ಮಹಿಳೆಯರಿಗೆ ಬಿಎಂಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ನನ್ನಂತಹ ಮಹಿಳೆಯರು ಸಮಯ ಮತ್ತು ಸಂಚಾರ ದಟ್ಟಣೆ ಸಮಸ್ಯೆಯಿಂದ ಮುಕ್ತಿ ಪಡೆಯಲು ಮೆಟ್ರೊ ಪ್ರಯಾಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ. ಬೆಂಗಳೂರಿನಲ್ಲಿ ವಾಸಿಸುವ ಬಹುತೇಕ ಜನ ಆರಾಮದಾಯಕ ಪ್ರಯಾಣಕ್ಕಾಗಿ ಮೆಟ್ರೊ ಆಯ್ಕೆ ಮಾಡಿಕೊಳ್ಳುತ್ತಾರೆ. ಬಿಎಂಆರ್‌ಸಿಎಲ್ ಇದನ್ನೇ ಬಂಡವಾಳ ಮಾಡಿಕೊಂಡು ಪ್ರಯಾಣ ದರ ಹೆಚ್ಚಿಸಿರುವುದು ಖಂಡನೀಯ. ಕೂಡಲೇ ದರ ಕಡಿತಗೊಳಿಸಬೇಕು.ವೇದಾವತಿ, ಗೃಹಿಣಿ
ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆಯಿಂದ ಮುಕ್ತಿ ಪಡೆಯಲು ಮೆಟ್ರೊ ಪ್ರಯಾಣಕ್ಕೆ ಬಹುತೇಕರು ಆದ್ಯತೆ ನೀಡುತ್ತಾರೆ. ಬಡವರು ಹಾಗೂ ಮಧ್ಯಮ ವರ್ಗದವರು ಕೈಗೆಟಕುವ ದರದಲ್ಲಿ ಮೆಟ್ರೊ ರೈಲಿನಲ್ಲಿ ಪ್ರಯಾಣಿಸಬಹುದಿತ್ತು. ಈಗ ಪ್ರಯಾಣ ದರವನ್ನು ಶೇಕಡ 100ರಷ್ಟು ಹೆಚ್ಚಿಸಿರುವುದರಿಂದ ನಮ್ಮಂತಹ ಮಧ್ಯಮ ವರ್ಗದವರ ಜೇಬಿಗೆ ಕತ್ತರಿ ಬಿದ್ದಂತಾಗಿದೆ. ಬಿಎಂಆರ್‌ಸಿಎಲ್‌ನ ಪ್ರಯಾಣ ದರ ಏರಿಕೆಯಿಂದ ಬೇಸತ್ತ ಕೆಲವರು ಈಗಗಾಲೇ ಸ್ವಂತ ವಾಹನಗಳ ಮೂಲಕ ಸಂಚರಿಸುತ್ತಿದ್ದಾರೆ. ಅನಿವಾರ್ಯ ಆಗಿದ್ದರೆ ಪ್ರಯಾಣ ದರವನ್ನು ಶೇ 10ರಷ್ಟು ಏರಿಕೆ ಮಾಡಬಹುದಿತ್ತು.ಪತ್ತಂಗಿ ಎಸ್. ಮುರಳಿ, ಕುಮಾರಸ್ವಾಮಿ ಬಡಾವಣೆ
ಎಲ್ಲ ವರ್ಗದವರು ಮೆಟ್ರೊ ಪ್ರಯಾಣವನ್ನು ಅವಲಂಬಿಸಿದ್ದಾರೆ. ಏಕಾಏಕಿ ಶೇ 100ರಷ್ಟು ಪ್ರಯಾಣ ದರ ಏರಿಕೆ ಮಾಡಿರುವುದು ಸರಿಯಲ್ಲ. ಸಾರ್ವಜನಿಕರು ಮತ್ತೆ ಬಿಎಂಟಿಸಿ, ದ್ವಿಚಕ್ರ ವಾಹನದಲ್ಲಿ ತಮ್ಮ ದೈನಂದಿನ ಕೆಲಸಗಳಿಗೆ ತೆರಳುತ್ತಿದ್ದಾರೆ. ಇದರಿಂದ ಬೆಂಗಳೂರಿನ ಎಲ್ಲ ರಸ್ತೆಗಳಲ್ಲಿ ಪುನಃ ಸಂಚಾರದಟ್ಟಣೆ ಸಮಸ್ಯೆ ಹೆಚ್ಚಾಗಲಿದೆ. ಮೆಟ್ರೊ ಪ್ರಯಾಣ ದರ ಹೆಚ್ಚಿಸಿರುವುದರಿಂದ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದ್ದು, ಆದಾಯವೂ ಕುಸಿತಗೊಂಡಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರಯಾಣ ದರ ಕಡಿತಗೊಳಿಸುವುದು ಉತ್ತಮ.ಎ.ಸಿ. ಪುಷ್ಪಾ, ಜಯನಗರ
ಮೆಟ್ರೊ ಪ್ರಯಾಣ ದರ ಏರಿಕೆ ಮಾಡಿರುವುದರಿಂದ ಮಧ್ಯಮ ಹಾಗೂ ಬಡ ವರ್ಗದವರಿಗೆ ಆರ್ಥಿಕವಾಗಿ ಸಮಸ್ಯೆ ಆಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೂಡಲೇ ಸಭೆ ನಡೆಸಿ ಮೆಟ್ರೊ ಪ್ರಯಾಣ ದರ ಇಳಿಕೆ ಮಾಡಬೇಕು.ಡಾ. ಪೂಣಿ೯ಮಾ ಕಾಂಬಳೆ, ಚಿಕ್ಕಲಸಂದ್ರ
ಬೆಂಗಳೂರಿನವರ ಸುಗಮ ಸಂಚಾರಕ್ಕೆ ನಮ್ಮ ಮೆಟ್ರೊ ಹೆಸರುವಾಸಿಯಾಗಿತ್ತು. ಆದರೆ ಮೆಟ್ರೊ ಪ್ರಯಾಣ ದರ ಏರಿಕೆ ಮಾಡಿದ ಪರಿಣಾಮ ಕೂಲಿ ಕೆಲಸಕ್ಕೆ ತೆರಳುವವರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲರಿಗೂ ತೊಂದರೆ ಆಗಿದೆ. ಬಿಎಂಆರ್‌ಸಿಎಲ್ ಆದಾಯ ಹೆಚ್ಚಿಸಿಕೊಳ್ಳಲು ಜಾಹೀರಾತು, ಮೆಟ್ರೊ ನಿಲ್ದಾಣದಲ್ಲಿನ ಖಾಲಿ ಜಾಗ ಬಾಡಿಗೆಗೆ ನೀಡುವಂತಹ ಕ್ರಮಗಳನ್ನು ಕೈಗೊಳ್ಳಲಿ. ಅದನ್ನು ಬಿಟ್ಟು ಶೇಕಡ 80ರಿಂದ 100ರಷ್ಟು ಪ್ರಯಾಣ ದರ ಏರಿಕೆ ಮಾಡಿರುವುದು ಅವೈಜ್ಞಾನಿಕವಾಗಿದೆ.ವಿಕಾಸ್, ಮೆಟ್ರೊ ಪ್ರಯಾಣಿಕ
ಮೆಟ್ರೊ ಪ್ರಯಾಣ ದರ ಏರಿಕೆ ಮಾಡಿರುವುದರಿಂದ ನಮ್ಮ ಮೆಟ್ರೊ ಎಷ್ಟು ಜನಪ್ರಿಯವಾಗಿತ್ತೋ ಅಷ್ಟೇ ಕಳಂಕಕ್ಕೆ ತುತ್ತಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಯಾಣ ದರ ಏರಿಕೆ ನಾವು ಮಾಡಿಲ್ಲವೆಂದು ಒಬ್ಬರ ಮೇಲೆ ಇನ್ನೊಬ್ಬರು ಕೆಸರೆರಚಾಟ ಮಾಡುತ್ತಿದ್ದಾರೆ. ಕೂಡಲೇ ಮೆಟ್ರೊ ಪ್ರಯಾಣ ದರ ಇಳಿಕೆ ಮಾಡಬೇಕು. ಬಿಎಂಆರ್‌ಸಿಎಲ್ ಪ್ರಯಾಣ ದರ ಇಳಿಸುವ ನಾಟಕ ಮಾಡುವ ಮೂಲಕ ಪ್ರಯಾಣಿಕರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ.ಸಿ.ಎಸ್. ಮಂದಣ್ಣ, ರಾಜರಾಜೇಶ್ವರಿ ನಗರ
ಮೆಟ್ರೊ ಸಾರ್ವಜನಿಕ ಸಾರಿಗೆ ಸೇವೆಯಾಗಿದ್ದು, ಇಲ್ಲಿ ಸೇವೆಗೆ ಆದ್ಯತೆ ನೀಡಬೇಕೆ ಹೊರೆತು ಲಾಭ ಮಾಡಿಕೊಳ್ಳುವುದಲ್ಲ. ಸಾರ್ವಜನಿಕ ಸಾರಿಗೆ ಪ್ರಯಾಣ ದರ ಶೇ 10ರಿಂದ 15ರವರೆಗೆ ಹೆಚ್ಚಿಸುವುದು ಸಾಮಾನ್ಯ, ಆದರೆ ಶೇ 45ರಿಂದ ಶೇ 100ರವರೆಗೆ ಹೆಚ್ಚಿಸಿರುವುದು ಯಾವ ನ್ಯಾಯ? ಸಂಚಾರ ದಟ್ಟಣೆ ತಪ್ಪಿಸಲು ಮೆಟ್ರೊ ಬಳಸಿ ಎಂದು ಹೇಳುವ ಸರ್ಕಾರವೇ ಈ ರೀತಿ ಪ್ರಯಾಣ ದರ ಹೆಚ್ಚಿಸಿರುವುದು ಖಂಡನೀಯ. ಬಿಎಂಆರ್‌ಸಿಎಲ್‌ಗೆ ಲಾಭವೇ ಮುಖ್ಯವಾದರೆ ಸಾರ್ವಜನಿಕ ಸಾರಿಗೆ ಸೇವೆಯನ್ನು ಬಿಟ್ಟು ಯಾವುದಾದರೂ ಉದ್ಯಮವನ್ನು ಪ್ರಾರಂಭಿಸಲಿ. ಕೂಡಲೇ ಮೆಟ್ರೊ ಪ್ರಯಾಣ ದರ ಇಳಿಸಬೇಕು.ಬಿ.ಆರ್. ಯತೀಶ್, ನಿವೃತ್ತ ಉಪನಿರ್ದೇಶಕರು
ಮೆಟ್ರೊ ಪ್ರಯಾಣ ದರವನ್ನು ಏಕಾಏಕಿ ಶೇಕಡ 80ರಷ್ಟು ಏರಿಕೆ ಮಾಡಿರುವುದು ಅವೈಜ್ಞಾನಿಕ. ಬಿಎಂಆರ್‌ಸಿಎಲ್ ಪ್ರಯಾಣ ದರ ಹೆಚ್ಚಿಸುವ ಬದಲಿಗೆ ಆದಾಯ ದ್ವಿಗುಣಗೊಳಿಸುವ ಇತರ ಮೂಲಗಳನ್ನು ಹುಡುಕಬೇಕು. ಸಾರ್ವಜನಿಕ ಸಾರಿಗೆ ಸಂಸ್ಥೆಗಳಲ್ಲಿ ಪ್ರಯಾಣ ದರ ಹೆಚ್ಚಿಸುವ ಮೊದಲು ಸೇವೆಗೆ ಹೆಚ್ಚು ಆದ್ಯತೆ ನೀಡಬೇಕು.ಹೇಮಂತ್ ಸಂಪಗಾವಕರ, ಕೆ.ಆರ್. ಪುರ
ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಬೇಕು ಎಂಬ ಉದ್ದೇಶದಿಂದಲೇ ಮೆಟ್ರೊ ಪ್ರಯಾಣ ದರವನ್ನು ಹೆಚ್ಚಿಸಲಾಗಿದೆ. ಸಾರ್ವಜನಿಕ ಸಾರಿಗೆ ಹೆಸರಿನಲ್ಲಿ ಈ ರೀತಿ ಲೂಟಿ ಮಾಡುವುದು ಎಷ್ಟು ಸರಿ? ಕೂಡಲೇ ಮೆಟ್ರೊ ಪ್ರಯಾಣ ದರವನ್ನು ಕಡಿತಗೊಳಿಸಬೇಕು. ಬಿಎಂಆರ್‌ಸಿಎಲ್ ಮೆಟ್ರೊ ಮಾರ್ಗದ ಕಂಬಗಳ ಮೇಲೆ ಜಾಹೀರಾತು ಪ್ರದರ್ಶನ ಮಾಡುವುದರ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು. ಅದನ್ನು ಬಿಟ್ಟು ಪ್ರಯಾಣ ದರ ಹೆಚ್ಚಿಸುವುದು ಖಂಡನೀಯ.ಟಿ. ನಾರಾಯಣ ಸ್ವಾಮಿ, ಯಲಹಂಕ
ಬಿಎಂಆರ್‌ಸಿಎಲ್ ಪರಿಸ್ಥಿತಿಗೆ ಅನುಗುಣವಾಗಿ ಪ್ರಯಾಣ ದರವನ್ನು ಒಂದು ಮಿತಿಯಲ್ಲಿ ಪರಿಷ್ಕರಣೆ ಮಾಡಬಹುದಿತ್ತು. ಅದನ್ನು ಬಿಟ್ಟು ಏಕಾಏಕಿ ಶೇಕಡ 50ರಿಂದ 100ರಷ್ಟು ಹೆಚ್ಚಿಸಿದರೆ ಸಾರ್ವಜನಿಕರ ಪರಿಸ್ಥಿತಿ ಏನಾಗಬೇಕು? ಬಿಎಂಆರ್‌ಸಿಎಲ್ ಮೊದಲು ತನ್ನ ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕು. ಮೆಟ್ರೊ ನಿಲ್ದಾಣದ ಖಾಲಿ ಜಾಗಗಳಲ್ಲಿ ವಾಣಿಜ್ಯ ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸುವ ಮೂಲಕ ಆದಾಯದ ಮೂಲವನ್ನು ಹೆಚ್ಚಿಸಿಕೊಳ್ಳಬೇಕು.ಕಿರಣ್ ಮೌರ್ಯ, ಅತ್ತಿಗುಪ್ಪೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.