ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಪಿಗಳಿಗೆ ವೈದ್ಯಕೀಯ ಪರೀಕ್ಷೆ ಕಡ್ಡಾಯ: ಪ್ರವೀಣ್ ಸೂದ್

Last Updated 10 ಫೆಬ್ರುವರಿ 2020, 19:42 IST
ಅಕ್ಷರ ಗಾತ್ರ

ಬೆಂಗಳೂರು: ‘ಬಂಧಿಸುವ ಆರೋಪಿಗಳನ್ನು ಮತ್ತು ಸಾರ್ವಜನಿಕರಿಂದ ಅಥವಾ ಯಾವುದೇ ರೀತಿಯ ಹಲ್ಲೆಗೆ ಒಳಗಾಗಿ ಠಾಣೆಗೆ ಕರೆಕೊಂಡು ಬರುವವರನ್ನು ಕಡ್ಡಾಯವಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು’ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸೋಮವಾರ ಸುತ್ತೋಲೆ ಹೊರಡಿಸಿದ್ದಾರೆ. ವೈದ್ಯಕೀಯ ಪರೀಕ್ಷೆಯ ನಂತರ ಮುಂದಿನ ಕ್ರಮಕೈಗೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ಹೊರಡಿಸಿರುವ ಮಾರ್ಗಸೂಚಿಯಲ್ಲಿ. ವಶದಲ್ಲಿರುವ ಬಂಧಿತ ಆರೋಪಿಯನ್ನು 48 ಗಂಟೆಗೊಮ್ಮೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು ಎಂದೂ ಸ್ಪಷ್ಟವಾಗಿ ತಿಳಿಸಲಾಗಿದೆ. ಆದರೆ, ಅದನ್ನು ಅನುಸರಿಸುವ ವಿಷಯದಲ್ಲಿ ನಿರ್ಲಕ್ಷ್ಯ ತೋರಲಾಗುತ್ತಿದೆ. ಇದರಿಂದ ಮಾನವ ಹಕ್ಕುಗಳ ಉಲ್ಲಂಘನೆಗೆ ಅವಕಾಶವಾಗಿ ವ್ಯತಿರಿಕ್ತ ಘಟನೆಗಳು ನಡೆದು ಪೊಲೀಸರು ತಪ್ಪಿತಸ್ಥರಾಗುತ್ತಿದ್ದಾರೆ. ಇದರಿಂದ ಇಲಾಖೆ ಮುಜುಗರಕ್ಕೆ ಒಳಗಾಗಬೇಕಾಗುತ್ತದೆ ಎಂದೂ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ವಿಚಾರಣಾಧೀನ ಕೈದಿ ಸಂಜು ಅಲಿಯಾಸ್ ಸಂಜೀವ್ ಕುಮಾರ್ ಎಂಬವರ ಸಾವಿಗೆ ಸಂಬಂಧಿಸಿದಂತೆ ದಾಖಲಿಸಿಕೊಂಡಿದ್ದ ಪ್ರಕರಣದಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗ, ಕೈದಿಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ ತೋರಲಾಗಿದೆ ಎಂದು ಹೇಳಿದೆ. ಹೀಗಾಗಿ, ಗಾಯಗೊಂಡ ವ್ಯಕ್ತಿ ಅಥವಾ ಬಂಧಿತ ವ್ಯಕ್ತಿಯನ್ನು ಅಧಿಕಾರಿ ಎದುರು ಹಾಜರುಪಡಿಸುವುದಕ್ಕೂ ಮೊದಲು ಸಮೀಪದ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ದ ಚಿಕಿತ್ಸೆ ಕೊಡಿಸಲು ಪ್ರಥಮ ಆದ್ಯತೆ ನೀಡಬೇಕು.

ಆರೋಪಿಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ನಿರ್ವಹಿಸುವ ಸಂದರ್ಭದಲ್ಲಿ ವಿಳಂಬವಾಗಿ, ಗಾಯಗೊಂಡ ವ್ಯಕ್ತಿಯ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ, ಮಾನವೀಯತೆ ದೃಷ್ಟಿಯಿಂದ ವೈದ್ಯಕೀಯ ನೆರವು ಕೊಡಿಸಬೇಕು ಎಂದು 2019ರ ಡಿ. 16ರಂದು ಪೊಲೀಸ್ ಮುಖ್ಯಸ್ಥರಿಗೆ ಬರೆದಿರುವ ಪತ್ರದಲ್ಲಿ ಆಯೋಗ ಶಿಫಾರಸು ಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರವೀಣ್‌ ಸೂದ್‌ ಅವರು ಈ ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT