ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೆಟ್ರೊ ಹಳದಿ ಮಾರ್ಗ: ಪರೀಕ್ಷೆ ಪ್ರಾರಂಭ

ಮೂರ್ನಾಲ್ಕು ತಿಂಗಳು ನಡೆಯಲಿರುವ ಪರೀಕ್ಷೆ * ವರ್ಷದ ಕೊನೆಗೆ ವಾಣಿಜ್ಯ ಸಂಚಾರ ಆರಂಭದ ನಿರೀಕ್ಷೆ
Published 13 ಜೂನ್ 2024, 16:44 IST
Last Updated 13 ಜೂನ್ 2024, 16:44 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ಹಳದಿ ಮಾರ್ಗದಲ್ಲಿ ಪ್ರಮುಖ ಪರೀಕ್ಷೆಗಳು ಗುರುವಾರ ಆರಂಭಗೊಂಡಿವೆ. ಚಾಲಕ ರಹಿತ ಎಂಜಿನ್‌ ಹೊಂದಿರುವ ರೈಲು ಸಂಚರಿಸಿತು.

ಬೊಮ್ಮಸಂದ್ರ–ಆರ್‌.ವಿ. ರಸ್ತೆ ನಡುವಿನ 18.82 ಕಿ.ಮೀ. ಹಳಿಯಲ್ಲಿ ಚಾಲಕ ರಹಿತ ಎಂಜಿನ್‌ ಕೋಚ್‌ನಲ್ಲಿ ತಂತ್ರಜ್ಞರು ಗುರುವಾರ ಸಂಚರಿಸಿ ಟ್ರ್ಯಾಕ್ಷನ್‌ ಮತ್ತು ಬ್ರೇಕಿಂಗ್‌ ಟೆಸ್ಟ್‌ ಮಾಡಿದರು. ಇನ್ನು ಮೂರ್ನಾಲ್ಕು ತಿಂಗಳು ವಿವಿಧ ಪರೀಕ್ಷೆಗಳು ನಡೆಯಲಿವೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಬೊಮ್ಮಸಂದ್ರ, ಹೆಬ್ಬಗೋಡಿ, ಹುಸ್ಕೂರ್‌ ರಸ್ತೆ, ಇನ್ಫೊಸಿಸ್‌ ಫೌಂಡೇಶನ್‌ (ಕೋಣಪ್ಪನ ಅಗ್ರಹಾರ), ಎಲೆಕ್ಟ್ರಾನಿಕ್‌ ಸಿಟಿ, ಬಿರಿಟೆನ ಅಗ್ರಹಾರ, ಹೊಸರಸ್ತೆ, ಸಿಂಗಸಂದ್ರ, ಕೂಡ್ಲು ಗೇಟ್‌, ಹೊಂಗಸಂದ್ರ, ಬೊಮ್ಮನಹಳ್ಳಿ, ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌, ಬಿಟಿಎಂ ಲೇಔಟ್‌, ಜಯದೇವ ಆಸ್ಪತ್ರೆ, ರಾಗಿಗುಡ್ಡ, ಆರ್‌ವಿ. ರಸ್ತೆ ನಿಲ್ದಾಣಗಳವರೆಗೆ ಪ್ರೊಟೊ ಟೈಪ್‌ (ಮೂಲ ಮಾದರಿ) ಕೋಚ್‌ ರೈಲು ಸಂಚರಿಸಿ ವಿವಿಧ ಪರೀಕ್ಷೆಗಳನ್ನು ನಡೆಸಿತು.

ಈ ಪರೀಕ್ಷೆಗಳು ಯಶಸ್ವಿಯಾದ ಬಳಿಕ ಸಿಗ್ನಲಿಂಗ್‌, ದೂರಸಂಪರ್ಕ, ವಿದ್ಯುತ್‌ ಸರಬರಾಜು ವ್ಯವಸ್ಥೆಗಳೊಂದಿಗೆ ಸಿಸ್ಟಂ ಸಂಯೋಜನೆ ನಡೆಯಲಿದೆ. ಈ ಎಲ್ಲ ಪರೀಕ್ಷೆಗಳು ಪೂರ್ಣಗೊಂಡ ಬಳಿಕ ಗುಣಮಟ್ಟ ತಪಾಸಣಾ ಸಂಸ್ಥೆಗಳು ಸುರಕ್ಷತಾ ಪರೀಕ್ಷೆ ನಡೆಸಿ ವರದಿ ನೀಡಲಿವೆ. ಈ ವರದಿ ಸಕಾರಾತ್ಮಕವಾಗಿದ್ದರೆ ರೈಲ್ವೆ ಮಂಡಳಿಯು ಮೆಟ್ರೊ ರೈಲು ಆರಂಭಿಸಲು ಅನುಮತಿ ನೀಡಲಿದೆ ಎಂದು ಬಿಎಂಆರ್‌ಸಿಎಲ್ ರೋಲಿಂಗ್‌ ಸ್ಟಾಕ್‌ ತಜ್ಞರು ವಿವರ ನೀಡಿದ್ದಾರೆ.

ಆರ್‌.ವಿ.ರಸ್ತೆಯಿಂದ ಬೊಮ್ಮಸಂದ್ರ ಮಾರ್ಗದ (ಹಳದಿ ಮಾರ್ಗ) ಕಾಮಗಾರಿ 2017ರಲ್ಲಿ ಆರಂಭಗೊಂಡಿತ್ತು. ಮೆಟ್ರೊ ಹಸಿರು, ಗುಲಾಬಿ ಮತ್ತು ನೀಲಿ ಮಾರ್ಗಗಳೊಂದಿಗೆ ಸಂಪರ್ಕಿಸುವ ಈ ಮಾರ್ಗದಲ್ಲಿ ಡಬಲ್‌ ಡೆಕ್ಕರ್‌ ಸೇತುವೆ ಕೂಡ ಇದೆ. ರಾಗಿಗುಡ್ಡದಿಂದ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ವರೆಗೆ 3.3 ಕಿ.ಮೀ. ಉದ್ದ ಒಂದೇ ಪಿಲ್ಲರ್‌ಗೆ ರೋಡ್ ಕಂ ರೇಲ್‌ (ಡಬಲ್ ಡೆಕ್ಕರ್) ಸೇತುವೆ ನಿರ್ಮಿಸಲಾಗಿದೆ. ಅದರ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಮೆಟ್ರೊ ರೈಲು ಈ ವರ್ಷದ ಕೊನೆಗೆ ಆರಂಭಗೊಳ್ಳಲಿದ್ದು, ಅದೇ ಸಮಯದಲ್ಲಿ ವಾಹನ ಸಂಚಾರಕ್ಕೆ ಡಬಲ್ ಡೆಕ್ಕರ್‌ ಸೇತುವೆ ಮುಕ್ತಗೊಳ್ಳಲಿದೆ ಎಂದು ಮಾಹಿತಿ ನೀಡಿದ್ದಾರೆ.

ಯುಪಿಎಸ್‌ಸಿ ಪರೀಕ್ಷೆ: 16ಕ್ಕೆ ಮೆಟ್ರೊ ಬೇಗ ಆರಂಭ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆ (ಯಪಿಎಸ್‌ಸಿ ಪ್ರಿಲಿಮಿನರಿ) ಜೂನ್‌ 16ರಂದು ನಡೆಯಲಿರುವುದರಿಂದ ಅಂದು ‘ನಮ್ಮ ಮೆಟ್ರೊ’ ಕಾರ್ಯಾಚರಣೆ ಒಂದು ಗಂಟೆ ಮೊದಲೇ ಆರಂಭಗೊಳ್ಳಲಿದೆ. ಪ್ರತಿ ಭಾನುವಾರ ಮೆಟ್ರೊ ಸಂಚಾರ ಬೆಳಿಗ್ಗೆ 7ಕ್ಕೆ ಆರಂಭಗೊಳ್ಳುತ್ತಿದ್ದು ಈ ಭಾನುವಾರ ಯುಪಿಎಸ್‌ಸಿ ಪರೀಕ್ಷೆ ಇರುವುದರಿಂದ ಬೆಳಿಗ್ಗೆ 6ಕ್ಕೆ ನಾಲ್ಕು ಟರ್ಮಿನಲ್‌ಗಳಾದ ವೈಟ್‌ಫೀಲ್ಡ್ (ಕಾಡುಗೋಡಿ) ಚಲ್ಲಘಟ್ಟ ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ನಿಲ್ದಾಣಗಳಿಂದ ಮೆಟ್ರೊ ಆರಂಭಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್‌ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT