ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡಗಿ ಕೆಲಸ ಮಾಡುತ್ತಾ ಭಾಗವತಿಕೆ ಕಲಿತೆ: ಕಲ್ಮನೆ ನಂಜಪ್ಪ

ಮೂಡಲಪಾಯ ಯಕ್ಷಗಾನ ಕಲಾವಿದ ಕಲ್ಮನೆ ನಂಜಪ್ಪ
Last Updated 22 ಸೆಪ್ಟೆಂಬರ್ 2019, 19:49 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗಲೇ ಮೇಳದಲ್ಲಿ ನಾನು ಬಣ್ಣ ಹಚ್ಚಿದ್ದೆ. ನಾಲ್ಕು ತಲೆಮಾರುಗಳಿಂದ ಭಾಗವತಿಕೆ ನಡೆಸಿಕೊಂಡು ಬಂದ ಕುಟುಂಬ ನಮ್ಮದು. ಆದರೆ, ಮನೆಯಲ್ಲಿ ಕಿತ್ತು ತಿನ್ನುವ ಬಡತನವಿತ್ತು. ಹಿಟ್ಟಿನ ಗಿರಣಿ ನಡೆಸುತ್ತಾ, ಬಡಗಿ ಕೆಲಸ ಮಾಡುತ್ತಲೇ ಭಾಗವತಿಕೆಯಲ್ಲಿಯೂ ನಾನು ಪರಿಣತಿ ಸಾಧಿಸಿದೆ’

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶನಿವಾರ ಆಯೋಜಿಸಿದ್ದ`ಮನೆಯಂಗಳದಲ್ಲಿ ಮಾತುಕತೆ' ಕಾರ್ಯಕ್ರಮದಲ್ಲಿ ಮೂಡಲಪಾಯ ಯಕ್ಷಗಾನದ ಭಾಗವತ ಕಲ್ಮನೆ ನಂಜಪ್ಪ ತಮ್ಮ ಕಲಾ ಯಾನದ ಅನುಭವಗಳ ಬುತ್ತಿ ಬಿಚ್ಚಿಟ್ಟರು.

ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಅರಳಗುಪ್ಪೆಯ ದೇಸಿ ಪ್ರತಿಭೆಯಾದ ನಂಜಪ್ಪ ಅವರು ತಮ್ಮದೇ ಆದ ಧಾಟಿಯಲ್ಲಿ ಜೀವಾನುಭವವನ್ನು ತೆರೆದಿಡುತ್ತಲೇ ದಕ್ಷಯಜ್ಞ ಸೇರಿದಂತೆ ಹಲವು ಪ್ರಸಂಗಗಳ ಹಾಡುಗಳನ್ನು ಹಾಡುತ್ತಾ ವಿವರಣೆ ನೀಡಿದರು.

‘ನಮ್ಮದು ದಕ್ಷಿಣಾದಿ ಧಾಟಿಯ ಯಕ್ಷಗಾನ. ದಕ್ಷಿಣ ಕನ್ನಡ ಭಾಗದ ಯಕ್ಷಗಾನದಲ್ಲಿ ಸ್ವಲ್ಪ ನೃತ್ಯ ಮತ್ತಿತರ ಅಂಶಗಳನ್ನು ಸೇರಿಸಿಕೊಂಡು ಅದು ಜನರಿಗೆ ಇನ್ನಷ್ಟು ಹತ್ತಿರವಾಗಿದೆ. ನಮ್ಮ ಪ್ರಕಾರದಲ್ಲಿ ಪಾತ್ರ ಮಾಡುವವರಲ್ಲಿ ಸ್ವಲ್ಪ ಶಿಸ್ತು ಕಡಿಮೆ’ ಎಂದೂ ಹೇಳಿದರು.

ನಶಿಸುತ್ತಿರುವ ಕಲೆ: ‘ಯಕ್ಷಗಾನ, ಬಯಲಾಟ, ದೊಡ್ಡಾಟ, ಮುಖವೀಣೆಯಂತಹ ಜಾನಪದ ಕಲಾ ಪ್ರಕಾರಗಳು ನಶಿಸುತ್ತಿರುವುದು ದುಃಖಕರ ಸಂಗತಿ. ಉಚಿತವಾಗಿ ಹೇಳಿಕೊಡುತ್ತೇನೆ ಎಂದರೂ ಯಾರೂ ಕಲಿಯಲು ಮುಂದೆ ಬರುತ್ತಿಲ್ಲ’ ಎಂದು ನಂಜಪ್ಪ ಬೇಸರ ವ್ಯಕ್ತಪಡಿಸಿದರು.

‘ಅಕಾಡೆಮಿಗಳು, ಇಲಾಖೆ ಇದ್ದರೂ ನಮ್ಮ ಕಣ್ಣೆದುರೇ ಜಾನಪದ ಕಲಾ ಪ್ರಕಾರಗಳು ಅವಸಾನದ ಅಂಚಿನತ್ತ ಸಾಗುತ್ತಿರುವುದು ವಿಪರ್ಯಾಸ’ ಎಂದರು.

‘ಈ ಕಲೆ ಉಳಿಸಲು ಸಾಕಷ್ಟು ಹೋರಾಟ ನಡೆಸುತ್ತಿದ್ದೇನೆ. ಅದೇ ಉದ್ದೇಶದಿಂದಲೇ ಭಾಗವತಿಕೆ ಬಗ್ಗೆ ಪುಸ್ತಕಗಳನ್ನು ಬರೆದಿದ್ದೇನೆ. ಅದನ್ನು ಅಕಾಡೆಮಿ ಪ್ರಕಟಿಸಿದೆ. ಮುಂದಿನ ದಿನಗಳಲ್ಲಿ ಸಿ.ಡಿ ಮಾಡುವ ಆಲೋಚನೆ ಇದೆ’ ಎಂದರು.

ಇಲಾಖೆಯ ನಿರ್ದೇಶಕಿ ಕೆ.ಎಂ.ಜಾನಕಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT