ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಗಾ ಲೋಕ ಅದಾಲತ್‌: 3.37 ಲಕ್ಷ ಪ್ರಕರಣ ಇತ್ಯರ್ಥ

Last Updated 21 ಡಿಸೆಂಬರ್ 2021, 20:45 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕ ರಾಜ್ಯ ಕಾನೂನು ಸೇವೆಗಳಪ್ರಾಧಿಕಾರ (ಕೆಎಸ್ಎಲ್ಎಸ್ಎ) ಇದೇ 18ರಂದು ಹಮ್ಮಿಕೊಂಡಿದ್ದ ವರ್ಷದ ಕೊನೆಯ ಲೋಕ ಅದಾಲತ್‌ನಲ್ಲಿ 3.37 ಲಕ್ಷ ಪ್ರಕರಣ ಇತ್ಯರ್ಥಪಡಿಸಲಾಗಿದ್ದು, ಸರ್ಕಾರಕ್ಕೆ ₹ 625 ಕೋಟಿ ಉಳಿತಾಯ ಮಾಡಲಾಗಿದೆ’ ಎಂದುಕೆಎಸ್ಎಲ್ಎಸ್ಎ ಕಾರ್ಯನಿರ್ವಾಹಕ ಅಧ್ಯಕ್ಷರೂ ಅದ ಹೈಕೋರ್ಟ್‌ ನ್ಯಾಯಮೂರ್ತಿ ಬಿ.ವೀರಪ್ಪ
ತಿಳಿಸಿದರು.

ಈ ಕುರಿತಂತೆ ಮಾಧ್ಯಮಗೋಷ್ಠಿಯಲ್ಲಿ ವಿವರ ನೀಡಿದ ಅವರು, ‘ಈ ಎಲ್ಲ ವ್ಯಾಜ್ಯಗಳು ಕೋರ್ಟ್‌ನಲ್ಲಿ ನಡೆದಿದ್ದೇ ಆಗಿದ್ದರೆ, ಅದರಿಂದ ಕೋರ್ಟ್ ಕಲಾಪ ನ್ಯಾಯಾಧೀಶರ ಸಮಯ, ಸಂಬಳ ಹಾಗೂ ಇತರೆ ಖರ್ಚುಗಳು ₹ 625 ಕೋಟಿ ಆಗುತ್ತಿತ್ತು. ಆದರೆ, ಇದನ್ನು ಲೋಕ ಅದಾಲತ್‌ ಮುಖಾಂತರ ಉಳಿತಾಯ ಮಾಡಲಾಗಿದೆ’ ಎಂದು ತಿಳಿಸಿದರು.

‘ಈ ಬಾರಿಯ ಮೆಗಾ ಲೋಕ ಅದಾಲತ್‌ನಲ್ಲಿ ಮೋಟಾರು ವಾಹನ, ಅಮಲ್ಜಾರಿ, ಪಾರ್ಟಿಷನ್, ಇತರೆ ಸಿವಿಲ್ ವ್ಯಾಜ್ಯಗಳು, ಎಜೆಕ್ಟಮೆಂಟ್/ಎಚ್ಆರ್‌ಎಸ್‌ ಪ್ರಕರಣಗಳು, ಎನ್ಐ ಆ್ಯಕ್ಟ್ (ಚೆಕ್‌ ಕೇಸು), ಕ್ರಿಮಿನಲ್ ಕಾಂಪೌಂಡಬಲ್‌, ಗ್ರಾಹಕರ ವೇದಿಕೆ, ಸಾಲ ವಸೂಲಾತಿ ಸೇರಿದಂತೆ ಒಟ್ಟು 5,53,726 ಪ್ರಕರಣಗಳನ್ನು ಲೋಕ ಅದಾಲತ್‌ಗೆ ಪರಿಗಣಿಸಲಾಗಿತ್ತು. ಇವುಗಳಲ್ಲಿ 3.37 ಲಕ್ಷ ಪ್ರಕರಣ ಇತ್ಯರ್ಥಪಡಿಸಲಾಗಿದೆ’ ಎಂದರು.

‘ಪ್ರಕರಣಗಳಿಗೆ ಸಂಬಂಧಿಸಿದಂತೆ ₹ 79.72 ಕೋಟಿ ದಂಡದ ಮೊತ್ತವನ್ನು ಸಂಗ್ರಹಿಸಲಾಗಿದೆ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ₹ 212 ಕೋಟಿ ಸೇರಿದಂತಾಗಿದೆ. ಅಲ್ಲದೇ, ಕಕ್ಷಿದಾರರಿಗೆ ₹ 862 ಕೋಟಿ ಪರಿಹಾರ ದೊರಕಿಸಿಕೊಡಲಾಗಿದೆ’ ಎಂದು ವಿವರಿಸಿದರು.

ವಾಣಿಜ್ಯ ನ್ಯಾಯಾಲಯ:ಬೆಂಗಳೂರಿನ ವಾಣಿಜ್ಯ ನ್ಯಾಯಾಲಯಗಳಲ್ಲಿ ಬಾಕಿ ಇದ್ದ 113 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ₹ 157.18 ಕೋಟಿ ಪರಿಹಾರ ಒದಗಿಸಲಾಗಿದೆ.

ಕೈಗಾರಿಕಾ ನ್ಯಾಯಾಲಯ: ಬೆಂಗಳೂರಿನ ಕೈಗಾರಿಕಾ ನ್ಯಾಯಾಲಯದಲ್ಲಿ ಬಾಕಿ ಇದ್ದ 25 ಪ್ರಕರಣಗಳನ್ನು ಇತ್ಯರ್ಥಪಡಿಸಿ ₹ 2.03 ಕೋಟಿ ಪರಿಹಾರ ಕೊಡಿಸಲಾಗಿದೆ.

ಕಕ್ಷಿದಾರ ವೃದ್ಧೆಯ ಕಾಲಿಗೆ ನಮಿಸಿದ ನ್ಯಾಯಮೂರ್ತಿ ಬಿ.ವೀರಪ್ಪ
‘ಪಾಲು ವಿಭಾಗಕ್ಕೆ ಸಂಬಂಧಿಸಿದಂತೆ ನಗರದ ಸಿಟಿ ಸಿವಿಲ್ ಕೋರ್ಟ್‌ ಹಾಲ್ 39ರಲ್ಲಿ ಬಾಕಿ ಇದ್ದ ಪ್ರಕರಣವೊಂದರಲ್ಲಿ87 ವರ್ಷದ ವೃದ್ಧೆಯನ್ನು ಸಂಧಾನಕ್ಕೆ ಒಪ್ಪಿಸುವ ದಿಸೆಯಲ್ಲಿ ನಾನು ಆಕೆಯ ಕಾಲುಮುಟ್ಟಿ ನಮಸ್ಕರಿಸಿದೆ’ ಎಂಬ ಅಂಶವನ್ನು ನ್ಯಾಯಮೂರ್ತಿ ವೀರಪ್ಪ ಇದೇ ವೇಳೆ ವಿವರಿಸಿದರು.

‘ಆ ವೃದ್ಧೆಯನ್ನು ನೋಡಿದ ತಕ್ಷಣ ಮನಸ್ಸಿನಲ್ಲಿ ನನ್ನ ತಾಯಿಯ ಚಿತ್ರ ಮೂಡಿತು. ಕೂಡಲೇ ನಾನು ಆಕೆಯ ಕಾಲುಮುಟ್ಟಿ ನಮಸ್ಕರಿಸಿ, ಅಮ್ಮಾ ವ್ಯಾಜ್ಯ ಬಗೆಹರಿಸಿಕೊಳ್ಳಿ, ಸತ್ತಮೇಲೆ ಯಾರೂ ಏನನ್ನೂ ಹೊತ್ತುಕೊಂಡು ಹೋಗುವುದಿಲ್ಲ. ನೆಮ್ಮದಿಯಿಂದ ಬದುಕಿದರೆ ಅದೇ ಸಾರ್ಥಕ ಎಂದು ಹೇಳಿದೆ. ಕೂಡಲೇ ಆ ವೃದ್ಧೆ ನನ್ನ ಮಾತನ್ನು ಮನ್ನಿಸಿ ವ್ಯಾಜ್ಯ ಇತ್ಯರ್ಥಪಡಿಸಿಕೊಂಡರು’ ಎಂದು ವೀರಪ್ಪ ಹೇಳಿದರು.

ವಿಶೇಷ ಪ್ರಕರಣಗಳು:ಧಾರವಾಡ ಜಿಲ್ಲೆಯ ಕುಂದಗೋಳ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಬಾಕಿ ಇದ್ದ 35 ವರ್ಷ ಹಳೆಯ ಆಸ್ತಿ ವಿವಾದ ಲೋಕ ಅದಾಲತ್‌ನಲ್ಲಿ ಬಗೆಹರಿದಿದೆ.

*ಹಾಸನ ಜಿಲ್ಲೆಯ ಹೊಳೆನರಸೀಪುರ ನ್ಯಾಯಾಲಯದಲ್ಲಿ 17 ವರ್ಷಗಳಿಂದ ಬಾಕಿ ಇದ್ದ ಜೀವನಾಂಶ ಪ್ರಕರಣ ಇತ್ಯರ್ಥಪಡಿಸಿ, ಪತ್ನಿಗೆ 1.28 ಎಕರೆ ಜಮೀನು ಕೊಡಿಸಲಾಗಿದೆ ಎಂದೂ ಅವರು ತಿಳಿಸಿದರು.

*ಮೈಸೂರು ಜಿಲ್ಲೆಯಲ್ಲಿನ ಕೌಟುಂಬಿಕ ನ್ಯಾಯಾಲಯದಲ್ಲಿ ಬಾಕಿ ಇದ್ದ 142 ವೈವಾಹಿಕ ಪ್ರಕರಣಗಳನ್ನು ಲೋಕ ಅದಾಲತ್‌ ವಿಚಾರಣೆ ನಡೆಸಿ ಇವುಗಳಲ್ಲಿ 25 ದಂಪತಿ ಮತ್ತೆ ಒಂದಾಗಿ ಹೊಸ ಬದುಕು ಆರಂಭಿಸಿದ್ದಾರೆ.

*ಧಾರವಾಡ-ಹುಬ್ಬಳ್ಳಿಯಲ್ಲಿ 2 ವೈವಾಹಿಕ ಪ್ರಕರಣಗಳಲ್ಲಿ ದಂಪತಿ ಒಗ್ಗೂಡಿ ಪ್ರಕರಣ ಇತ್ಯರ್ಥಪಡಿಸಿಕೊಂಡಿದ್ದಾರೆ.

*ಗದಗದಲ್ಲಿ 8 ವೈವಾಹಿಕ ಪ್ರಕರಣಗಳಲ್ಲಿ ದಂಪತಿ ಜೊತೆಯಾಗಿ ತಮ್ಮ ನಡುವಿನ ವ್ಯಾಜ್ಯ ಬಗೆಹರಿಸಿಕೊಂಡಿದ್ದಾರೆ.

*ಚಿಕ್ಕಬಳ್ಳಾಪುರ ಹಾಗೂ ಚಿತ್ರದುರ್ಗದಲ್ಲಿ ತಲಾ ಒಂದೊಂದು ಪ್ರಕರಣದಲ್ಲಿ ದಂಪತಿ ತಮ್ಮ ವಿವಾದ ಬಗೆಹರಿಸಿಕೊಂಡು ಒಂದಾಗಿದ್ದಾರೆ.

**
ಈ ವರ್ಷ ನಡೆದಿರುವ ನಾಲ್ಕು ಲೋಕ ಅದಾಲತ್‌ಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಉತ್ತಮ ಯಶಸ್ಸು ದೊರೆತಿದ್ದು, ಇದಕ್ಕೆ ನ್ಯಾಯಾಂಗದ ಸಿಬ್ಬಂದಿಯ ಶ್ರಮ ‍ಪ್ರಮುಖ ಕಾರಣ.
- ಬಿ.ವೀರಪ್ಪ, ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT