ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉಕ್ಕು ಉದ್ಯಮದ ಭವಿಷ್ಯವೇನು?’

‘2020ರ ನಂತರ ಖನಿಜಗಳ ಗಣಿಗಾರಿಕೆ’ ಕುರಿತು ವಿಚಾರ ಸಂಕಿರಣ
Last Updated 20 ಜುಲೈ 2019, 19:18 IST
ಅಕ್ಷರ ಗಾತ್ರ

ಬೆಂಗಳೂರು:ರಾಜ್ಯದಲ್ಲಿಕಬ್ಬಿಣದ ಅದಿರು ಗಣಿಗಾರಿಕೆ ಮತ್ತು ಉಕ್ಕು ಉದ್ಯಮ 2020ರ ಮಾರ್ಚ್‌ ವೇಳೆಗೆ ಹೊಸ ಸಂಕಷ್ಟಕ್ಕೆ ಸಾಕ್ಷಿಯಾಗಬೇಕಿದೆ. ಕರ್ನಾಟಕ, ಒಡಿಶಾ, ಜಾರ್ಖಂಡ್‌, ಛತ್ತೀಸಗಡ ಮತ್ತಿತರ ರಾಜ್ಯಗಳಲ್ಲಿ ಸುಮಾರು 4 ಕೋಟಿ ಟನ್‌ಗಳಷ್ಟು ಕಬ್ಬಿಣದ ಅದಿರು ಉತ್ಪಾದಿಸುವ ಗಣಿಗಳು ಮುಚ್ಚಲಿವೆ. ಹೀಗಾದರೆ, ಉಕ್ಕು ಉದ್ಯಮದ ಭವಿಷ್ಯವೇನು?

ಭಾರತೀಯ ಗಣಿಗಾರಿಕೆ ಎಂಜಿನಿಯರಿಂಗ್‌ ಸಂಸ್ಥೆಯು ‘2020ರ ನಂತರ ಖನಿಜಗಳ ಗಣಿಗಾರಿಕೆ’ ಕುರಿತು ನಗರದಲ್ಲಿ ಶನಿವಾರ ಆಯೋಜಿಸಿದ್ದ ವಿಚಾರಸಂಕಿರಣದಲ್ಲಿ ಗಣಿ ಉದ್ಯಮಿಗಳು ಎತ್ತಿದ ಪ್ರಶ್ನೆ ಇದು.

ಗಣಿ ಉದ್ಯಮ ಹಿನ್ನಡೆಯ ಜೊತೆಗೆ, ದೊಡ್ಡ ಪ್ರಮಾಣದ ನಿರುದ್ಯೋಗವೂ ಸೃಷ್ಟಿಯಾಗಲಿದೆ. ಪ್ರತಿ ಟನ್‌ ಅದಿರು ಉತ್ಪಾದನೆ ಕ್ರಿಯೆಯಲ್ಲಿ 1,000ದಿಂದ 1,200 ಉದ್ಯೋಗಿಗಳು ಕೆಲಸ ಮಾಡುತ್ತಾರೆ. ರಾಜ್ಯದಲ್ಲಿಯೇ 2020ರ ಮಾರ್ಚ್‌ 31ರ ವೇಳೆಗೆ 14 ಗಣಿಗಳು ಗುತ್ತಿಗೆ ಅವಧಿ ಮುಕ್ತಾಯವಾಗಲಿದ್ದು, ಇವು ಸ್ಥಗಿತಗೊಳ್ಳಲಿವೆ ಎಂದು ಗಣಿ ಉದ್ಯಮಿಗಳು, ತಜ್ಞರು ಆತಂಕ ವ್ಯಕ್ತಪಡಿಸಿದರು.

‘ಸಿ ಕೆಟಗರಿ ಗಣಿಗಳ ಗುತ್ತಿಗೆಯನ್ನು ಮೂರು ಹಂತಗಳಲ್ಲಿ ನೀಡಲಾಗುತ್ತಿದೆ. 22 ಗಣಿಗಳ ಗುತ್ತಿಗೆ ನೀಡುವ ನಿಟ್ಟಿನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಪೈಕಿ, ಈಗಾಗಲೇ 14 ಗಣಿಗಳ ಹರಾಜು ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ. ಇವುಗಳ ಗುತ್ತಿಗೆಯನ್ನು ನೀಡಲಾಗಿದೆ. ಈ ಪೈಕಿ, ನಾಲ್ಕು ಗಣಿಗಳಲ್ಲಿ ಗಣಿಗಾರಿಕೆ ಆರಂಭವಾಗಿದೆ’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕ ಎನ್.ಎಸ್. ಪ್ರಸನ್ನಕುಮಾರ್‌ ಹೇಳಿದರು.

‘ಪ್ರಮುಖ ಖನಿಜಗಳಾದ ಚಿನ್ನ, ಮ್ಯಾಂಗನೀಸ್‌, ಸುಣ್ಣದ ಕಲ್ಲು ಹಾಗೂ ಬಾಕ್ಸೈಟ್‌ ಖನಿಜಗಳ ಗುರುತಿಸುವಿಕೆ ಮತ್ತು ಪರಿಶೀಲನೆಯ ಕಾರ್ಯವನ್ನು ಇಲಾಖೆ ಕೈಗೆತ್ತಿಕೊಳ್ಳಲಿದೆ’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಸದ್ಯ 1.4 ಕೋಟಿ ಟನ್‌ನಷ್ಟು ಅದಿರು ಗಣಿಗಾರಿಕೆ ನಡೆಯುತ್ತಿದೆ. ಸುಪ್ರೀಂ ಕೋರ್ಟ್‌ ನಿಗದಿಪಡಿಸಿರುವ ಮಿತಿ 3.5 ಕೋಟಿ ಟನ್‌ನಷ್ಟಿದೆ’ ಎಂದರು.

‘ಗಣಿ ಮತ್ತು ಖನಿಜ ಅಭಿವೃದ್ಧಿ ಮತ್ತು ನಿಯಂತ್ರಣ (ಎಂಎಂಡಿಆರ್‌) ಕಾಯ್ದೆಗೆ 2015ರ ತಿದ್ದುಪಡಿ ನಂತರ ಪ್ರಮುಖ ಮತ್ತು ಸಣ್ಣ ಗಣಿಗಳ ಮೇಲೆ ದುಷ್ಪರಿಣಾಮಗಳು ಉಂಟಾಗಬಹುದು ಎಂದು ಉದ್ಯಮಿಗಳು ಆತಂಕ ವ್ಯಕ್ತಪಡಿಸಿದ್ದರು. ಆದರೆ, ಹಾಗಾಗಲಿಲ್ಲ. ಪರಿಸರ ಮತ್ತು ಖನಿಜ ಸಂರಕ್ಷಣೆಯ ಜೊತೆಗೆ ಉದ್ಯಮದ ಹಿತವನ್ನೂ ಕಾಪಾಡುವ ನಿಟ್ಟಿನಲ್ಲಿ ಕಾಯ್ದೆ ರೂಪಿಸಲಾಗಿದೆ’ ಎಂದರು.

ಭಾರತೀಯ ಭೂವಿಜ್ಞಾನ ಸೊಸೈಟಿಯ ಕಾರ್ಯದರ್ಶಿ ಆರ್.ಎಚ್. ಸಾವ್ಕಾರ್, ‘ಗಣಿಗಾರಿಕೆ ಕ್ಷೇತ್ರ ದೇಶದ ಜಿಡಿಪಿಗೆ ಶೇ 2ರಿಂದ 2.5ರಷ್ಟು ಕೊಡುಗೆಯನ್ನು ನೀಡುತ್ತಿದೆ. ಈ ಪ್ರಮಾಣ ಶೇ 3ರಿಂದ ಶೇ 4ಕ್ಕೆ ಏರಿಕೆಯಾಗಬೇಕು’

‘ಎಲ್ಲ ಕಾನೂನು ಪ್ರಕ್ರಿಯೆ ಮುಗಿದ ನಂತರವೇ ಉದ್ಯಮಿಗಳಿಗೆ ಗಣಿಗಾರಿಕೆ ಪರವಾನಗಿ ನೀಡಬೇಕು. ಗುತ್ತಿಗೆ ನೀಡಿದ ನಂತರ ಅರಣ್ಯ ಇಲಾಖೆ ಪರವಾನಗಿ ತೆಗೆದುಕೊಳ್ಳುವುದು, ಸ್ಥಳೀಯರ ಆಕ್ಷೇಪ ಮುಂತಾದ ಸಮಸ್ಯೆಗಳು ಎದುರಾಗುತ್ತವೆ. ಇವುಗಳನ್ನು ಪರಿಹರಿಸಿ ಗುತ್ತಿಗೆ ನೀಡಬೇಕು’ ಎಂದು ಅವರು ಸಲಹೆ ನೀಡಿದರು.

ರಾಜ್ಯ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ (ಗಣಿಗಾರಿಕೆ) ಕಾರ್ಯದರ್ಶಿ ಎಂ. ಮಹೇಶ್ವರ ರಾವ್‌, ‘2020ರ ಗಣಿ
ಗುತ್ತಿಗೆ ಮುಗಿಯಲಿದ್ದು, ಕಬ್ಬಿಣದ ಅದಿರು ಪೂರೈಕೆ ಕಡಿಮೆಯಾಗುತ್ತದೆ ಹಾಗೂ ಬೇಡಿಕೆ ಜಾಸ್ತಿಯಾಗುತ್ತದೆ. ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ ಎಂಬ ಆತಂಕ ಉದ್ಯಮಿಗಳನ್ನು ಕಾಡುತ್ತಿದೆ. ಇದರ ಅರಿವು ಕೇಂದ್ರ ಸರ್ಕಾರಕ್ಕೆ ಇದೆ. ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಖನಿಜ ನಿಕ್ಷೇಪಗಳ ಶೋಧ, ಗಣಿಗಳ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT