ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರೂವರೆ ವರ್ಷ ಸಂಚಾರಕ್ಕೆ ಅಡ್ಡಿ

Last Updated 16 ಜೂನ್ 2019, 20:21 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕೇಂದ್ರ ವಾಣಿಜ್ಯ ಪ್ರದೇಶದಲ್ಲಿ ಇನ್ನು ಮೂರೂವರೆ ವರ್ಷ ಸಂಚಾರ ದಟ್ಟಣೆ ಸಮಸ್ಯೆ ಎದುರಿಸಲು ಜನ ಸಜ್ಜಾಗಬೇಕಿದೆ. ಮಹಾತ್ಮ ಗಾಂಧಿ ರಸ್ತೆ ಅಥವಾ ಆಸುಪಾಸಿನ ರಸ್ತೆಗಳ ಮೂಲಕ ಹಾದು ಹೋಗುವಿರಾದರೆ, ಎಂದಿಗಿಂತ ಸ್ವಲ್ಪ ಮುಂಚೆಯೇ ಮನೆಯಿಂದ ಹೊರಡುವುದು ಲೇಸು.

‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಡೇರಿ ವೃತ್ತದಿಂದ ನಾಗವಾರವರೆಗಿನ ಸುರಂಗ ಮಾರ್ಗದ ಕಾಮಗಾರಿ ಆರಂಭಗೊಂಡಿದ್ದು, ಈ ಸಲುವಾಗಿ ಈ ಪ್ರದೇಶದ ಅನೇಕ ಕಡೆ ವಾಹನ ಸಂಚಾರ ನಿರ್ಬಂಧಿಸಲಾಗುತ್ತಿದೆ.

ವೆಲ್ಲಾರ ಜಂಕ್ಷನ್‌ನಿಂದ ಶಿವಾಜಿನಗರದ ನಡುವಿನ ಸುರಂಗ ಮಾರ್ಗ ಹಾಗೂ ನಿಲ್ದಾಣಗಳ ಕಾಮಗಾರಿ ಈಗಾಗಲೇ ಆರಂಭವಾಗಿದೆ. ಎಂ.ಜಿ.ರಸ್ತೆಯ ನೆಲದಡಿಯ ಮೆಟ್ರೊ ನಿಲ್ದಾಣ ಕಾಮಗಾರಿ ಕಾಮರಾಜ ರಸ್ತೆಯಲ್ಲೇ ನಡೆಯಲಿದೆ. ಹಾಗಾಗಿ ಕಾಮರಾಜ ರಸ್ತೆಯಲ್ಲಿ ಎಂ.ಜಿ.ರಸ್ತೆ ಹಾಗೂ ಕಬ್ಬನ್‌ ರಸ್ತೆ ನಡುವೆ ವಾಹನ ಸಂಚಾರವನ್ನು ಭಾನುವಾರದಿಂದ ನಿರ್ಬಂಧಿಸಲಾಗಿದೆ.

‘ಸುರಂಗ ಮಾರ್ಗದ ಕಾಮಗಾರಿ ಪೂರ್ಣಗೊಳಿಸುವುದಕ್ಕೆ ಸಾಮಾನ್ಯವಾಗಿ 48 ತಿಂಗಳು ಕಾಲಾವಕಾಶ ನೀಡಲಾಗುತ್ತದೆ. ಆದರೆ, ಮೆಟ್ರೊ ಎರಡನೇ ಹಂತದ ಸುರಂಗ ಮಾರ್ಗ ಹಾಗೂ ನೆಲದಡಿಯ ನಿಲ್ದಾಣ ಕಾಮಗಾರಿಗಳನ್ನು 42 ತಿಂಗಳುಗಳಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದ್ದೇವೆ’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಲ್‌.ಯಶವಂತ ಚೌಹಾಣ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸುರಂಗ ಮಾರ್ಗದ ಮೆಟ್ರೊ ನಿಲ್ದಾಣಗಳನ್ನು ರಸ್ತೆಯಲ್ಲೇ ನಿರ್ಮಿಸಬೇಕಾದ ಕಡೆ ವಾಹನ ಸಂಚಾರ ನಿರ್ಬಂಧಿಸುವುದು ಅನಿವಾರ್ಯ. ಕಾಮಗಾರಿ ಪೂರ್ಣಗೊಂಡ ಬಳಿಕ ನಿಗಮದಿಂದಲೇ ರಸ್ತೆಯನ್ನು ಅಭಿವೃದ್ಧಿಪಡಿಸಿ ಕೊಡುತ್ತೇವೆ’ ಎಂದರು.

ಮೊದಲ ದಿನವೇ ಗೊಂದಲ: ಸಂಚಾರ ನಿರ್ಬಂಧದ ಮೊದಲ ದಿನವೇ ವಾಹನ ಸವಾರರು ಗೊಂದಲಕ್ಕೀಡಾದರು. ಸಂಚಾರ ಪೊಲೀಸ್‌ ಸಿಬ್ಬಂದಿ ಬದಲಿ ಮಾರ್ಗಗಳ ಬಳಿ ವಾಹನ ಸವಾರರಿಗೆ ಮಾರ್ಗದರ್ಶನ ನೀಡಿದರು.

ಕಾಮರಾಜ ರಸ್ತೆಗೆ ಬದಲಿಯಾಗಿ ಬಳಸುವ ಎಂ.ಜಿ.ರಸ್ತೆ ಹಾಗೂ ಆಸುಪಾಸಿನ ರಸ್ತೆಗಳಲ್ಲಿ ವಾಹನ ನಿಲ್ಲಿಸುವುದನ್ನೂ ನಿಷೇಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT