ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇವಪುರ: ತೆರವು ಕಾರ್ಯಾಚರಣೆ ಸ್ಥಗಿತ

ದಾಸರಹಳ್ಳಿ, ಯಲಹಂಕ ವಲಯದಲ್ಲಿ ಮುಂದುವರಿದ ಒತ್ತುವರಿ ತೆರವು ಕಾರ್ಯಾಚರಣೆ
Last Updated 16 ಸೆಪ್ಟೆಂಬರ್ 2022, 20:06 IST
ಅಕ್ಷರ ಗಾತ್ರ

ಬೆಂಗಳೂರು: ಅತಿಮಳೆಯಿಂದ ರಾಜಕಾಲುವೆಗಳು ಉಕ್ಕಿಹರಿದು ಜಲಾವೃತವಾಗಿದ್ದ ಮಹದೇಪುರದಲ್ಲಿ
ಒತ್ತುವರಿ ತೆರವು ಕಾರ್ಯಾಚರಣೆ ಸ್ಥಗಿತಗೊಂಡಿದ್ದು, ಒತ್ತುವರಿ ಸರ್ವೆ, ಮಾರ್ಕಿಂಗ್‌ಗೆ ಇಲ್ಲಿನ ಕೆಲಸ ಸೀಮಿತಗೊಂಡಿದೆ. ದಾಸರಹಳ್ಳಿ ಹಾಗೂ ಯಲಹಂಕ ವಲಯದಲ್ಲಿ ಗುರುವಾರ ಆರಂಭಿಸಿದ್ದ ತೆರವು ಕಾರ್ಯಾಚರಣೆಯನ್ನು ಪೂರ್ಣಗೊಳಿಸಲಾಗಿದೆ. ಯಾವ ಪ್ರದೇಶದಲ್ಲೂ ಹೊಸದಾಗಿ ಕಾರ್ಯಾಚರಣೆಯನ್ನು ಶುಕ್ರವಾರ ಆರಂಭಿಸಿಲ್ಲ.

ದಾಸರಹಳ್ಳಿಯ ನೆಲಗದರನಹಳ್ಳಿ ರಸ್ತೆ ರುಕ್ಮಿಣಿ ನಗರದಲ್ಲಿ ತೆರವು ಕಾರ್ಯಾಚರಣೆಯನ್ನು ಮುಂದುವರಿಸಿ, ಬಾಕಿ ಕೆಲಸ ಪೂರ್ಣಗೊಳಿಸಲಾಗಿದೆ. ಯಲಹಂಕ ವಲಯ ಕುವೆಂಪುನಗರ ವಾರ್ಡ್ ಸಿಂಗಾಪುರ ಲೇಔಟ್‌ನಲ್ಲಿ ಒತ್ತುವರಿಯಾಗಿದ್ದ ಲ್ಯಾಂಡ್ ಮಾರ್ಕ್ ಅಪಾರ್ಟ್‌ಮೆಂಟ್‌ನಲ್ಲಿ ಬಾಕಿಯಿದ್ದ ಕೆಲಸವನ್ನು ಪೂರ್ಣಗೊಳಿಸಲಾಗಿದೆ.

ಸರ್ವೆ ಕಾರ್ಯ ಚುರುಕು: ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆಯ ತಹಶೀಲ್ದಾರ್ ನೇತೃತ್ವದಲ್ಲಿ ವಾಗ್ದೇವಿ ಮುನ್ನೇಕೊಳಾಲು, ಕಸವನಹಳ್ಳಿ ಗ್ರಾಮ, ದೊಡ್ಡಕನ್ನಹಳ್ಳಿಯ ಎ.ಬಿ.ಕೆ ವಿಲೇಜ್, ಪ್ರೆಸ್ಟೀಜ್ ಟೆಕ್ ಪಾರ್ಕ್, ವಿಪ್ರೋ, ಸನ್ನಿ ಬ್ರೂಕ್ಸ್, ಬೆಳತ್ತೂರು ಗ್ರಾಮ, ಸಾದರಮಂಗಲ ಗ್ರಾಮ, ಬಿಲ್ಲಿನೇನಿ ಸಾಸ ಅಪಾರ್ಟ್‌ಮೆಂಟ್‌ ಒಳ ಪ್ರದೇಶ, ಸಾಯಿ ಗಾರ್ಡನ್ ಬಡಾವಣೆ, ವರ್ತೂರಿನಿಂದ ಶೀಲವಂತನ ಕೆರೆ ಸೇರಿ ಇನ್ನಿತರೆ ಕಡೆ ಸರ್ವೆ ಕಾರ್ಯ ನಡೆಸಿ ಮಾರ್ಕಿಂಗ್ ಮಾಡಲಾಗುತ್ತಿದೆ ಎಂದು ವಲಯ ಮುಖ್ಯ ಎಂಜಿನಿಯರ್‌ ಬಸವರಾಜ ಕಬಾಡೆ ತಿಳಿಸಿದ್ದಾರೆ.

ಸರ್ವೆ ಮಾಡಿ ಮಾರ್ಕ್ ಮಾಡಿದ ನಂತರ ಖಾಲಿ ಜಾಗ, ಕಾಂಪೌಂಡ್ ಇದ್ದಲ್ಲಿ ಕೂಡಲೇ ತೆರವು ಕಾರ್ಯಾಚರಣೆ ನಡೆಸಲಾಗುವುದು. ರಾಜಕಾಲುವೆಗಳ ಮೇಲೆ ಜನರು ವಾಸಿಸುವ ಮನೆಗಳಿದ್ದಲ್ಲಿ ಸಂಬಂಧಪಟ್ಟವರಿಗೆ ಕಂದಾಯ ಇಲಾಖೆಯ ತಹಶಿಲ್ದಾರರಿಂದ ನೋಟಿಸ್ ನೀಡಿ ಮೂರು ದಿನ ಅವಕಾಶ ನೀಡಲಾಗುತ್ತದೆ. ಅದಾದ ಬಳಿಕ ನಿಯಮಾನುಸಾರ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದಿದ್ದಾರೆ.

ರಾಜಕಾಲುವೆ: ಬಿಬಿಎಂಪಿಗೆ ಗಡುವು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ರಾಜಕಾಲುವೆ ಒತ್ತುವರಿಗೆ ಸಂಬಂಧಿಸಿದಂತೆ ಮಹಾಲೇಖಪಾಲರ (ಸಿಎಜಿ) ವರದಿಯಲ್ಲಿ ಉಲ್ಲೇಖಿಸಲಾಗಿರುವ ಅಂಶಗಳ ಕುರಿತು ಮಾಹಿತಿ ಒದಗಿಸಲು ಬಿಬಿಎಂಪಿಗೆ ಹೈಕೋರ್ಟ್ ಇದೇ 19ರ ವರೆಗೆ ಕಾಲಾವಕಾಶ ನೀಡಿದೆ.

ಬೆಂಗಳೂರು ನಗರ ವ್ಯಾಪ್ತಿಯಲ್ಲಿನ ರಸ್ತೆ ಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿದಂತೆ ವಿಜಯನ್ ಮೆನನ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರು ಪಾಲಿಕೆ ಪರ ವಕೀಲರಿಗೆ, ‘ರಾಜಕಾಲುವೆ ಒತ್ತುವರಿಗೆ ಸಂಬಂಧಿಸಿದ ಸಿಎಜಿ ವರದಿ ಎಲ್ಲಿ’ ಎಂದು ಪ್ರಶ್ನಿಸಿದರು. ಇದಕ್ಕೆ ಬಿಬಿಎಂಪಿ ವಕೀಲರು, ‘ಸಿಎಜಿ ವರದಿ ಸಲ್ಲಿಕೆಗೆ ಇನ್ನಷ್ಟು ಕಾಲಾವಕಾಶ ನೀಡಬೇಕು’ ಎಂದು ಕೋರಿದರು.

ಇದನ್ನು ಪರಿಗಣಿಸಿದ ನ್ಯಾಯಪೀಠ, ‘ಮುಂದಿನ ವಿಚಾರಣೆ ವೇಳೆಗೆ ರಾಜಕಾಲುವೆ ಒತ್ತುವರಿಗೆ ಸಂಬಂಧಿಸಿದ ಸಿಎಜಿ ವರದಿ ಹಾಗೂ ರಸ್ತೆಗುಂಡಿ ಮುಚ್ಚುವ ಕಾಮಗಾರಿಗೆ ಸಂಬಂಧಿಸಿದ ಸಮಗ್ರ ವರದಿಗಳನ್ನೂ ಸಲ್ಲಿಸಬೇಕು’ ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT