ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲ್ಲೆ ಪ್ರಕರಣ: ಸತ್ಯಮಂಗಲ ಕಾಡಿನಲ್ಲಿದ್ದ ಪ್ರಮುಖ ಆರೋಪಿ ಸೆರೆ

ಕ್ಯಾಮ್ಸ್‌ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್‌ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಪ್ರಕರಣ
Last Updated 9 ಸೆಪ್ಟೆಂಬರ್ 2021, 7:28 IST
ಅಕ್ಷರ ಗಾತ್ರ

ಬೆಂಗಳೂರು: ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ (ಕ್ಯಾಮ್ಸ್‌) ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್‌ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದ ಪ್ರಕರಣದ ಪ್ರಮುಖ ಆರೋಪಿ ರವಿ ಯಾನೆ ಆರ್‌ಟಿಐ ರವಿ ಎಂಬಾತನನ್ನು ಜಾಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಈತ ತಮಿಳುನಾಡಿನ ಸತ್ಯಮಂಗಲ ಕಾಡಿನಲ್ಲಿ ಅಡಗಿ ಕುಳಿತಿದ್ದ ಎಂಬುದು ಗೊತ್ತಾಗಿದೆ. ಆತನ ಸಹಚರರಾದ ಗಣೇಶ, ಮನೋಹರ್‌, ಸುರೇಶ್‌, ಶ್ರೀನಿವಾಸ್‌ ಹಾಗೂ ಅರಣ್ಯದಲ್ಲಿ ಆಶ್ರಯ ನೀಡಿದ್ದ ಚಿನ್ನರಸು ಎಂಬುವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇವರು ಕೃತ್ಯಕ್ಕೆ ಬಳಸಿದ್ದ 2 ನಾಡ ಪಿಸ್ತೂಲ್‌, 3 ಖಾಲಿ ಮ್ಯಾಗ್ಜೀನ್‌, ಒಂದು ಕಾರು, ಎರಡು ದ್ವಿಚಕ್ರ ವಾಹನ, ಎರಡು ಲಾಂಗ್‌, ತಲಾ ಒಂದು ಮಚ್ಚು, ಫೋಲ್ಡಿಂಗ್‌ ಚಾಕು ಹಾಗೂ ಕುಡುಗೋಲನ್ನು ಜಪ್ತಿ ಮಾಡಿದ್ದಾರೆ.

‘ಘಟನೆ ನಡೆದ ದಿನ ರಾತ್ರಿಯೇ ರವಿ ಹಾಗೂ ಆತನ ಸಹಚರರು ಬಸ್‌ ಮೂಲಕ ತಮಿಳುನಾಡಿಗೆ ಪರಾರಿಯಾಗಿದ್ದರು. ಮೊಬೈಲ್‌ ಸಿಗ್ನಲ್‌ಗಳನ್ನು ಆಧರಿಸಿ ಪೊಲೀಸರು ತಮ್ಮನ್ನು ಪತ್ತೆಹಚ್ಚಿ ಬಿಡಬಹುದು ಎಂಬುದು ಆರೋಪಿಗಳಿಗೆ ತಿಳಿದಿತ್ತು. ಹೀಗಾಗಿಮೊಬೈಲ್‌ ಬಳಸುವುದನ್ನೇ ನಿಲ್ಲಿಸಿದ್ದರು. ಆರೋಪಿಗಳು ಸತ್ಯಮಂಗಲ ಕಾಡಿನಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಇದರ‌ಆಧಾರದಲ್ಲಿ ದಾಳಿ ನಡೆಸಿ 40 ದಿನಗಳ ನಂತರ ಆರೋಪಿಗಳನ್ನು ಬಂಧಿಸಲಾಯಿತು’ ಎಂದು ಪೊಲೀಸರು ತಿಳಿಸಿದ್ದಾರೆ.

‘ಆರೋಪಿ ರವಿ, ಕರ್ನಾಟಕ ವಿದ್ಯಾರ್ಥಿ ಪೋಷಕರ ಜಾಗೃತಿ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷನೆಂದು ಗುರುತಿಸಿಕೊಂಡಿದ್ದ. ಶಶಿಕುಮಾರ್‌ ಅವರನ್ನು ಹತ್ಯೆ ಮಾಡಿದರೆ ತನ್ನ ಸಂಘಟನೆ ಮತ್ತಷ್ಟು ಬಲಿಷ್ಠವಾಗುತ್ತದೆ. ಆಗ ಖಾಸಗಿ ಶಾಲೆಗಳ ಆಡಳಿತ ಮಂಡಳಿಯವರನ್ನು ಹೆದರಿಸಿ ಹಫ್ತಾ ವಸೂಲಿ ಮಾಡಬಹುದು ಎಂದು ಅಂದಾಜಿಸಿದ್ದ. ಹೀಗಾಗಿ ಜೈಲಿನಲ್ಲಿ ಇದ್ದುಕೊಂಡೇ ಸಂಚು ರೂಪಿಸಿದ್ದ. ಅಲ್ಲಿ ದಿಲೀಪ್‌ ಎಂಬಾತನನ್ನು ಪರಿಚಯಿಸಿಕೊಂಡಿದ್ದ ರವಿ, ಆತನಿಗೆ ತನ್ನ ಯೋಜನೆ ಬಗ್ಗೆ ಹೇಳಿದ್ದ. ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಗೊಂಡಿದ್ದ ದಿಲೀಪ್‌, ರವಿ ಸಹಚರರನ್ನು ಸೇರಿಸಿಕೊಂಡು ಶಶಿಕು
ಮಾರ್‌ ಹತ್ಯೆ ಮಾಡಲು ಮುಂದಾಗಿದ್ದ’ ಎಂದು ಮಾಹಿತಿ ನೀಡಿದ್ದಾರೆ.

‘ಜುಲೈ 29ರ ರಾತ್ರಿ ಮನೆಯ ಮುಂದೆ ಕಾರು ನಿಲ್ಲಿಸಿ ಕೆಳಗಿಳಿಯುವಾಗ ಶಶಿಕುಮಾರ್‌ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಆಗಸ್ಟ್‌ 6ರಂದು ಮೂವರು ಹಾಗೂ ಆಗಸ್ಟ್‌ 7ರಂದು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT