ್ಲಿದ್ದ ನ್ಯಾಯಮೂರ್ತಿ ಎಂ.ಜಿ. ಉಮಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.

‘ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದಾಗ, ಕರ್ನಾಟಕ ರಾಜ್ಯ ಪಾನೀಯ ನಿಗಮವು (ಕೆಎಸ್‌ ಬಿಸಿಎಲ್‌) ಮದ್ಯ ಪೂರೈಸಲು ಏಕೆ ಅನುಮತಿ ನೀಡಬೇಕಿತ್ತು’ ಎಂದು ನ್ಯಾಯಪೀಠ ಪ್ರಶ್ನಿಸಿದೆ.

‘ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಮದ್ಯ ಸಾಗಣೆಗೆ ಅಬಕಾರಿ ಇಲಾಖೆಯೇ ಪರವಾನಗಿ ನೀಡಿದೆ. ಮತ್ತು ಅದೇ ಇಲಾಖೆಯ ಅಧಿಕಾರಿಗಳು ನೀತಿ ಸಂಹಿತೆ ಉಲ್ಲಂಘನೆ ಕಾರಣದಡಿ ಎರಡು ಟ್ರಕ್‌ಗಳಲ್ಲಿ ತುಂಬಿದ್ದ ಮದ್ಯ ವಶಪಡಿಸಿಕೊಂಡಿರುವುದು ಕಾನೂನಿನ ದುರ್ಬಳಕೆಯಾಗಿದೆ’ ಎಂದು ಅಭಿಪ್ರಾಯಪಟ್ಟಿದೆ.

‘ಅರ್ಜಿದಾರರು ಸರಕುಪಟ್ಟಿ (ಇನ್ವಾಯ್ಸ್) ಮತ್ತು ಅಗತ್ಯ ಪರವಾನಗಿ ಹೊಂದಿರುವುದರಿಂದ, ಕರ್ನಾಟಕ ಅಬಕಾರಿ ಕಾಯ್ದೆ- 1965ರ ಕಲಂ 32 ಹಾಗೂ 34ರಡಿ ಅಪರಾಧವಲ್ಲ. ಮೇಲ್ನೋಟಕ್ಕೆ ಇದು ಚುನಾವಣಾ ನೀತಿ ಸಂಹಿತೆ ಹೆಸರಿನಲ್ಲಿ ಇಲಾಖೆ ಮಾಡಿರುವ ಕಾನೂನಿನ ದುರುಪಯೋಗ’ ಎಂದು ಹೇಳಿದೆ.

ಪ್ರಕರಣವೇನು?: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದಾಬಸ್‌ ಪೇಟೆಯ, ಸೋಂಪುರದಲ್ಲಿರುವ ‘ಕಲ್ಪತರು ಬ್ರಿವರೀಸ್‌ ಅಂಡ್‌ ಡಿಸ್ಟಿಲರೀಸ್‌ ಸಂಸ್ಥೆ’ಗೆ ವಿಸ್ಕಿ, ಬಿಯರ್‌ ಮತ್ತಿತರ ಮದ್ಯಗಳನ್ನು ಕೆಎಸ್‌ಬಿಸಿಎಲ್‌ಗೆ ಪೂರೈಸಲು ಅಬಕಾರಿ ಇಲಾಖೆ ಅನುಮೋದನೆ ನೀಡಿತ್ತು.

ಈ ನಿಟ್ಟಿನಲ್ಲಿ ಮಾರ್ಚ್ 16ಂದು ಅಬಕಾರಿ ಇಲಾಖೆ ಪರವಾನಗಿ ನೀಡಿತ್ತು. ಅದರ ಅವಧಿ ಮಾರ್ಚ್ 22ರವರೆಗೆ ಅಸ್ತಿತ್ವದಲ್ಲಿತ್ತು. ಆದರೆ, ಮಾರ್ಚ್ 18ರಂದು ಎರಡು ಟ್ರಕ್‌ಗಳಲ್ಲಿ ಸಾಗಣೆಗಾಗಿ ಭರ್ತಿ ಮಾಡಲಾಗಿದ್ದ ತಲಾ ₹ 26 ಲಕ್ಷ ಮೌಲ್ಯದ ಮದ್ಯವನ್ನು ವಶಕ್ಕೆ ಪಡೆಯಲಾಗಿತ್ತು. ಕಂಪನಿಯ ಆವರಣದಲ್ಲಿ ಸಾಗಣೆಗಾಗಿ ನಿಲ್ಲಿಸಿದ್ದ ಈ ಟ್ರಕ್ ಗಳನ್ನು ಜಪ್ತಿ ಮಾಡಿದ್ದ ಅಬಕಾರಿ ನಿರೀಕ್ಷಕರು, ಕರ್ನಾಟಕ ಅಬಕಾರಿ ಕಾಯ್ದೆಯ ಕಲಂ 32 (ಅಕ್ರಮ ಮದ್ಯ ಸಾಗಣೆ) ಮತ್ತು ಕಲಂ 34ರ (ಅಕ್ರಮ ಮದ್ಯ ಸಂಗ್ರಹ) ಆರೋಪದಡಿ ಎರಡು ಎಫ್‌ಐಆರ್‌ ದಾಖಲಿಸಿದ್ದರು.

‘ಅಬಕಾರಿ ಅಧಿಕಾರಿಗಳ ಈ ಕ್ರಮ ಕಾನೂನು ಬಾಹಿರ’ ಎಂದು ಆಕ್ಷೇಪಿಸಿದ್ದ ಕಂಪನಿ ಹೈಕೋರ್ಟ್‌ ಮೆಟ್ಟಿಲೇರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT