ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಾಲಕ್ಷ್ಮಿ ಕೊಲೆ ಪ್ರಕರಣ: ಪ.ಬಂಗಾಳದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ

Published : 29 ಸೆಪ್ಟೆಂಬರ್ 2024, 23:30 IST
Last Updated : 29 ಸೆಪ್ಟೆಂಬರ್ 2024, 23:30 IST
ಫಾಲೋ ಮಾಡಿ
Comments

ಬೆಂಗಳೂರು: ವೈಯ್ಯಾಲಿಕಾವಲ್ ನಿವಾಸಿ ಮಹಾಲಕ್ಷ್ಮಿ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಮುಕ್ತಿ ರಂಜನ್ ರಾಯ್‌,  ಪೊಲೀಸರಿಗೆ ಸಿಕ್ಕಿಬೀಳಬಹುದೆಂಬ ಭಯದಿಂದ ಪಶ್ಚಿಮ ಬಂಗಾಳದಲ್ಲಿ ನಾಲ್ಕು ದಿನ ತಲೆಮರೆಸಿಕೊಂಡಿದ್ದರು ಎಂಬುದು ತನಿಖೆ ವೇಳೆ ಗೊತ್ತಾಗಿದೆ.

‘ಮಹಾಲಕ್ಷ್ಮೀ ಮತ್ತು ಮುಕ್ತಿ ರಂಜನ್​ ರಾಯ್​ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸಣ್ಣಪುಟ್ಟ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು. ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಜಗಳದಲ್ಲಿ ಸೆ.3ರಂದು ಆಕೆಯನ್ನು ಕೊಲೆ ಮಾಡಲಾಗಿತ್ತು. ಬಂಧನ ಭೀತಿಯಿಂದ ಆರೋಪಿ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಮಾರ್ಗವಾಗಿ ಸ್ವಗ್ರಾಮ ಒಡಿಶಾದ ಭದ್ರಕ್ ಬಳಿಯ ಬೋನಿಪುರಗೆ ತೆರಳಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

‘ಪಶ್ವಿಮ ಬಂಗಾಳಕ್ಕೆ ಹೋಗುತ್ತಿದ್ದಂತೆ ಆರೋಪಿ ತಾನು ಬಳಸುತ್ತಿದ್ದ ಏರ್‌ಟೆಲ್ ಸಿಮ್ ಎಸೆದು, ಬಿಎಸ್​ಎನ್​ಎಲ್​ ಸಿಮ್ ಖರೀದಿಸಿದ್ದ. ಕೊಲೆ ಮಾಡಿದ ವಿಚಾರವನ್ನು ತಾಯಿ ಮತ್ತು ಸಹೋದರನಿಗೆ ಕರೆ ಮಾಡಿ ತಿಳಿಸಿದ ಬಳಿಕ ಮೊಬೈಲ್ ಸ್ವಿಚ್‌ ಆಫ್ ಮಾಡಿಕೊಂಡಿದ್ದ. ನಂತರ ಸ್ವಗ್ರಾಮದ ಒಡಿಶಾದ ಭದ್ರಕ್ ಬಳಿಯ ಬೋನಿಪುರ ತಲುಪಿದ. ಸೆಪ್ಟೆಂಬರ್ 22ರ ವೇಳೆಗೆ ಆರೋಪಿಯ​ ತಮ್ಮನನ್ನು ಪೊಲೀಸರು ವಶಕ್ಕೆ ಪಡೆದು ಕುಟುಂಬಸ್ಥರನ್ನು ಸಂಪರ್ಕಿಸಿದ್ದರು. ಈ ವಿಚಾರ ತಾಯಿಯ ಮೂಲಕ ಆರೋಪಿಗೆ ಗೊತ್ತಾಗಿತ್ತು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಬೆಂಗಳೂರು ಪೊಲೀಸರು ಒಡಿಶಾಗೆ ಬಂದಿರುವ ವಿಚಾರ ಗೊತ್ತಾಗುತ್ತಿದ್ದಂತೆ ಆರೋಪಿ, ಕೆಲಸ ಇದೆ ಎಂದು ತಾಯಿಯ ಬಳಿ ಹೇಳಿ ರಾತ್ರಿ ಮನೆಯಿಂದ ಹೊರ ಹೋಗಿದ್ದ. ಆ ಬಳಿಕ ವಾಪಸ್ ಬರಲಿಲ್ಲ. ಒಡಿಶಾದ ಧುಸುರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಸ್ಥಳೀಯ ಪೊಲೀಸರ ಮೂಲಕ ಗೊತ್ತಾಯಿತು’ ಎಂದು ಮೂಲಗಳು ಹೇಳಿವೆ.

‘ಬೆಂಗಳೂರು ಪೊಲೀಸರ ತಂಡ ಮುಕ್ತಿ ರಂಜನ್ ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರ ವಿಚಾರಣೆ ನಡೆಸಿ, ಮಾಹಿತಿ ಸಂಗ್ರಹಿಸಿದೆ. ಮರಣ ಪತ್ರದ ದೃಢೀಕೃತ ಪ್ರತಿಯನ್ನು ಸಹ ಪಡೆದುಕೊಂಡಿದ್ದು, ಬೆಂಗಳೂರಿನತ್ತ ಪ್ರಯಾಣ ಬೆಳೆಸಿದೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT