ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೌಚಗುಂಡಿಯಲ್ಲಿ ಉಸಿರುಗಟ್ಟಿ ಕಾರ್ಮಿಕ ಸಾವು

ಕೂಲಿ ಆಸೆಗಾಗಿ 25 ಅಡಿಗೂ ಹೆಚ್ಚು ಆಳದ ಗುಂಡಿಗೆ ಇಳಿದರು l ಒಬ್ಬನ ಸ್ಥಿತಿ ಗಂಭೀರ
Last Updated 28 ಜನವರಿ 2020, 12:30 IST
ಅಕ್ಷರ ಗಾತ್ರ

ಬೆಂಗಳೂರು: ದೂರದ ಬಳ್ಳಾರಿಯಿಂದ ಕೆಲಸ ಅರಸಿ ನಗರಕ್ಕೆ ಬಂದ 18ರ ಹರೆಯದ ಯುವಕ, ₹ 650 ಕೂಲಿ ಆಸೆಯಿಂದ 25 ಅಡಿಗೂ ಹೆಚ್ಚು ಆಳದ ಶೌಚಗುಂಡಿ ಸ್ವಚ್ಛತೆಗೆ ಇಳಿದು, ಉಸಿರುಗಟ್ಟಿ ಮೃತಪಟ್ಟ ಘಟನೆ, 2013ರ ಮಲಹೊರುವ ಪದ್ಧತಿ (ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್) ನಿಷೇಧ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಿದೆ.

ಕಮರ್ಷಿಯಲ್‌ ಸ್ಟ್ರೀಟ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿರುವ ಶ್ರೀ ಶ್ವೇತಾಂಬರ್‌ ಸ್ಥಾನಕ್‌ ವಾಸಿ ಬಾವೀಸ್‌ ಸಂಪ್ರದಾಯ್‌ ಜೈನ್‌ ಸಂಘದ (ಟ್ರಸ್ಟ್‌) ಆವರಣದಲ್ಲಿರುವ ಗುಂಡಿಯಲ್ಲಿ ಶನಿವಾರ ಮಧ್ಯಾಹ್ನ 1.30ರ ಸುಮಾರಿಗೆ ನಡೆದ ದುರ್ಘಟನೆಯಲ್ಲಿ ಬಳ್ಳಾರಿ ಜಿಲ್ಲೆ ಸಿರುಗಪ್ಪ ತಾಲ್ಲೂಕಿನ ಘೋಷ್ವಾಲ ಗ್ರಾಮದ ನಾರಾಯಣ ಅವರ ಪುತ್ರ ಸಿದ್ದಪ್ಪ(18) ಮೃತಪಟ್ಟರೆ, ಆತನನ್ನು ಕೆಲಸಕ್ಕೆ ಕರೆದುಕೊಂಡು ಹೋಗಿದ್ದ ‘ಮೇಸ್ತ್ರಿ’ ಮುನಿಯಪ್ಪ (50), ಬೌರಿಂಗ್‌ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದಾರೆ.

ಶೌಚ ಗುಂಡಿ, ಒಳಚರಂಡಿ, ತೆರೆದ ಗುಂಡಿ, ಗಟಾರಗಳನ್ನು ಬರಿಗೈಯಿಂದ ಸ್ವಚ್ಛ ಮಾಡುವ ಅಮಾನವೀಯ ಪದ್ಧತಿಯನ್ನು ಈ ಕಾಯ್ದೆಯಡಿ ನಿಷೇಧಿಸಲಾಗಿದೆ. ಇಂಥ ಕೆಲಸವನ್ನು ಸಕಿಂಗ್‌ ಮೆಷಿನ್‌ಗಳ ಮೂಲಕ ಮಾಡುವಂತೆ ಸೂಚಿಸಲಾಗಿದೆ. ಆದರೂ, ಈ ಕೆಲಸವನ್ನು ಕಾರ್ಮಿಕರಿಂದ ಮಾಡಿಸುವ ಮೂಲಕ ಕಾಯ್ದೆಯಲ್ಲಿರುವ ನಿಯಮಗಳನ್ನು ಉಲ್ಲಂಘಿಸಿರುವ ಕುರಿತ ಚರ್ಚೆ ಮುನ್ನಲೆಗೆ ಬಂದಿದೆ.

ಸಿರುಗುಪ್ಪ ಮತ್ತು ಸುತ್ತಮುತ್ತಲಿನ 400ಕ್ಕೂ ಹೆಚ್ಚು ಕಾರ್ಮಿಕರು ಎಚ್‌ಬಿಆರ್‌ ಲೇಔಟ್‌ ಸುತ್ತಮುತ್ತ ನೆಲೆಸಿದ್ದಾರೆ. ನಿತ್ಯ ಬೆಳಿಗ್ಗೆ 8 ಗಂಟೆಗೆ ಸ್ಥಳೀಯ ಬಸ್‌ ನಿಲ್ದಾಣದಲ್ಲಿ ಬಂದು ನಿಲ್ಲುವ ಈ ಕಾರ್ಮಿಕರನ್ನು ಕಟ್ಟಡ ನಿರ್ಮಾಣ ಕಾಮಗಾರಿ ಕೆಲಸ ವಹಿಸಿಕೊಂಡ ಗುತ್ತಿಗೆದಾರರು ಕರೆದುಕೊಂಡು ಹೋಗುತ್ತಾರೆ. ಹುಟ್ಟೂರಿನಿಂದ ಬಂದು ಸಿದ್ದಪ್ಪ ಅವರು ತಮ್ಮ ಅಕ್ಕ ಮತ್ತು ಬಾವನ ಜೊತೆ ದಿನಾ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು.

‘ನಾವು ನಾಲ್ವರು ಹೆಣ್ಣು, ನಾಲ್ವರು ಗಂಡು ಮಕ್ಕಳು. ಸಿದ್ದಪ್ಪ ನನ್ನ ಕೊನೆಯ ತಮ್ಮ. ಹತ್ತು ವರ್ಷಗಳಿಂದ ನಮ್ಮ ಜೊತೆಯಲ್ಲೇ ಇದ್ದಾನೆ. ನಾಲ್ಕೈದು ವರ್ಷಗಳಿಂದ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾನೆ. ಕೆಲಸವಿದೆ ಎಂದು ಶನಿವಾರ ಬೆಳಿಗ್ಗೆ ಮೇಸ್ತ್ರಿ ಮುನಿಯಪ್ಪ ಅವರು ಕರೆದುಕೊಂಡು ಹೋಗಿದ್ದರು. ಶೌಚಗುಂಡಿ ಸ್ವಚ್ಚ ಮಾಡುವ ಕೆಲಸ ಎಂದು ಅವರು ಯಾರಿಗೂ ಹೇಳಿರಲಿಲ್ಲ. ಆ ಕೆಲಸವೆಂದು ಗೊತ್ತಿರುತ್ತಿದ್ದರೆ ಕಳುಹಿಸುತ್ತಿರಲಿಲ್ಲ’ ಎಂದು ಸಿದ್ದಪ್ಪ ಅವರ ಅಕ್ಕ ಗಂಗಮ್ಮ ಬೌರಿಂಗ್‌ ಆಸ್ಪತ್ರೆಯ ಶವಾಗಾರದ ಎದುರು ರೋದಿಸಿದರು. ಜೊತೆಗೆ ಅವರ ಅಕ್ಕ ಮಂಗಮ್ಮ ಕೂಡಾ ಕಣ್ಣೀರಿಡುತ್ತಿದ್ದರು.

‘ನಾವು ಕೆಲವು ಮಂದಿ ಮುನಿಯಪ್ಪ ಹೇಳುತ್ತಿದ್ದ ಕಟ್ಟಡ ನಿರ್ಮಾಣದ ಕೆಲಸಗಳಿಗೆ ಹೋಗುತ್ತಿದ್ದೆವು. ಸಿದ್ದಣ್ಣ ಕೂಡಾ ನಮ್ಮ ಜೊತೆ ಕೆಲಸಕ್ಕೆ ಬರುತ್ತಿದ್ದ. ಮೇಸ್ತ್ರಿ ನಮಗೆ ಕೂಲಿಯ ₹ 30 ಸಾವಿರ ಕೊಡಲು ಬಾಕಿ ಇದೆ. ಶನಿವಾರ ಕೆಲಸ ಮಾಡಿದ ಬಳಿಕ ಅಷ್ಟೂ ಹಣವನ್ನು ಕೊಡುವುದಾಗಿ ಮುನಿಯಪ್ಪ ಹೇಳಿದ್ದರು. ಅವರ ಮಾತು ನಂಬಿ ಸಿದ್ದಪ್ಪ ಅವರ ಜೊತೆ ಹೋಗಿದ್ದ’ ಎಂದು ಮಂಗಮ್ಮ ಅಲವತ್ತುಕೊಂಡರು.

‘ಮ್ಯಾನ್‌ಹೋಲ್‌, ಶೌಚಗುಂಡಿ, ಒಳಚರಂಡಿ, ತೆರೆದಗುಂಡಿ, ಗಟಾರಗಳನ್ನು ಬರಿ ಕೈಯಿಂದ ಸ್ವಚ್ಛ ಮಾಡುವುದನ್ನು ನಿಷೇಧಿಸಿದರೂ ಆ ಕೆಲಸಕ್ಕೆ ಕಾರ್ಮಿಕರನ್ನು ಬಳಸಲಾಗುತ್ತಿದೆ. ಇದು ಅಕ್ಷಮ್ಯ ಅಪರಾಧ’ ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ ಹಿರೇಮನಿ ಪ್ರತಿಕ್ರಿಯಿಸಿದರು.

‘ಶೌಚಗುಂಡಿಯನ್ನು ಬರಿಗೈಯಿಂದ ಸ್ವಚ್ಛ ಮಾಡದಂತೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಈ ಕಾಯ್ದೆ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರಾಥಮಿಕ ಶಾಲೆಯಿಂದ ಪದವಿವರೆಗಿನ ಶಿಕ್ಷಣ ಸಂಸ್ಥೆಗಳಲ್ಲಿ ಕರಪತ್ರಗಳನ್ನು ಹಂಚುವ ಬಗ್ಗೆಯೂ ಚಿಂತನೆ ನಡೆದಿದೆ’ ಎಂದರು.

‘ಮುಂಜಾಗ್ರತೆ ವಹಿಸಿರಲಿಲ್ಲ’

‘ಕೈಗವಸು ಇಲ್ಲದೆ, ಮುಖಕ್ಕೆ ಮಾಸ್ಕ್ ಕೂಡ ಹಾಕಿಕೊಳ್ಳದೆ ಸಿದ್ದಣ್ಣ ಮತ್ತು ಮುನಿಯಪ್ಪ ಶೌಚಗುಂಡಿಗೆ ಇಳಿದಿದ್ದರು’ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು. ಗುಂಡಿಯ ಒಳಗೆ ಉಸಿರುಗಟ್ಟಿದ ಪರಿಣಾಮ ಹೊರಬರಲು ಸಾಧ್ಯವಾಗದೆ ಪರದಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಅವರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದರು.

ಈ ಘಟನೆ ಕುರಿತು ಸಾಮಾಜಿಕ ಕಾರ್ಯಕರ್ತ ಟಿ.ನರಸಿಂಹಮೂರ್ತಿ ದೂರು ನೀಡಿದ್ದು, ಕಮರ್ಷಿಯಲ್‌ ಸ್ಟ್ರೀಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿರುವ ಮುನಿಯಪ್ಪ ಅವರು ಬೋವಿ (ಎಸ್‌.ಸಿ) ಸಮುದಾಯಕ್ಕೆ ಸೇರಿದವರು.

‘ಟ್ರಸ್ಟ್‌ ಅಧ್ಯಕ್ಷರ ನಿರ್ದೇಶನದಂತೆ ಶೌಚಗುಂಡಿಯನ್ನು ಸ್ವಚ್ಛಗೊಳಿಸುವ ಕೆಲಸವನ್ನು ಇಬ್ಬರು ಕಾರ್ಮಿಕರು ಮಾಡುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಹೀಗಾಗಿ, ಟ್ರಸ್ಟ್‌ನ ವ್ಯವಸ್ಥಾಪಕ, ಟ್ರಸ್ಟಿಗಳು ಮತ್ತು ಟ್ರಸ್ಟಿಯ ಇದರ ಪದಾದಿಕಾರಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ (ತಡೆ) ಕಾಯ್ದೆ ಮತ್ತು ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ನಿಷೇಧ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT