ಬಟ್ಟೆ ಬಿಚ್ಚಿ ಸೊಸೆ ಮುಂದೆ ಅಸಭ್ಯ ವರ್ತನೆ; ಆರೋಪ

7
ಜೆ.ಸಿ.ನಗರ ಪೊಲೀಸರಿಂದ ಕೆಎಸ್‌ಆರ್‌ಟಿಸಿ ನೌಕರ ಸೆರೆ

ಬಟ್ಟೆ ಬಿಚ್ಚಿ ಸೊಸೆ ಮುಂದೆ ಅಸಭ್ಯ ವರ್ತನೆ; ಆರೋಪ

Published:
Updated:

ಬೆಂಗಳೂರು: ತಮ್ಮ ಬಟ್ಟೆಗಳನ್ನು ಬಿಚ್ಚಿ ಸೊಸೆ ಮುಂದೆ ಅಸಭ್ಯವಾಗಿ ವರ್ತಿಸುತ್ತಿದ್ದ ಆರೋಪದಡಿ ಅಬ್ದುಲ್ ರೆಹಮಾನ್ ಇಲಿಯಾಸ್ ಎಂಬುವರನ್ನು ಜೆ.ಸಿ.ನಗರ ಪೊಲೀಸರು ಬಂಧಿಸಿದ್ದಾರೆ.

ಬೆನ್ಸನ್‌ಟೌನ್‌ನ ಹ್ಯಾರಿಸ್‌ ರಸ್ತೆ ನಿವಾಸಿಯಾದ ಆರೋಪಿ, ಕೆಎಸ್‌ಆರ್‌ಟಿಸಿ ನೌಕರ. ಅವರ ವಿರುದ್ಧ, ಮಗನ ಪತ್ನಿ (ಸೊಸೆ) ದೂರು ನೀಡಿದ್ದರು. ವರದಕ್ಷಿಣೆ ಕಿರುಕುಳ ಹಾಗೂ ಲೈಂಗಿಕ ದೌರ್ಜನ್ಯ ಆರೋಪದಡಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು.

‘ನಾನು ಒಬ್ಬಂಟಿಯಾಗಿದ್ದ ವೇಳೆ ಕೊಠಡಿಗೆ ಅಕ್ರಮವಾಗಿ ಪ್ರವೇಶಿಸುತ್ತಿದ್ದ ಮಾವ, ತಮ್ಮ ಬಟ್ಟೆಗಳನ್ನು ಬಿಚ್ಚಿ ಅಶ್ಲೀಲವಾಗಿ ಮಾತನಾಡುತ್ತಿದ್ದರು. ನನ್ನ ಬಟ್ಟೆಗಳನ್ನೂ ಬಿಚ್ಚಲು ಪ್ರಯತ್ನಿಸುತ್ತಿದ್ದರು. ‘ನಿನ್ನ ಮದುವೆಯ ಮೊದಲ ರಾತ್ರಿ ಹೇಗಾಯಿತು’ ಎಂದು ಪದೇ ಪದೇ ಕೇಳಿ ವಿಕೃತವಾಗಿ ವರ್ತಿಸುತ್ತಿದ್ದರು. ಇದೇ ರೀತಿ ಹಲವು ತಿಂಗಳಿನಿಂದ ಕಿರುಕುಳ ನೀಡುತ್ತಿದ್ದರು’ ಎಂದು ಸಂತ್ರಸ್ತೆಯು ದೂರಿನಲ್ಲಿ ಹೇಳಿದ್ದಾರೆ.

‘ಕಳೆದ ಡಿಸೆಂಬರ್ 28ರಂದು ಅಬ್ದುಲ್ ಹದಿ ಎಂಬುವರ ಜೊತೆಯಲ್ಲಿ ನನ್ನ ವಿವಾಹವಾಗಿದೆ. ಪತಿ ಅನಕ್ಷರಸ್ಥ. ನಕಲಿ ಪದವಿ ಪ್ರಮಾಣ ಪತ್ರ ತೋರಿಸಿದ್ದ ಅವರ ತಂದೆ ಅಬ್ದುಲ್ ರೆಹಮಾನ್ ಇಲಿಯಾಸ್, ವಿದ್ಯಾವಂತರೆಂದು ಬಿಂಬಿಸಿದ್ದರು. ಅದನ್ನು ನಂಬಿದ್ದ ನನ್ನ ಪೋಷಕರು, ₹2 ಲಕ್ಷ ನಗದು ಮತ್ತು ಚಿನ್ನಾಭರಣವನ್ನು ವರದಕ್ಷಿಣೆಯಾಗಿ ಕೊಟ್ಟು ಮದುವೆ ಮಾಡಿಸಿದ್ದರು’ ಎಂದು ದೂರಿನಲ್ಲಿ ತಿಳಿಸಿದ್ದಾರೆ. 

‘ಒಂದೆಡೆ ಮಾವ, ಲೈಂಗಿಕ ಕಿರುಕುಳ ನೀಡುತ್ತಿದ್ದರು. ಆ ಬಗ್ಗೆ ಪತಿಗೆ ತಿಳಿಸಿದರೂ ಸ್ಪಂದಿಸಿರಲಿಲ್ಲ. ಪತಿಯು ಸಹ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾರಂಭಿಸಿದ್ದರು. ಎರಡು ತಿಂಗಳ ಹಿಂದೆ ನನ್ನ ಮೇಲೆ ಹಲ್ಲೆ ನಡೆಸಿದ್ದ ಅವರಿಬ್ಬರು, ಮನೆಯಿಂದ ಹೊರಹಾಕಿದ್ದಾರೆ’ ಎಂದು ಸಂತ್ರಸ್ತೆಯು ದೂರಿನಲ್ಲಿ ಹೇಳಿದ್ದಾರೆ. 

ಪತಿ ನಾಪತ್ತೆ: ಮಹಿಳೆಯ ದೂರು ಆಧರಿಸಿ ವರದಕ್ಷಿಣೆ ಕಿರುಕುಳ ಆರೋಪದಡಿ ಪತಿ ಅಬ್ದುಲ್ ಹದಿ ವಿರುದ್ಧವೂ ದೂರು ದಾಖಲಿಸಲಾಗಿದೆ. ಅವರು ಸದ್ಯ ನಾಪತ್ತೆಯಾಗಿದ್ದಾರೆ. ಪತ್ತೆ ಹಚ್ಚಲಾಗುತ್ತಿದೆ ಎಂದು ಜೆ.ಸಿ.ನಗರ ಪೊಲೀಸರು ಹೇಳಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !