ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ: 400 ಮರಗಳಿಗೆ ಕುತ್ತು?

ಹೊರವರ್ತುಲ ರಸ್ತೆಯಲ್ಲಿ ಎರಡನೇ ಹಂತದಲ್ಲಿ ನಡೆಯಲಿರುವ ಕಾಮಗಾರಿ
Last Updated 17 ಜುಲೈ 2018, 20:10 IST
ಅಕ್ಷರ ಗಾತ್ರ

ಬೆಂಗಳೂರು: ಸಿಲ್ಕ್‌ ಬೋರ್ಡ್‌ ಜಂಕ್ಷನ್‌ನಿಂದ ಕೆ.ಆರ್‌.ಪುರದ ನಡುವಿನ ಹೊರವರ್ತುಲ ರಸ್ತೆಯಲ್ಲಿ ‘ನಮ್ಮ ಮೆಟ್ರೊ’ ಎರಡನೇ ಹಂತದ ಕಾಮಗಾರಿ ಸುಮಾರು 400ರಷ್ಟು ಮರಗಳನ್ನು ಬಲಿ ಪಡೆಯಲಿದೆ.

‘ಈ ಮಾರ್ಗದಲ್ಲಿ ಸುಮಾರು 1,250 ಮರಗಳಿದ್ದು, ಹೆಚ್ಚಿನವು ಸಣ್ಣಗಾತ್ರದವು. ಇವುಗಳಲ್ಲಿ 500 ಮರಗಳನ್ನು ಹೊರತುಪಡಿಸಿ ಉಳಿದವು 10 ವರ್ಷದೊಳಗಿನವು. ಅವುಗಳನ್ನು ಸುಲಭವಾಗಿ ಸ್ಥಳಾಂತರ ಮಾಡಬಹುದು’ ಎಂದು ಹೆಸರು ಹೇಳಲು ಇಚ್ಛಿಸದಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ಈ ಮಾರ್ಗದ ಪ್ರಾಥಮಿಕ ಸರ್ವೆ ನಡೆಸಿದ್ದೇವೆ. ಇಲ್ಲಿನ 400ರಷ್ಟು ಮರಗಳನ್ನು ತೆರವುಗೊಳಿಸುವಂತೆ ಬಿಬಿಎಂಪಿಯ ಅರಣ್ಯ ವಿಭಾಗದ ಅಧಿಕಾರಿಗಳನ್ನು ಕೋರಿದ್ದೇವೆ’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ಪ್ರಧಾನ ವ್ಯವಸ್ಥಾಪಕ (ಹಣಕಾಸು) ಯು.ಎ.ವಸಂತ ರಾವ್ ತಿಳಿಸಿದರು.

‘ಇಲ್ಲಿ ಗುರುತಿಸಿರುವ 400 ಮರಗಳಲ್ಲಿ 100 ಮರಗಳು ಸ್ಥಳಾಂತರ ಮಾಡುವುದಕ್ಕೆ ಯೋಗ್ಯವಾಗಿವೆ. ಇವುಗಳನ್ನು ನೆಡುವುದಕ್ಕೆ ಜಾಗ ಒದಗಿಸುವಂತೆ ಆಸುಪಾಸಿನಲ್ಲಿರುವ ಕಾರ್ಪೊರೇಟ್‌ ಕಂಪನಿಗಳನ್ನು ಕೋರಿದ್ದೇವೆ. ಸಮೀಪದ ಉದ್ಯಾನಗಳಲ್ಲಿ ಇವುಗಳನ್ನು ನೆಡುವ ಬಗ್ಗೆಯೂ ಚಿಂತನೆ ನಡೆಸಿದ್ದೇವೆ’ ಎಂದರು.

ಯಾವುದೇ ಯೋಜನೆಗೆ 50ಕ್ಕಿಂತ ಹೆಚ್ಚು ಮರಗಳನ್ನು ಕಡಿಯಬೇಕಾದರೆ ಬಿಬಿಎಂಪಿಯು ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿ, ಜನರು ನೀಡುವ ಸಲಹೆಗಳನ್ನು ಆಧರಿಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕಾಗುತ್ತದೆ.

ಆರು ಬೋಗಿಗಳ ಮೆಟ್ರೊ– ಟ್ರಿಪ್‌ ಕಡಿತ

ಆರುಬೋಗಿಗಳ ಮೆಟ್ರೊ ರೈಲಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಸೋಮವಾರ ಬೆಳಗ್ಗಿನ ಅವಧಿಯ ಎರಡು ಟ್ರಿಪ್‌ಗಳನ್ನು ರದ್ದುಪಡಿಸಲಾಯಿತು.

‘ಸಿಗ್ನಲಿಂಗ್‌ನಲ್ಲಿ ಕಾಣಿಸಿಕೊಂಡ ದೋಷದಿಂದಾಗಿ ರೈಲು ಬೈಯಪ್ಪನಹಳ್ಳಿ ಡಿಪೋದಿಂದ ಹೊರಡಲಿಲ್ಲ. ಅದರ ಬದಲು ಮೂರು ಬೋಗಿಗಳ ರೈಲನ್ನು ಓಡಿಸುವ ಮೂಲಕ ಪ್ರಯಾಣಿಕರಿಗೆ ತೊಂದರೆ ಆಗದಂತೆ ನೋಡಿಕೊಂಡಿದ್ದೇವೆ’ ಎಂದು ವಸಂತ ರಾವ್‌ ತಿಳಿಸಿದರು.

‘ಆರು ಬೋಗಿಗಳ ರೈಲು ಸೇವೆಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದು ಬೆಳಿಗ್ಗೆ ಮೂರು ಟ್ರಿಪ್‌ ಹಾಗೂ ಸಂಜೆ ಎರಡು ಟ್ರಿಪ್‌ ನಡೆಸುತ್ತದೆ. ಟ್ರಿಪ್‌ಗಳ ಸಂಖ್ಯೆ ಹೆಚ್ಚಿಸುವಂತೆ ಪ್ರಯಾಣಿಕರಿಂದ ಬೇಡಿಕೆ ಬಂದಿದೆ. ಪ್ರಯಾಣಿಕರ ದಟ್ಟಣೆಯನ್ನು ನೋಡಿಕೊಂಡು ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ’ ಎಂದರು.

ತೆರೆಯದ ಬಾಗಿಲು: ನೇರಳ ಮಾರ್ಗದ ಸಿಟಿ ರೈಲು ನಿಲ್ದಾಣವನ್ನು ಸಂಪರ್ಕಿಸುವ ಮೆಟ್ರೊ ನಿಲ್ದಾಣದಲ್ಲಿ ಮಂಗಳವಾರ ಮೆಟ್ರೊ ರೈಲಿನ ಬಾಗಿಲು ಸುಮಾರು ಐದು ನಿಮಿಷ ಕಾಲ ತೆರೆಯಲೇ ಇಲ್ಲ ಎಂದು ಪ್ರಯಾಣಿಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT