ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಠ ‘ವಿರಾಗಿ’ಯೇ ಚಿತ್ರ ನಿರ್ದೇಶಕ!

Last Updated 27 ಮಾರ್ಚ್ 2023, 20:17 IST
ಅಕ್ಷರ ಗಾತ್ರ

ಬೆಂಗಳೂರು: ‘ಮಠಗಳು, ದೇವರಿಂದ ಅಂತರ ಕಾಯ್ದುಕೊಂಡಿದ್ದವನು ನಾನು ‘ವಿರಾಟಪುರ ವಿರಾಗಿ’ ಚಿತ್ರ ನಿರ್ದೇಶಿಸಿದೆ. ಈ ಚಿತ್ರ ನಾನಾಗಿಯೇ ಬಯಸಿ ಆಗಿದ್ದಲ್ಲ. ಜಡೆಯ ಸ್ವಾಮೀಜಿಯ ಆಣತಿಯಿಂದ ಆಗಿದ್ದು’ ಎಂದು ಚಿತ್ರದ ನಿರ್ದೇಶಕ ಬಿ.ಎಸ್‌. ಲಿಂಗದೇವರು ಭಾವುಕರಾಗಿ ನುಡಿದರು.

14ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಿರ್ದೇಶಕರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕುಮಾರ ಶಿವಯೋಗಿಗಳ ಕುರಿತು ಚಿತ್ರ ಮಾಡಬೇಕೆಂದು ಜಡೆಯ ಮಹಾಸ್ವಾಮೀಜಿ ಸೂಚಿಸಿದರು. ದೇವರು, ಮಠಗಳಿಂದ ದೂರ ಉಳಿದಿದ್ದ ನಾನು ನಿರ್ದೇಶಕನಾಗಿ ಈ ಸೂಚನೆ ಒಪ್ಪಿಕೊಂಡೆ. ಸ್ವಾಮಿಗಳು ಎಂದರೆ ಪವಾಡ ಸೃಷ್ಟಿಸುವವರು ಎಂಬ ನಂಬಿಕೆಯಿಂದ ಈ ಚಿತ್ರವನ್ನು ದೂರವಿಡಲು ನಿರ್ಧರಿಸಿದೆ. ಚಿತ್ರದ ಬರವಣಿಗೆಗೆ ಇಳಿದಾಗ ಪವಾಡ, ಮಠದಿಂದ ಹೊರತಾದ ಬೇರೆಯದೇ ಆಯಾಮ ಸಿಗಲು ಪ್ರಾರಂಭವಾಯಿತು’ ಎಂದರು.

‘ರಾಜ್ಯದಲ್ಲಿ ಸುಮಾರು 3,000 ಮಠಗಳಿವೆ. ಯಾವುದೋ ಒಂದು ಮಠದ ಸ್ವಾಮೀಜಿ ತಪ್ಪು ಎಸಗಿದ್ದಾರೆಂದು ಎಲ್ಲ ಮಠಗಳನ್ನು ದೂಷಿಸುವುದು ಸರಿಯಲ್ಲ. ಕುಮಾರ ಶಿವಯೋಗಿಗಳಂತಹ ಅನೇಕ ಮಹನೀಯರು ಜಾತಿ, ಮತಗಳಿಗೆ ಮಿಗಿಲಾದ ಕೆಲಸ ಮಾಡಿದ್ದಾರೆ. ಉತ್ತಮ ಸಮಾಜ ನಿರ್ಮಾಣಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ’ ಎಂದು ಅವರು ತಿಳಿಸಿದರು.

ಥ್ರಿಲ್ಲರ್‌ ಮಾಡಬೇಕು ಅಂದುಕೊಂಡಿದ್ದೆ: 19.20.21 ಚಿತ್ರದ ನಿರ್ದೇಶಕ ಮಂಸೋರೆ ಮಾತನಾಡಿ, ‘ಈ ರೀತಿಯ ಸಿನಿಮಾವನ್ನು ಸಾಕ್ಷ್ಯಚಿತ್ರ ಮಾಡಬಹುದಿತ್ತು. ದೊಡ್ಡ ನಾಯಕನನ್ನು ಇಟ್ಟುಕೊಂಡು ರೋಚಕವಾಗಿ ಮಾಡಬಹುದಿತ್ತು. ಆದರೆ ನಾನು ವಿಠ್ಠಲ ಮಲೆಕುಡಿಯ ಅವರ ಪ್ರಕರಣವನ್ನು 2012ರಿಂದ ಗಮನಿಸುತ್ತಿದ್ದೆ. 2021ರ ಅಕ್ಟೋಬರ್‌ನಲ್ಲಿ ಪ್ರಕರಣದ ತೀರ್ಪು ಹೊರಬಿತ್ತು. ಆಗ ಇದನ್ನು ಸಣ್ಣ ಸಿನಿಮಾ ಮಾಡೋಣ ಎಂದು ನಿರ್ಮಾಪಕರು ಹೇಳಿದರು. ನಾನು ಮೊದಲಿಗೆ ಥ್ರಿಲ್ಲರ್‌ ಮಾಡಬೇಕು ಅಂದುಕೊಂಡಿದ್ದೆ’ ಎಂದರು.

‘ವಿಠ್ಠಲ ಅವರ ಮನೆ ಮತ್ತು ಸಮುದಾಯದವರನ್ನು ಭೇಟಿ ಮಾಡಲು ಹೋದಾಗ, ಊರು ತಲುಪಲು 8 ಕಿಲೋ ಮೀಟರ್‌ ಸಾಗಬೇಕಿತ್ತು. ಸರಿಯಾದ ರಸ್ತೆಯೇ ಇರಲಿಲ್ಲ. ಅವರ ಜೀವನ, ಅನುಭವ ಕೇಳಿದ ಮೇಲೆ ಈ ಚಿತ್ರವನ್ನು ಸಹಜವಾಗಿ ತೆರೆಯ ಮೇಲೆ ತರಬೇಕು. ಇಲ್ಲಿನ ಬದುಕನ್ನು ಜನರಿಗೆ ತಲುಪಿಸಬೇಕು. ಸಾಧ್ಯವಾದಷ್ಟು ನಡೆದ ಘಟನೆಗಳನ್ನೇ ಮರುಸೃಷ್ಟಿ ಮಾಡಬೇಕು ಎನ್ನಿಸಿತು. ಹೀಗಾಗಿ ಅತ್ಯಂತ ಸಹಜವಾಗಿಯೇ ಈ ಕಥೆಯನ್ನು ತೆರೆಯ ಮೇಲೆ ತಂದಿರುವೆ’ ಎಂದರು.

ಮಾರ್ಚ್‌ 26ರಂದು ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಚಿತ್ರಗಳ ನಿರ್ದೇಶಕರಾದ ಡಾನ್‌ ಪಲತರ, ಹರೀಶ್‌, ಚಂಪಾ ಶೆಟ್ಟಿ, ಮಂಸೋರೆ ಮೊದಲಾದವರು ಭಾಗವಹಿಸಿದ್ದರು.

ವಿದೇಶಿ ನಿರ್ದೇಶಕರಿಲ್ಲ!
ಚಿತ್ರೋತ್ಸವದಲ್ಲಿ ಪ್ರತಿ ದಿನ ಸಾಕಷ್ಟು ವಿದೇಶಿ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ. ಆದರೆ, ವಿದೇಶಿ ಚಿತ್ರ ನಿರ್ದೇಶಕ ಅಥವಾ ಸಿನಿಮಾ ತಂಡ ಈ ಸಲದ ಚಿತ್ರೋತ್ಸವದಲ್ಲಿ ವಿರಳ. ಇನ್ನು, ಏಷ್ಯಾ ಸ್ಪರ್ಧೆಯ ವಿಭಾಗದಲ್ಲೂ ಈ ಸಲ ಹಿಂದಿನ ಚಿತ್ರೋತ್ಸವಗಳಿಗಿಂತ ಹೆಚ್ಚು ಕನ್ನಡ ಚಿತ್ರಗಳಿಗೆ ಜಾಗ ನೀಡಲಾಗಿದೆ. ಹೀಗಾಗಿ ಚಿತ್ರೋತ್ಸವದಲ್ಲಿ ಭಾಗಿಯಾದ ಬೇರೆ ರಾಜ್ಯದ ನಿರ್ದೇಶಕರ ಸಂಖ್ಯೆಯೂ ಕಡಿಮೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT