ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರ್ಯಾಂಡ್ ಬೆಂಗಳೂರು ಅಲ್ಲ, ಬೆಸ್ಟ್ ಬೆಂಗಳೂರು ಮಾಡಿ: ಆಮ್‌ ಆದ್ಮಿ ಪಕ್ಷದ ಸತೀಶ್

Published 9 ಸೆಪ್ಟೆಂಬರ್ 2023, 19:29 IST
Last Updated 9 ಸೆಪ್ಟೆಂಬರ್ 2023, 19:29 IST
ಅಕ್ಷರ ಗಾತ್ರ

ಬೆಂಗಳೂರು: ‘ಬ್ರ್ಯಾಂಡ್‌ ಬೆಂಗಳೂರಿಗೂ ಮೊದಲು ಉತ್ತಮ ನಗರವನ್ನಾಗಿ ರೂಪಿಸಿ’ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾ ಅಧ್ಯಕ್ಷ ಸತೀಶ್ ಕುಮಾರ್ ಸವಾಲು ಹಾಕಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎರಡು ವರ್ಷಗಳಿಂದ ಬಿಬಿಎಂಪಿ ಚುನಾವಣೆ ನಡೆದಿಲ್ಲ. ಜನರು ಸಮಸ್ಯೆ ಹೇಳಿಕೊಳ್ಳುವುದಕ್ಕೂ ಸದಸ್ಯರೂ ಇಲ್ಲ. ಆದರೆ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬ್ರ್ಯಾಂಡ್ ಬೆಂಗಳೂರು ಮಾಡಲು ಹೊರಟಿದ್ದಾರೆ. ಮೂರು ವರ್ಷವಾದರೂ ಚುನಾವಣೆ ನಿರ್ಧಾರವಾಗಿಲ್ಲ. ವಾರ್ಡ್‌ಗಳ ಪಟ್ಟಿ ಸಹ ಅಂತಿಮಗೊಂಡಿಲ್ಲ. ಮೀಸಲಾತಿಯ ಒಬಿಸಿ ಪಟ್ಟಿ ಅಂತಿಮವಾಗಿಲ್ಲ. ಆಗಲೇ ಬ್ರ್ಯಾಂಡ್ ಬೆಂಗಳೂರು ಸಮಾವೇಶಕ್ಕೆ ತಯಾರಿ ಮಾಡಿಕೊಂಡಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ರಸ್ತೆ ಗುಂಡಿ, ಚರಂಡಿಗಳನ್ನು ಮೊದಲು ದುರಸ್ತಿ ಪಡಿಸಬೇಕಿದೆ. ಈಗಿರುವ ಬೆಂಗಳೂರನ್ನೇ ಉತ್ತಮ ಪಡಿಸಬೇಕಿದೆ. ಕ್ರಮೇಣ ಈ ಬೆಸ್ಟ್ ಬೆಂಗಳೂರು ತಾನಾಗಿಯೇ ಬ್ರ್ಯಾಂಡ್ ಬೆಂಗಳೂರು ಆಗುತ್ತದೆ’ ಎಂದು ಹೇಳಿದರು.

‘ಉಪ ಮುಖ್ಯಮಂತ್ರಿ ಅವರಿಗೆ ಬ್ರ್ಯಾಂಡ್‌ ಬೆಂಗಳೂರು ಬಗ್ಗೆ ಅಷ್ಟೊಂದು ಇಚ್ಛಾಶಕ್ತಿ ಹಾಗೂ ಬದ್ಧತೆಯಿದ್ದರೆ ಬಿಬಿಎಂಪಿ ಚುನಾವಣೆಗಿರುವ ಅಡೆತಡೆ ಬಗೆಹರಿಸಬೇಕಿದೆ’ ಎಂದು ಒತ್ತಾಯಿಸಿದರು.

‘2020ರಲ್ಲೇ ಬಿಬಿಎಂಪಿ ಅವಧಿ ಪೂರ್ಣಗೊಂಡಿದೆ. ಎರಡು ವರ್ಷ ಕಳೆದರೂ ಸರ್ಕಾರ ಬಿಬಿಎಂಪಿ ಚುನಾವಣೆ ನಡೆಸದೆ ನಿರ್ಲಕ್ಷ್ಯ ತೋರುತ್ತಿದೆ. ಹಿಂದಿನ ಬಿಜೆಪಿ ಸರ್ಕಾರ ‘ಗ್ರೇಟರ್ ಬೆಂಗಳೂರು’ ಮಾಡಬೇಕೆಂಬ ಕಾರಣಕ್ಕೆ ನಾಲ್ಕು ಪಾಲಿಕೆಗಳನ್ನಾಗಿ ವಿಂಗಡಿಸಲು ನಿರ್ಧರಿಸಿತ್ತು. ಇದೇ ವೇಳೆ ಕೊರೊನಾ ಸಮಸ್ಯೆ ಬಾಧಿಸಿತ್ತು. ಕೊರೊನಾ ಬಳಿಕ ಬಿಬಿಎಂಪಿ ಚುನಾವಣೆ ಆಗಲಿಲ್ಲ. ಬಳಿಕ, ಗ್ರೇಟರ್ ಬೆಂಗಳೂರು ನಿರ್ಧಾರವನ್ನು ಸರ್ಕಾರ ಹಿಂತೆಗೆದುಕೊಂಡಿತು’ ಎಂದರು.

‘ಬಿಬಿಎಂಪಿ ಮರು ವಿಂಗಡಣೆಗೆ ಮುಂದಾಗಿದ್ದ ಬಿಜೆಪಿ ಸರ್ಕಾರದ ಅವಧಿಯಲ್ಲೇ 3,200ಕ್ಕೂ ಹೆಚ್ಚು ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದವು. ಆದರೆ, ನಗರಾಭಿವೃದ್ಧಿ ಇಲಾಖೆ ಆಕ್ಷೇಪಣೆಗಳನ್ನು ಯಾವುದೇ ರೀತಿ ಪರಿಶೀಲನೆ ನಡೆಸದೆ ಮೂರು ದಿನಗಳಲ್ಲೇ 243 ವಾರ್ಡ್ ಮಾಡಿ, ಆದೇಶ ಹೊರಡಿಸಿತ್ತು. ಇದೀಗ ಪ್ರಕರಣವು ನ್ಯಾಯಾಲಯದಲ್ಲಿದೆ. ನ್ಯಾಯಾಲಯವು 12 ವಾರಗಳ ಗಡುವು ನೀಡಿತ್ತು. ಸೆ.18ಕ್ಕೆ ಕೋರ್ಟ್ ನೀಡಿರುವ ಗಡುವು ಮುಕ್ತಾಯವಾಗಲಿದೆ. ಇದೀಗ ಕಾಂಗ್ರೆಸ್ ಸರ್ಕಾರ ತರಾತುರಿಯಲ್ಲಿ 243 ವಾರ್ಡ್​ಗಳ ಬದಲಿಗೆ 225ಕ್ಕೆ ಮಾಡಿ ಅಧಿಸೂಚನೆ ಹೊರಡಿಸಿದೆ. ಈಗಲೂ ವಾರ್ಡ್ ಮರು ವಿಂಗಡಣೆಗೆ 3,300 ಆಕ್ಷೇಪಣೆಗಳು ಬಂದಿವೆ. ಆಕ್ಷೇಪಕ್ಕೆ ಸರ್ಕಾರ ಏನು ಉತ್ತರ ನೀಡಿದೆ’ ಎಂದು ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿಶ್ವನಾಥ್ ಟಿ.ಜಿ. ಮತ್ತು ಮಾಧ್ಯಮ ಉಸ್ತುವಾರಿ ಅನಿಲ್ ನಾಚಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT