ಗುರುವಾರ , ಆಗಸ್ಟ್ 11, 2022
24 °C
ಟೆಕ್‌ ಭಾರತ್ 2021ರಲ್ಲಿ ಆರೋಗ್ಯ ಕ್ಷೇತ್ರದ ಕುರಿತು ಸಚಿವ ಅಭಿಮತ

ತಂತ್ರಜ್ಞಾನದ ಅಳವಡಿಕೆಯೇ ಸವಾಲು: ಡಾ.ಕೆ. ಸುಧಾಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಆರೋಗ್ಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು, ಸೇವೆ ನೀಡಬೇಕಾದ ಸವಾಲು ನಮ್ಮ ಮುಂದಿದೆ’ ಎಂದು ಆರೋಗ್ಯ ಮತ್ತು ವೈದ್ಯಕಿಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು. 

ಲಘು ಉದ್ಯೋಗ ಭಾರತಿ ಮತ್ತು ಐಎಂಎಸ್ ಪ್ರತಿಷ್ಠಾನವು ಜಂಟಿಯಾಗಿ ಶುಕ್ರವಾರ ಆಯೋಜಿಸಿದ ‘ಟೆಕ್‌ ಭಾರತ್ 2021’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಕೋವಿಡ್ ಕಾಣಿಸಿಕೊಂಡ ಬಳಿಕ ಆರೋಗ್ಯ ಕ್ಷೇತ್ರಕ್ಕೆ ಮತ್ತಷ್ಟು ಆದ್ಯತೆ ದೊರೆತಿದೆ. ಆಸ್ಪತ್ರೆಗಳಿಗೆ ಮೂಲ
ಸೌಕರ್ಯ ಕಲ್ಪಿಸುವಿಕೆ, ವೈದ್ಯಕೀಯ ಪ್ರವಾಸೋದ್ಯಮ, ಟೆಲಿ ಮೆಡಿಸಿನ್, ವೈದ್ಯಕೀಯ ಪ್ರಯೋಗಗಳು ಮುನ್ನೆಲೆಗೆ ಬಂದಿವೆ. ದೇಶದಲ್ಲಿ ವೈದ್ಯಕೀಯ ಪ್ರವಾಸೋದ್ಯಮವು ವರ್ಷದಿಂದ ವರ್ಷಕ್ಕೆ ಶೇ 18ರಷ್ಟು ಬೆಳವಣಿಗೆ ಕಾಣುತ್ತಿದೆ. ಈ ಕ್ಷೇತ್ರವು ಉದ್ಯೋಗ ಸೃಷ್ಟಿ ಹಾಗೂ ಹೂಡಿಕೆಗೆ ಕೂಡ ಸಹಕಾರಿಯಾಗಿದೆ. ನೂತನ ಕೈಗಾರಿಕಾ ನೀತಿಯಡಿ ರಾಜ್ಯದಲ್ಲಿ ₹ 5 ಲಕ್ಷ ಕೋಟಿ ಹೂಡಿಕೆಯ ಗುರಿ ಹೊಂದಲಾಗಿದ್ದು, ಉದ್ಯೋಗ ಸೃಷ್ಟಿಗೂ ಒತ್ತು ನೀಡಲಾಗಿದೆ’ ಎಂದರು.

‘ದ್ವಿತೀಯ ಹಾಗೂ ತೃತೀಯ ಹಂತದ ಆರೋಗ್ಯ ಸೌಲಭ್ಯ ಒದಗಿಸುವ ಸರ್ಕಾರಿ ವೈದ್ಯಕೀಯ ಸಂಸ್ಥೆಗಳ ಸಂಖ್ಯೆ ಕಡಿಮೆಯಿದೆ. ಆದರೆ, ಪ್ರಾಥಮಿಕ ಆರೋಗ್ಯ ಸೇವೆಗಳು ಎಲ್ಲೆಡೆ, ಎಲ್ಲರಿಗೂ ದೊರೆಯುತ್ತಿವೆ. ಖಾಸಗಿ ವೈದ್ಯಕೀಯ ಸಂಸ್ಥೆಗಳು ದ್ವಿತೀಯ ಹಾಗೂ ತೃತೀಯ ಹಂತದ ಚಿಕಿತ್ಸೆಗಳಿಗೆ ಆದ್ಯತೆ ನೀಡಿವೆ. ರೋಬೋಟಿಕ್, 3ಡಿ ಪ್ರಿಂಟಿಂಗ್, ಜೆನೆಟೆಕ್ ಎಂಜಿನಿಯರಿಂಗ್, ಇಂಟರ್‌ನೆಟ್ ಆಫ್ ಥಿಂಗ್ಸ್‌ ಸೇರಿದಂತೆ ವಿವಿಧ ತಂತ್ರಜ್ಞಾನಗಳನ್ನು ಸಮರ್ಪಕವಾಗಿ ಅಳವಡಿಸಿಕೊಂಡು, ಸ್ಪರ್ಧೆಗೆ ಒಗ್ಗಿಕೊಳ್ಳಬೇಕು’ ಎಂದು ವಿವರಿಸಿದರು.

ವ್ಯವಸ್ಥೆಯಲ್ಲಿ ಬದಲಾವಣೆ: ಆಕ್ಸಿಲರ್ ವೆಂಚರ್ಸ್‌ನ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್, ‘ತಂತ್ರಜ್ಞಾನಗಳ ಅಳವಡಿಕೆಯಲ್ಲಿ 5 ವರ್ಷಗಳಲ್ಲಿ ಆಗಬೇಕಾದ ಬದಲಾವಣೆಗಳು ಕೋವಿಡ್‌ನಿಂದಾಗಿ ಕೇವಲ 5 ತಿಂಗಳಲ್ಲಿ ಆಗಿವೆ. ಮನೆಯಲ್ಲಿಯೇ ಕಚೇರಿ ಕೆಲಸ, ಆನ್‌ಲೈನ್ ಮೂಲಕ ವೈದ್ಯರ ಸಂಪರ್ಕ, ಡಿಜಿಟಲ್ ಮಾದರಿಯಲ್ಲಿ ಹಣ ಪಾವತಿ ಸೇರಿದಂತೆ ಹಲವು ಬದಲಾವಣೆಗಳನ್ನು ಕಾಣಬಹುದಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಡಿಜಿಟಲ್ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು ಒಟ್ಟಾಗಿ ಕಾರ್ಯನಿರ್ವಹಿಸಿದಲ್ಲಿ ಗುಣಮಟ್ಟದ ಸೇವೆ ನೀಡಲು ಸಾಧ್ಯ ಎನ್ನುವುದನ್ನು ಕೂಡ ಕೋವಿಡ್ ತೋರಿಸಿಕೊಟ್ಟಿದೆ’ ಎಂದರು.

ಲಘು ಉದ್ಯೋಗ ಭಾರತಿ ಅಧ್ಯಕ್ಷ ಪಿ.ಎಸ್. ಶ್ರೀಕಂಠ ದತ್ತ ಮಾತನಾಡಿ, ‘ಅಗ್ಗದ ದರದಲ್ಲಿ ಗುಣಮಟ್ಟದ ಚಿಕಿತ್ಸೆಗಳನ್ನು ಒದಗಿಸುವುದು ಸವಾಲಾಗಿಯೇ ಉಳಿದಿದೆ. ಮಾಹಿತಿ ಮತ್ತು ತಂತ್ರಜ್ಞಾನದ ನೆರವು ಪಡೆದು ಈ ಕ್ಷೇತ್ರದಲ್ಲಿ ಸುಧಾರಣೆ ತರಬೇಕಿದೆ. ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ನೀತಿಗಳಲ್ಲಿ ಕೂಡ ಬದಲಾವಣೆ ಅಗತ್ಯ. ಆರೋಗ್ಯ ಸಿಬ್ಬಂದಿಗೆ ಕೌಶಲ ವೃದ್ಧಿಸಲು ತರಬೇತಿ ಕಾರ್ಯಕ್ರಮಗಳನ್ನು ನಡೆಸಬೇಕು’ ಎಂದು ತಿಳಿಸಿದರು.

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು