ಭಾನುವಾರ, ಜನವರಿ 26, 2020
28 °C

ಮಂಗಳೂರು ಗೋಲಿಬಾರ್ ಅಮಾನವೀಯ ಘಟನೆ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ‘ಮಂಗಳೂರಿನಲ್ಲಿ ನಿನ್ನೆ ನಡೆದದ್ದು ಅಮಾನವೀಯ ಘಟನೆ. ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದವರ ಮೇಲೆ ಪೊಲೀಸರು ವಿನಾಕಾರಣ ಗುಂಡು ಹಾರಿಸಿದ್ದಾರೆ,’ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿದರು.

‘ಪ್ರತಿಭಟನೆ ಹತ್ತಿಕ್ಕುವ ಅಧಿಕಾರವನ್ನು ಸಂವಿಧಾನದಲ್ಲಿ ಯಾರಿಗೂ ಕೊಟ್ಟಿಲ್ಲ. ದೇಶದ ಅನೇಕ ರಾಜ್ಯಗಳಲ್ಲಿ ಇವತ್ತು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಜನರ ಆಕ್ರೋಶ ವ್ಯಕ್ತವಾಗಿದೆ. ಎಲ್ಲ ಧರ್ಮ–ಜಾತಿಗಳವರೂ ಪ್ರತಿಭಟಿಸುತ್ತಾ ಇದ್ದಾರೆ,’ ಎಂದು ತಿಳಿಸಿದರು.

‘ನರೇಂದ್ರ ಮೋದಿ ಸರ್ಕಾರದಲ್ಲಿ ಗೃಹ ಸಚಿವರಾಗಿರುವ ಅಮಿತ್ ಶಾ ಅವರೇ ರಾಜ್ಯಸಭೆಯಲ್ಲಿ ಮಾತನಾಡುವಾಗ ಇದನ್ನು ‘ವಿವಾದಾತ್ಮಕ ಕಾನೂನು’ ಎಂದಿದ್ದಾರೆ,’ ಎಂದು ನೆನಪಿಸಿಕೊಂಡರು.

‘ಒಂದು ಕಡೆ ಯಡಿಯೂರಪ್ಪ ಗುಂಡು ಹಾರಿಸಬೇಡಿ ಅಂತ ಹೇಳಿದ್ದೇನೆ ಅಂತಾರೆ. ಅವರ ಆದೇಶ ಇದ್ರೂ ಪೊಲೀಸರು ಗುಂಡು ಹಾರಿಸ್ತಾರೆ ಅಂದ್ರೆ ಏನು? ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅವರ ಆದೇಶಕ್ಕೆ ಪೊಲೀಸರು ಕಿಮ್ಮತ್ತು ಕೊಡ್ತಿಲ್ಲ. ಯಡಿಯೂರಪ್ಪ ಸುಳ್ಳು ಹೇಳುತ್ತಿರಬೇಕು ಅಥವಾ ಅವರ ಮಾತನ್ನು ಪೊಲೀಸರು ಕೇಳುತ್ತಿಲ್ಲ ಎನ್ನಬೇಕು,’ ಎಂದರು.

‘ನನ್ನ ಪ್ರಕಾರ ಸರ್ಕಾರದ ಗಮನಕ್ಕೆ ತಾರದೆ ಗೋಲಿಬಾರ್ ಮಾಡಲು ಸಾಧ್ಯವಿಲ್ಲ. ಇವರ ಉದ್ದೇಶವೇನು ಅಂದರೆ ಎರಡು ಧರ್ಮಗಳ ನಡುವೆ ಬೆಂಕಿ ಹಚ್ಚಿ ರಾಜಕೀಯ ಲಾಭ ಪಡೆದುಕೊಳ್ಳಲು ಬಿಜೆಪಿ ಪ್ರಯತ್ನ ಮಾಡುತ್ತಿದೆ,’ ಎಂದು ಆರೋಪಿಸಿದರು.

‘ಕೇಂದ್ರ ಸಚಿವ ಸುರೇಶ್ ಆಂಗಡಿ ‘ಕಂಡಲ್ಲಿ ಗುಂಡಿಕ್ಕಿ’ ಅಂತ ಹೇಳ್ತಾರೆ. ಇದೆಂಥ ಆದೇಶ,’ ಎಂದು ಪ್ರಶ್ನಿಸಿದರು.

‘ಜನರ ಹಕ್ಕು ಮತ್ತು ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಇದು. ಅಮಾನವೀಯವಾಗಿ ಇಬ್ಬರು ಅಮಾಯಕರನ್ನು ಗುಂಡು ಹಾರಿಸಿ ಕೊಂದಿದ್ದಾರೆ. ಇದನ್ನು ತೀವ್ರವಾಗಿ ಖಂಡಿಸುತ್ತೇನೆ. ಈ ಜವಾಬ್ದಾರಿಯನ್ನು ಸರ್ಕಾರ ಹೊರಬೇಕು. ಹೈಕೋರ್ಟ್‌ ನ್ಯಾಯಮೂರ್ತಿಯಿಂದ ತನಿಖೆ ನಡೆಯಬೇಕು,’ ಎಂದು ಆಗ್ರಹಿಸಿದರು.

ಈ ಸರ್ಕಾರ ಸಂವಿಧಾನ ಬಾಹಿರವಾಗಿ ಕೆಲಸ ಮಾಡ್ತಿದೆ. ಇದರ ಹಿಂದೆ ಇರುವವರು ನರೇಂದ್ರ ಮೋದಿ ಮತ್ತು ಅಮಿತ್ ಶಾ ಎಂದು ದೂರಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು