ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಡನನ್ನು ಕೊಂದು ಪ್ರಿಯಕರನ ಜೊತೆ ಪರಾರಿ: ಪತ್ನಿ, ಪ್ರಿಯಕರನ ಬಂಧನ

ತಂದೆ ಕೊಲೆ ರಹಸ್ಯ ಬಿಚ್ಚಿಟ್ಟ ಮಗಳು l ಆರು ತಿಂಗಳ ಬಳಿಕ ಆರೋಪಿಗಳು ಸೆರೆ
Last Updated 7 ಜನವರಿ 2023, 21:15 IST
ಅಕ್ಷರ ಗಾತ್ರ

ಬೆಂಗಳೂರು: ನಂದಿನಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಆಂಜನೇಯ (35) ಎಂಬುವರ ಕೊಲೆ ಪ್ರಕರಣದಲ್ಲಿ ಪತ್ನಿ ಅನಿತಾ (31) ಹಾಗೂ ಅವರ ಪ್ರಿಯಕರ ರಾಕೇಶ್ (26) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

‘ಸಂಜಯಗಾಂಧಿನಗರದ ಕೊಳೆಗೇರಿ ಪ್ರದೇಶದ ನಿವಾಸಿ ಆಂಜನೇಯ ಅವರನ್ನು 2022ರ ಜೂನ್ 18ರಂದು ಉಸಿರುಗಟ್ಟಿಸಿ ಕೊಲೆ ಮಾಡಲಾಗಿತ್ತು. ಇದೊಂದು ಹೃದಯಾಘಾತವೆಂದು ಕಥೆ ಕಟ್ಟಿ ಕುಟುಂಬಸ್ಥರನ್ನು ನಂಬಿಸಿದ್ದ ಪತ್ನಿ ಅನಿತಾ, ಅಂತ್ಯಸಂಸ್ಕಾರವನ್ನೂ ನೆರವೇರಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ಇತ್ತೀಚೆಗೆ ಮನೆ ತೊರೆದಿದ್ದ ಆರೋಪಿ ಅನಿತಾ, ಪ್ರಿಯಕರ ರಾಕೇಶ್ ಜೊತೆ ಹೋಗಿದ್ದರು. ಅನಾಥವಾಗಿದ್ದ 14 ವರ್ಷದ ಮಗಳು, ತಂದೆಯ ಕೊಲೆ ರಹಸ್ಯವನ್ನು ಅಜ್ಜಿಗೆ ತಿಳಿಸಿದ್ದಳು. ಬಳಿಕವೇ ಕುಟುಂಬಸ್ಥರು ಠಾಣೆಗೆ ಬಂದಿದ್ದರು. ಮಗಳಿಂದಲೇ ದೂರು ಪಡೆದು ಪ್ರಕರಣ ದಾಖಲಿಸಿಕೊಂಡು, ಅನಿತಾ ಹಾಗೂ ಉತ್ತರಹಳ್ಳಿಯ ರಾಕೇಶ್‌ನನ್ನು ಬಂಧಿಸಲಾಗಿದೆ’ ಎಂದು ತಿಳಿಸಿದರು.

ಸಹೋದರಿ ಮನೆಗೆ ಹೋದಾಗ ಪರಿಚಯ: ‘ಆಂಜನೇಯ ಹಾಗೂ ಅನಿತಾ, ಹಲವು ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಮಗಳು ಇದ್ದಾಳೆ. ಮದ್ಯವ್ಯಸನಿ ಆಗಿದ್ದ ಆಂಜನೇಯ, ನಿತ್ಯವೂ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ’ ಎಂದು ಪೊಲೀಸರು ಹೇಳಿದರು.

‘ಅನಿತಾ, ಉತ್ತರಹಳ್ಳಿಯಲ್ಲಿರುವ ಸಹೋದರಿ ಮನೆಗೆ ಆಗಾಗ ಹೋಗಿ ಬರುತ್ತಿದ್ದರು. ಅಲ್ಲಿಯೇ ಅವರಿಗೆ ರಾಕೇಶ್ ಪರಿಚಯವಾಗಿತ್ತು. ನಂತರ, ಸ್ನೇಹವಾಗಿ ಸಲುಗೆ ಬೆಳೆದಿತ್ತು. ಇಬ್ಬರೂ ಹಲವೆಡೆ ಸುತ್ತಾಡುತ್ತಿದ್ದರು’ ಎಂದು ತಿಳಿಸಿದರು.

ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ: ‘ಮದ್ಯವ್ಯಸನಿ ಆಗಿರುವ ಪತಿಯನ್ನು ಕೊಲೆ ಮಾಡಬೇಕೆಂದು ಅನಿತಾ ಸಂಚು ರೂಪಿಸಿದ್ದರು. ಅದಕ್ಕೆ ಸಹಕಾರ ನೀಡಲು ರಾಕೇಶ್ ಒಪ್ಪಿದ್ದ’ ಎಂದು ಪೊಲೀಸರು ಹೇಳಿದರು.

‘ಮದ್ಯದ ಅಮಲಿನಲ್ಲಿ ಮನೆಗೆ ಬಂದು ಗಲಾಟೆ ಮಾಡಿದ್ದ ಆಂಜನೇಯ, ಊಟ ಮಾಡಿ ಮಲಗಿದ್ದ. ಅದೇ ಸಂದರ್ಭದಲ್ಲೇ ರಾಕೇಶ್‌ನನ್ನು ಅನಿತಾ ಮನೆಗೆ ಕರೆಸಿಕೊಂಡಿದ್ದರು. ಇಬ್ಬರೂ ಸೇರಿ, ಆಂಜನೇಯ ಮುಖವನ್ನು ದಿಂಬಿನಿಂದ ಮುಚ್ಚಿ ಉಸಿರುಗಟ್ಟಿಸಿ ಕೊಂದಿದ್ದರು. ರಾಕೇಶ್ ಅಲ್ಲಿಂದ ಪರಾರಿಯಾಗಿದ್ದ. ಕೃತ್ಯವನ್ನು ಮಗಳು ಸಹ ನೋಡಿದ್ದಳು. ತಂದೆ ಕುಡಿದು ಬಂದು ಗಲಾಟೆ ಮಾಡುತ್ತಿದ್ದರಿಂದ ಕೊಂದಿರುವುದಾಗಿ ಹೇಳಿದ್ದ ಅನಿತಾ, ವಿಷಯವನ್ನು ಯಾರಿಗೂ ಹೇಳಬೇಡವೆಂದು ತಾಕೀತು ಮಾಡಿದ್ದರು.’

‘ಪತಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ’ ಎಂಬುದಾಗಿ ಹೇಳಿ ಸ್ಥಳೀಯರನ್ನು ಸೇರಿಸಿದ್ದ ಅನಿತಾ, ಗೋಳಾಡಿದ್ದರು. ಅದನ್ನು ನಂಬಿದ್ದ ಸ್ಥಳೀಯರು ಹಾಗೂ ಕುಟುಂಬಸ್ಥರು, ಅಂತ್ಯಸಂಸ್ಕಾರ ಸಹ ನೆರವೇರಿಸಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಮೃತದೇಹ ಹೊರತೆಗೆಯಲು ಸಿದ್ಧತೆ’

‘ಆಂಜನೇಯ ಅವರದ್ದು ಕೊಲೆ ಎಂಬುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಗೊರಗುಂಟೆಪಾಳ್ಯ ಬಳಿಯ ಸ್ಮಶಾನದಲ್ಲಿ ಆಂಜನೇಯ ಮೃತದೇಹವನ್ನು ಹೂಳಲಾಗಿದೆ. ಅದನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಬೇಕಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT