ಬೆಂಗಳೂರು: ಲಾರಿ ಡಿಕ್ಕಿ ಹೊಡೆದು ಟೆಂಪೊದಲ್ಲಿದ್ದ ಮೂವರು ಮೃತಪಟ್ಟು, ಆರು ಮಂದಿ ಗಾಯಗೊಂಡಿರುವ ಘಟನೆ ನೆಲಮಂಗಲ ತಾಲ್ಲೂಕಿನ ಕುಲುವನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬಳಿ ಭಾನುವಾರ ಸಂಭವಿಸಿದೆ.
ಯಾದಗಿರಿಯ ಕಟ್ಟಡ ಕಾರ್ಮಿಕರಾದ ನರಸಪ್ಪ (35), ಹುಸೇನಪ್ಪ(34) ಮತ್ತು ಪಾದಚಾರಿ ತುಮಕೂರು ತಾಲ್ಲೂಕಿನ ಸೀತಕಲ್ಲು ನಿವಾಸಿ ಶಿವಗಂಗಪ್ಪ (55) ಮೃತರು.
ಕಾಂಕ್ರಿಟ್ ಮಿಕ್ಸರ್ ಟ್ರಾಲಿಯೊಂದಿಗೆ ಸಾಗುತ್ತಿದ್ದ ಟೆಂಪೊಗೆ ಲಾರಿ ಡಿಕ್ಕಿ ಹೊಡೆದಿದೆ. ನಂತರ ಮುಂದೆ ಹೋಗುತ್ತಿದ್ದ ಪಾದಚಾರಿಗೂ ಡಿಕ್ಕಿ ಹೊಡೆದಿದೆ.
ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಟೆಂಪೊದಲ್ಲಿದ್ದ ಯಾದಗಿರಿಯ ಲಕ್ಷ್ಮೀ, ಭಾನುಪ್ರಿಯಾ, ಅನಂತಪ್ಪ, ನಾಗರಾಜು, ಸಾಬಣ್ಣ, ಕಟ್ಟಪ್ಪ ಹಾಗೂ ಮೂವರು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಂಗಾರಪ್ಪ ಎಂಬುವವರ ಸ್ಥಿತಿ ಗಂಭೀರವಾಗಿದೆ.
ಮೂವರು ಗಾಯಾಳುಗಳನ್ನು ನೆಲಮಂಗಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ನಂತರ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಂಚಾರ ಅಸ್ತವ್ಯಸ್ತ ಉಂಟಾಗಿತ್ತು. ವಾಹನ ಸವಾರರು ಪರದಾಡಿದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ನೆಲಮಂಗಲ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.