ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಜೀತಿ ಸಾಕು, ಪರ್ಯಾಯ ವ್ಯವಸ್ಥೆ ಬೇಕು

ಅನಗತ್ಯವಾಗಿ ಎಂ.ಜಿ.ರಸ್ತೆಯಲ್ಲಿ ವಾಹನ ನಿರ್ಬಂಧ: ಸಂಚಾರ ಪೊಲೀಸರ ಏಕಪಕ್ಷೀಯ ನಿರ್ಧಾರಕ್ಕೆ ವಿರೋಧ
Last Updated 20 ಜೂನ್ 2019, 20:31 IST
ಅಕ್ಷರ ಗಾತ್ರ

ಬೆಂಗಳೂರು: ಕಾಮರಾಜ ರಸ್ತೆಯಲ್ಲಿ ನಡೆಯುತ್ತಿರುವ ನಮ್ಮ ಮೆಟ್ರೊ ಕಾಮಗಾರಿ ನೆಪ ಇಟ್ಟುಕೊಂಡು ಎಂ.ಜಿ. ರಸ್ತೆಯಲ್ಲಿ ವಾಹನಗಳ ನಿಲುಗಡೆಗೆ ನಿರ್ಬಂಧ ಹೇರಿರುವ ಸಂಚಾರ ಪೊಲೀಸರ ಏಕಪಕ್ಷೀಯ ನಿರ್ಧಾರಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ನಮ್ಮ ಮೆಟ್ರೊ‘ ಸುರಂಗ ಮಾರ್ಗದ ಕಾಮಗಾರಿಗಾಗಿ ಕಾಮರಾಜ ರಸ್ತೆಯಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಅಲ್ಲಿ ಸಂಚರಿಸಬೇಕಿದ್ದ ವಾಹನಗಳು, ಕಬ್ಬನ್ ರಸ್ತೆಯಲ್ಲಿ ಸಾಗುತ್ತಿದ್ದು ಅಲ್ಲೆಲ್ಲ ದಟ್ಟಣೆ ವಿಪರೀತವಾಗಿದೆ.

ಆದರೆ, ಎಂ.ಜಿ.ರಸ್ತೆಯಲ್ಲಿ ವಾಹನಗಳ ಓಡಾಟ ತೀರಾ ಕಡಿಮೆ ಇದೆ. ಅಷ್ಟಾದರೂ ಎಂ.ಜಿ. ರಸ್ತೆಯಲ್ಲಿ ವಾಹನಗಳ ನಿಲುಗಡೆಯನ್ನು ನಿರ್ಬಂಧಿಸಿರುವುದು ಸ್ಥಳೀಯರಿಗೆ ತೊಂದರೆಯನ್ನುಂಟು ಮಾಡಿದೆ. ಕೇಂದ್ರ ವಾಣಿಜ್ಯ ಪ್ರದೇಶದಲ್ಲಿಯ (ಸಿಬಿಡಿ) ವಹಿವಾಟಿಗೆ ಧಕ್ಕೆ ತರುವ ಉದ್ದೇಶದಿಂದಲೇ ಪೊಲೀಸರು ಇಂಥ ಕ್ರಮ ಕೈಗೊಂಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

‘ವೆಲ್ಲಾರ ಜಂಕ್ಷನ್‌ನಿಂದ ಶಿವಾಜಿನಗರ ನಡುವೆ ಸುರಂಗ ಮಾರ್ಗ ಹಾಗೂ ನಿಲ್ದಾಣಗಳ ಕಾಮಗಾರಿ ನಡೆಸಲಾಗುತ್ತಿದೆ. ಅದಕ್ಕಾಗಿ ಕಾಮರಾಜ ರಸ್ತೆ ಬಂದ್ ಮಾಡಿದ್ದಕ್ಕೆ ನಮ್ಮ ವಿರೋಧ ಇಲ್ಲ. ಆದರೆ, ಎಂ.ಜಿ.ರಸ್ತೆಯಲ್ಲಿ ಏಕಾಏಕಿ ವಾಹನಗಳ ನಿಲುಗಡೆ ನಿರ್ಬಂಧಿಸಿರುವುದನ್ನು ಖಂಡಿಸುತ್ತೇವೆ’ ಎಂದು ‘ಇಂಡಿಯಾನಾ ಕ್ರಾಕರಿ’ ಮಾಲೀಕ ಎಂ.ಮಸೂದ್ ಸೇಠ್ ಅವರು ಆಕ್ರೋಶ ವ್ಯಕ್ತಪಡಿಸಿದರು.

‘ವಾಹನ ನಿಲ್ಲಿಸಲು ಜಾಗವಿಲ್ಲದಿದ್ದರಿಂದ ಗ್ರಾಹಕರ‍್ಯಾರೂ ಅಂಗಡಿಗೆ ಬರುತ್ತಿಲ್ಲ. ಶೇ 60ರಷ್ಟು ವ್ಯಾಪಾರ ಕಡಿಮೆ ಆಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ನಾವೆಲ್ಲ ಅಂಗಡಿಗೆ ಬೀಗ ಹಾಕಿಕೊಂಡು ಹೋಗಬೇಕಾಗುತ್ತದೆ’ ಎಂದು ಅಳಲು ತೋಡಿಕೊಂಡರು.

ಮಾಡಿಟ್ಟ ಆಹಾರ ಹಾಗೇ ಇದೆ: ‘ವಾಹನಗಳ ನಿಲುಗಡೆ ಇದ್ದಿದ್ದರಿಂದ ಹಲವರು ಅಂಗಡಿಗೆ ಬಂದು ಆಹಾರ ಸೇವಿಸಿ ಹೋಗುತ್ತಿದ್ದರು. ಆದರೀಗ ನಿಲುಗಡೆ ಬಂದ್ ಮಾಡಿದ್ದರಿಂದ ಜನರೇ ಬರುತ್ತಿಲ್ಲ. ಮಾಡಿಟ್ಟ ಆಹಾರ ಹಾಗೇ ಇದೆ’ ಎಂದು ಆಹಾರ ಮಳಿಗೆಯ ವ್ಯಾಪಾರಿಯೊಬ್ಬರು ಹೇಳಿದರು.

‘ಹೊರ ರಾಜ್ಯದಿಂದ ಬಂದು ಇಲ್ಲಿ ಅಂಗಡಿ ಇಟ್ಟುಕೊಂಡಿದ್ದೇವೆ. ಈ ಹಿಂದೆ ನಿತ್ಯವೂ ₹2,000ದಿಂದ ₹3,000 ವ್ಯಾಪಾರ ಆಗುತ್ತಿತ್ತು. ಈಗ ₹500 ಆಗುವುದೂ ಕಷ್ಟ. ಸಂಚಾರ ಪೊಲೀಸರು, ದಯವಿಟ್ಟು ತಮ್ಮ ನಿರ್ಧಾರವನ್ನು ಹಿಂಪಡೆದು ವಾಹನಗಳ ನಿಲುಗಡೆಗೆ ಅವಕಾಶ ಮಾಡಿಕೊಡಬೇಕು’ ಎಂದು ಅವರು ಕೋರಿದರು.

ಪರ್ಯಾಯ ಕ್ರಮಕ್ಕೆ ಒತ್ತಾಯ: ‘ವಾಹನ ನಿಲುಗಡೆ ಬಂದ್ ಮಾಡುವುದಕ್ಕೂ ಮುನ್ನ ಪರ್ಯಾಯ ವ್ಯವಸ್ಥೆ ಬಗ್ಗೆ ಸಂಚಾರ ಪೊಲೀಸರು ಯೋಚನೆ ಮಾಡಬೇಕಿತ್ತು. ಆದರೆ, ತಮ್ಮಿಷ್ಟ ಬಂದಂತೆ ನಿಲುಗಡೆ ಬಂದ್ ಮಾಡಿರುವುದು ಯಾವ ನ್ಯಾಯ’ ಎಂದು ವ್ಯಾಪಾರಿ ಮ್ಯಾಥ್ಯೂ ಪ್ರಶ್ನಿಸಿದರು.

‘ಎಂ.ಜಿ.ರಸ್ತೆಯಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದು ಒಳ್ಳೆಯದು. ಅಷ್ಟಾದರೂ ಕೆಲವರು ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವವರು ಯಾರು? ಕೇವಲ ನಿಲುಗಡೆ ಬಂದ್ ಮಾಡಿದದೆ ಸಾಲದು, ವಾಹನಗಳನ್ನು ನಿಲ್ಲಿಸಲು ಬೇರೆಡೆ ವ್ಯವಸ್ಥೆ ಮಾಡಬೇಕು. ಮಾಣಿಕ್ ಷಾ ಮೈದಾನ ಖಾಲಿ ಇದೆ. ಅಲ್ಲಿ ತಾತ್ಕಾಲಿಕವಾಗಿ ವಾಹನಗಳನ್ನು ನಿಲ್ಲಿಸಲು ಸೇನಾ ಅಧಿಕಾರಿಗಳ ಜೊತೆ ಹಿರಿಯ ಪೊಲೀಸ್ ಅಧಿಕಾರಿಗಳು ಚರ್ಚಿಸಬೇಕು’ ಎಂದು ಅವರು ಹೇಳಿದರು.

‘ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಎಂ.ಜಿ.ರಸ್ತೆ ಎಂದರೆ ಎಲ್ಲರಿಗೂ ಗೊತ್ತು. ಇಂಥ ರಸ್ತೆಯಲ್ಲಿ ಸಾರ್ವಜನಿಕರ ವಾಹನಗಳಿಗೆ ಶಾಶ್ವತ ನಿಲುಗಡೆ ಜಾಗವನ್ನು ನೀಡಲು ಸ್ಥಳೀಯ ಆಡಳಿತ ಸಂಸ್ಥೆಗಳಿಂದ ಸಾಧ್ಯವಾಗಿಲ್ಲ. ಇನ್ನಾದರೂ ಪ್ರತ್ಯೇಕ ಕಟ್ಟಡವೊಂದನ್ನು ನಿರ್ಮಿಸಿ ವಾಹನ ನಿಲುಗಡೆಗೆ ಅವಕಾಶ ನೀಡಬೇಕಾದ ಅಗತ್ಯವಿದೆ’ ಎಂದು ಅಭಿ‍ಪ್ರಾಯಪಟ್ಟರು.

ಮೈದಾನದಲ್ಲಿ ಪರ್ಯಾಯ ರಸ್ತೆ ನಿರ್ಮಿಸಿ
ಕಾಮರಾಜ ರಸ್ತೆಯಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಿರುವುದರಿಂದ ಕಬ್ಬನ್ ರಸ್ತೆಯಲ್ಲಿ ವಿಪರೀತ ದಟ್ಟಣೆ ಉಂಟಾಗುತ್ತಿದೆ. ಈ ರಸ್ತೆಯಲ್ಲಿ ಓಡಾಡುವ ಜನ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

‘ಮೆಟ್ರೊ ಕಾಮಗಾರಿ ನಡೆಯುತ್ತಿದೆ. ಕಾಮರಾಜ ರಸ್ತೆಯಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ’ ಎಂದು ಸಂಚಾರ ಪೊಲೀಸರು ರಸ್ತೆಯ ಎರಡೂ ಕಡೆಗಳಲ್ಲಿ ಫಲಕಗಳನ್ನು ಹಾಕಿದರೆ ಸಾಲದು. ಆ ರಸ್ತೆಗೆ ಪರ್ಯಾಯವಾಗಿ ಮತ್ತೊಂದು ರಸ್ತೆ ನಿರ್ಮಿಸುವ ಬಗ್ಗೆಯೂ ಕ್ರಮ ಕೈಗೊಳ್ಳಬೇಕು’ ಎಂದು ವ್ಯಾಪಾರಿ ಮ್ಯಾಥ್ಯೂ ಆಗ್ರಹಿಸಿದರು.

‘ಮೆಟ್ರೊ ಕಾಮಗಾರಿ ಮುಗಿಯಲು ನಾಲ್ಕು ವರ್ಷ ಬೇಕಾಗುತ್ತದೆ. ಅಷ್ಟು ದಿನ ಜನರು ದಟ್ಟಣೆ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಕಾಮರಾಜ ರಸ್ತೆಯ ಅಕ್ಕ–ಪಕ್ಕದಲ್ಲಿ ಸೇನೆಯ ಜಾಗವಿದೆ. ಆ ಜಾಗದಲ್ಲೇ ತಾತ್ಕಾಲಿಕವಾಗಿ ರಸ್ತೆಯೊಂದನ್ನು ನಿರ್ಮಿಸಿ ವಾಹನಗಳ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕು’ ಎಂದು ಅವರು ಒತ್ತಾಯಿಸಿದರು.

‘ಮಾಣಿಕ್‌ ಷಾ ಮೈದಾನದ ಗೋಡೆಗಳನ್ನು ಒಡೆದು, ಅಲ್ಲೇ ಒಂದು ರಸ್ತೆ ನಿರ್ಮಿಸಿ ಎಂ.ಜಿ.ರಸ್ತೆಗೆ ಸಂಪರ್ಕ ಕಲ್ಪಿಸಬಹುದು. ಮೆಟ್ರೊ ಕಾಮಗಾರಿ ಮುಗಿದ ಬಳಿಕ ಮೈದಾನದ ಗೋಡೆಯನ್ನು ಪುನಃ ನಿರ್ಮಿಸಿ ಮೊದಲಿದ್ದ ಸ್ಥಿತಿಗೆ ತರಬಹುದು. ಈ ಬಗ್ಗೆ ಸೇನೆ, ಬಿಎಂಆರ್‌ಸಿಎಲ್ ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಚಿಂತನೆ ನಡೆಸಲಿ’ ಎಂದು ಹೇಳಿದರು.

**
ತಂದೆಯ ಕಾಲದಿಂದಲೂ ಇಲ್ಲಿ ವ್ಯಾಪಾರ ಮಾಡುತ್ತಿದ್ದೇವೆ. ಮೊದಲ ಬಾರಿಗೆ ವ್ಯಾಪಾರಿಗಳ ಅಭಿಪ್ರಾಯ ಪಡೆಯದೇ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ.
-ಎಂ.ಮಸೂದ್ ಸೇಠ್,‘ಇಂಡಿಯಾನಾ ಕ್ರಾಕರಿ’ ಮಾಲೀಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT