ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ಮಾದರಿಯಲ್ಲಿ ಇರಲಿದೆ ಉಪನಗರ ರೈಲು

Last Updated 22 ನವೆಂಬರ್ 2019, 16:13 IST
ಅಕ್ಷರ ಗಾತ್ರ

ಬೆಂಗಳೂರು: ಅಂದುಕೊಂಡಂತೆ ಕಾಮಗಾರಿ ಪೂರ್ಣಗೊಂಡರೆ ಹೊಸ ವಿನ್ಯಾಸದ ಉಪನಗರ ರೈಲುಗಳು ರಾಜಧಾನಿಯಲ್ಲಿ 2026ರ ವೇಳೆಗೆ ಸಂಚರಿಸಲಿವೆ.

ಉಪನಗರ ರೈಲು ಯೋಜನೆಗೆ ರೈಲ್ವೆ ಮಂಡಳಿ ಅನುಮತಿ ದೊರೆತ ನಂತರ ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆ–ರೈಡ್‌) ತನ್ನ ಕಾರ್ಯಚಟುವಟಿಕೆ ಚುರುಕುಗೊಳಿಸಿದೆ. ಉದ್ದೇಶಿತ ಯೋಜನೆಯು ಪೂರ್ಣಗೊಂಡರೆ ದೇಶದಲ್ಲೇ ಅತ್ಯಾಧುನಿಕ ಶೈಲಿಯ ಉಪನಗರ ರೈಲು ಸಂಚಾರ ಆರಂಭಿಸಿದ ಮೊದಲ ನಗರ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗಲಿದೆ.

ಉಪನಗರ ರೈಲು ಸಂಚಾರಕ್ಕೆ ಮೀಸಲಾದ 148 ಕಿಲೋ ಮೀಟರ್ ಮಾರ್ಗದ ನಾಲ್ಕು ಕಾರಿಡಾರ್‌ನಲ್ಲಿ ಮೆಟ್ರೊ ರೈಲು ಮಾದರಿಯ ನಿಲ್ದಾಣಗಳು, ಟಿಕೆಟ್‌ ನೀಡುವ ವ್ಯವಸ್ಥೆ, ನಗದುರಹಿತ ಪ್ರಯಾಣಕ್ಕೆ ಸ್ಮಾರ್ಟ್‌ ಕಾರ್ಡ್‌, ಸ್ವಯಂಚಾಲಿತ ಟಿಕೆಟ್ ಕಲೆಕ್ಷನ್ ಗೇಟ್‌ ಅಳವಡಿಸುವ ಉದ್ದೇಶವನ್ನು ಕೆ–ರೈಡ್ ಹೊಂದಿದೆ.

ತಲಾ ಆರು ಬೋಗಿಗಳ 53 ರೈಲುಗಳು ಈ ಮಾರ್ಗದಲ್ಲಿ ಸಂಚರಿಸಲಿವೆ. ಎಲ್ಲವೂ ಹವಾನಿಯಂತ್ರಿತ ಸೌಲಭ್ಯ, ಮೆಟ್ರೊ ರೈಲಿನ ರೀತಿ ಜಾರುವ (ಸ್ಲೈಡ್‌) ಬಾಗಿಲುಗಳನ್ನು ಈ ಕೋಚ್‌ಗಳು ಹೊಂದಿರಲಿವೆ. ಅಪಘಾತ ಮತ್ತು ದಟ್ಟಣೆ ನಿಯಂತ್ರಿಸಲು ‘ಪ್ಲಾಟ್‌ಫಾರಂ ಸ್ಕ್ರೀನ್ ಡೋರ್ ಸಿಸ್ಟಮ್’ ಅಳವಡಿಸುವ ಆಲೋಚನೆಯನ್ನೂ ಹೊಂದಲಾಗಿದೆ ಎಂದು ಮೂಲಗಳು ತಿಳಿಸಿವೆ.

ಎಲ್ಲಾ ರೈಲುಗಳಲ್ಲಿ ಎಲ್‌ಇಡಿ ದೀಪಗಳು, ಸಿಸಿಟಿವಿ ಕ್ಯಾಮೆರಾಗಳು, ಸುಖಾಸೀನ ಸೀಟುಗಳು ಸೇರಿ ಅತ್ಯಾಧುನಿಕ ವ್ಯವಸ್ಥೆ ಇರಲಿದೆ. ನಿಲ್ದಾಣಗಳಲ್ಲಿ ಪ್ರಯಾಣಿಕರ ಮಾಹಿತಿಗೆ ಎಲ್‌ಇಡಿ ಫಲಕಗಳು, ಎಸ್ಕಲೇಟರ್, ಲಿಫ್ಟ್‌ಗಳು, ಸಾರ್ವಜನಿಕ ಶೌಚಾಲಯಗಳು ಇರಲಿವೆ. ಮೆಟ್ರೊ ನಿಲ್ದಾಣಗಳ ಮಾದರಿಯಲ್ಲೇ ಟಿಕೆಟ್ ಪಡೆದ ನಂತರವೇ ಪ್ಲಾಟ್‌ಫಾರಂ ಪ್ರವೇಶಿಸಲು ಅವಕಾಶ ಆಗುವಂತೆ ವ್ಯವಸ್ಥೆ ಮಾಡಲಾಗುವುದು ಎಂದೂ ಹೇಳಿವೆ.

ಬೆಳಿಗ್ಗೆ 5ರಿಂದಲೇ ರೈಲು ಸಂಚಾರ ಆರಂಭವಾಗಲಿದೆ. ಗಂಟೆಗೆ 30 ಕಿ.ಮೀಯಿಂದ 90 ಕಿ.ಮೀ ವೇಗದಲ್ಲಿ ರೈಲುಗಳು ಸಂಚರಿಸಲಿವೆ. ಪ್ರತಿ 12ರಿಂದ 20 ನಿಮಿಷಕ್ಕೊಂದು ರೈಲುಗಳು ಎಲ್ಲಾ ಮಾರ್ಗಗಳಲ್ಲೂ ಸಂಚರಿಸುವಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿವೆ.

ಮೆಟ್ರೊ ರೈಲಿನ ಮಾದರಿಯಲ್ಲೇ ಸೌಲಭ್ಯಗಳಿದ್ದರೂ ಪ್ರಯಾಣದರ ಅದಕ್ಕಿಂತ ಕಡಿಮೆ ಇರಲಿದೆ. ಮೆಟ್ರೊ ರೈಲಿನಲ್ಲಿ 15 ಕಿಲೋ ಪ್ರಯಾಣಕ್ಕೆ ₹45 ಇದ್ದು, ಉಪನಗರ ರೈಲಿನ ಪ್ರಯಾಣ ದರ ₹35 ನಿಗದಿಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT