ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಟ್ಯಾಂಕರ್‌ಗಳಿಂದ ರಸ್ತೆ ‘ಪಂಕ್ಚರ್‌’!

ಮಹದೇವಪುರ ಕ್ಷೇತ್ರದ ಸೋರಹುಣಸೆ, ವಾಲೇಪುರ ಸುತ್ತ–ಮುತ್ತ ಅವ್ಯವಸ್ಥೆ
Last Updated 23 ಅಕ್ಟೋಬರ್ 2019, 20:04 IST
ಅಕ್ಷರ ಗಾತ್ರ

ಬೆಂಗಳೂರು: ಮಹದೇವಪುರ ಕ್ಷೇತ್ರದ ಸೋರಹುಣಸೆ ರಸ್ತೆಯಲ್ಲಿ ನೀವು ಹತ್ತು ನಿಮಿಷ ನಿಂತರೆ, ನೀರಿನ ಐದು ಬೃಹತ್‌ ಟ್ಯಾಂಕರ್‌ಗಳು ನಿಮ್ಮ ಮುಂದೆ ಹಾದು ಹೋಗುತ್ತವೆ. ರಸ್ತೆಯಲ್ಲಿ ಗುಂಡಿಗಳನ್ನು ಸೃಷ್ಟಿಸುತ್ತಾ, ಮಣ್ಣಿನ ರಸ್ತೆಗಳನ್ನು ಕೆಸರುಮಯವಾಗಿಸುತ್ತಾ ಈ ಟ್ಯಾಂಕರ್‌ಗಳು ಸಾಗುತ್ತವೆ.

ನೀರಿನ ಸಮಸ್ಯೆ ಪರಿಹರಿಸಲು ಮಾಡಿಕೊಂಡಿರುವ ಈ ವ್ಯವಸ್ಥೆ, ಸಂಚಾರ ದಟ್ಟಣೆಯ ಸಮಸ್ಯೆಯನ್ನು ಸೃಷ್ಟಿಸುತ್ತಿದೆ.ಸೋರಹುಣಸೆಯಿಂದ ಇಮ್ಮಡಿಹಳ್ಳಿ, ಹಗದೂರು, ವೈಟ್‍ಫೀಲ್ಡ್ ಕಡೆಗೆ ಹೋಗುವವರು ಈ ರಸ್ತೆಯನ್ನು ಬಳಸುತ್ತಾರೆ. ತಾತ್ಕಾಲಿಕವಾಗಿ ಹಾಕಿರುವ ಜಲ್ಲಿಕಲ್ಲುಗಳು ಅತ್ತಿತ್ತ ಹರಡಿಕೊಂಡಿವೆ. ಅಲ್ಲಲ್ಲಿ ಹಾಕಿರುವ ವೈಟ್‌ ಮಿಕ್ಸ್‌ ಈ ಭಾರಿ ವಾಹನಗಳ ಓಡಾಟದಿಂದ ಕುಸಿದು ಹೋಗಿದೆ.

ನೀರು ಮಾರಾಟ: ‘ಸೋರಹುಣಸೆ ಯಿಂದ ಅನತಿ ದೂರದಲ್ಲಿ ಕೊಳವೆ ಬಾವಿಯ ನೀರನ್ನು ಮಾರಾಟ ಮಾಡಲಾಗುತ್ತದೆ. ಕೊಳವೆ ಬಾವಿಗ
ಳಿಂದ ನೀರನ್ನು ಸಂಪ್‌ಗೆ ತುಂಬಲಾಗಿದೆ. ಆ ಸಂಪ್‌ನಿಂದ ಟ್ಯಾಂಕರ್‌ಗಳಿಗೆ ನೀರು ಭರ್ತಿ ಮಾಡಲಾ ಗುತ್ತದೆ.ನೀರು ಮಾರುವ ಗುತ್ತಿಗೆಯನ್ನು ಪಡೆದಿರುವವರು ನಿತ್ಯ ನೂರಾರು ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡುತ್ತಾರೆ. ಇಂತಹ ಟ್ಯಾಂಕರ್‌ಗಳಿಂದಲೇ ರಸ್ತೆ ಹಾಳಾಗಿದೆ. ಐದಾರು ತಿಂಗಳಿಂದ ಇದೇ ಸ್ಥಿತಿ ಇದೆ’ ಎಂದು ದೂರುತ್ತಾರೆ ಬಿ.ಎಚ್. ಕಿರಣ್‌ಕುಮಾರ್‌.

ಇಲ್ಲಿಂದ ನೀರನ್ನು ತೆಗೆದುಕೊಂಡು ಹೋಗಿ ಬೆಳ್ಳಂದೂರು, ಮಾರತ್ತ ಹಳ್ಳಿಯಲ್ಲಿರುವ ಅಪಾರ್ಟ್‌ ಮೆಂಟ್‌ ಸಮುಚ್ಚಯಗಳ ನಿವಾಸಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಈ ಪ್ರದೇಶದಲ್ಲಿ ಅಪಾರ್ಟ್‌ಮೆಂಟ್‌ ಸಮುಚ್ಚಯಗಳು ತಲೆ ಎತ್ತಿದ ನಂತರ, ಇಲ್ಲಿ ಖಾಸಗಿ ಶಾಲಾ–ಕಾಲೇಜುಗಳ ಸಂಖ್ಯೆಯೂ ಹೆಚ್ಚಾಗಿದೆ. ಬೆಳಿಗ್ಗೆ ಮತ್ತು ಸಂಜೆ ಶಾಲಾ ವಾಹನಗಳು ಹೆಚ್ಚು ಸಂಚರಿಸುವುದರಿಂದ ಸಂಚಾರ ದಟ್ಟಣೆ ಸಮಸ್ಯೆ ತೀವ್ರವಾಗಿದೆ.

ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಎದುರಿನ ರಸ್ತೆಯನ್ನು ತಾತ್ಕಾಲಿಕವಾಗಿಯಾದರೂ ದುರಸ್ತಿ ಮಾಡುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗಿಲ್ಲ. ಪ್ರತಿದಿನ ಐದಾರು ಮಕ್ಕಳು ರಸ್ತೆಯಲ್ಲಿ ಬಿದ್ದು ತೊಂದರೆ ಗೀಡಾಗುತ್ತಿದ್ದಾರೆ ಎಂದು ಸ್ಥಳೀಯರು ದೂರುತ್ತಾರೆ.

ಮಹದೇವಪುರ ಕ್ಷೇತ್ರದ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 10 ಗ್ರಾಮೀಣ ರಸ್ತೆಗಳನ್ನು ಜಿಲ್ಲಾ ಮುಖ್ಯ ರಸ್ತೆಗಳನ್ನಾಗಿ ಮೇಲ್ದರ್ಜೆಗೇರಿಸಲು ಲೋಕೋಪಯೋಗಿ ಇಲಾಖೆಗೆ ಬಹಳ ಹಿಂದೆಯೇ ಪ್ರಸ್ತಾವ ಸಲ್ಲಿಸಲಾಗಿದೆ. ಆದರೆ, ಯಾವುದೇ ಪ್ರಗತಿ ಆಗಿಲ್ಲ. ಹದಗೆಟ್ಟ ರಸ್ತೆಯ ಕುರಿತು ಬಿಬಿಎಂಪಿ, ಜಲಮಂಡಳಿ ಅಧಿಕಾರಿಗಳನ್ನು ಪ್ರಶ್ನಿಸಿದರೆ, ‘ವರ್ತೂರು ವಾರ್ಡ್‌ನಲ್ಲಿ 54ಕ್ಕೂ ಹೆಚ್ಚು ಕಾಮಗಾರಿಯನ್ನು ಕೈಗೆತ್ತಿ ಕೊಳ್ಳಲಾಗಿದೆ. ಪ್ರಸ್ತುತ ಎಲ್ಲವೂ ಪ್ರಗತಿಯಲ್ಲಿದೆ. ಕಾಮಗಾರಿಗಳೆಲ್ಲ ಪೂರ್ಣಗೊಂಡ ನಂತರ ರಸ್ತೆಯನ್ನೂ ದುರಸ್ತಿ ಗೊಳಿಸಲಾಗುವುದು’ ಎನ್ನುತ್ತಾರೆ.

‘ನನಗೆ ವೋಟ್‌ ಹಾಕಿಲ್ವಲ್ಲ’

‘ಸೋರಹುಣಸೆಯ ಮಾರಮ್ಮನ ದೇಗುಲ ಬಳಿ ನಡೆದ ಸಭೆಗೆ ಶಾಸಕ ಅರವಿಂದ ಲಿಂಬಾವಳಿ ಬಂದಿದ್ದರು. ರಸ್ತೆ ದುರಸ್ತಿ ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಮನವಿ ಸಲ್ಲಿಸಿದರೆ, ನನಗೆ ನಿಮ್ಮ ಗ್ರಾಮದವರು ಮತವೇ ಹಾಕಿಲ್ಲ. ಕೆಲಸ ಹೇಗೆ ಮಾಡಲಿ ಎಂದು ಕೇಳಿದ್ದರು’ ಎಂದು ನೆನಪಿಸಿಕೊಳ್ಳುತ್ತಾರೆ ಸೋರಹುಣಸೆ ಪಕ್ಕದ ವಾಲೇಪುರ ಗ್ರಾಮದ ಆಟೊ ಚಾಲಕ ನಾರಾಯಣಸ್ವಾಮಿ.

***

ಹದಗೆಟ್ಟಿರುವ ರಸ್ತೆಗಳಿಂದ ಈ ಮಾರ್ಗದಲ್ಲಿ ಬಸ್‌ಗಳು ಹೆಚ್ಚು ಸಂಚರಿಸುವುದಿಲ್ಲ. ಬೆಳಿಗ್ಗೆ ಮತ್ತು ಸಂಜೆ ಯಾವಾಗಲೋ ಒಮ್ಮೆ ಬರುತ್ತವೆ. ರಾತ್ರಿ ಇತ್ತ ಸುಳಿಯುವುದೇ ಇಲ್ಲ

– ಮನೋಹರ್‌, ಸೋರಹುಣಸೆ ನಿವಾಸಿ

ಒಮ್ಮೆ ರಸ್ತೆ ಅಗೆದು ಹೋಗುತ್ತಾರೆ. 15 ದಿನದ ನಂತರ ಪೈಪ್‌ ಹಾಕಲು ಬರುತ್ತಾರೆ. ಆಗ, ಆ ಗುಂಡಿ ಮುಚ್ಚಿರುತ್ತದೆ. ಮತ್ತೆ ಅಗೆಯುತ್ತಾರೆ. ದುರಸ್ತಿ ಮಾಡುವುದಿಲ್ಲ

ಎಸ್.ಎಂ. ಶಂಭಯ್ಯ, ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT