ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಂಟೊ ಕಣ್ಣಿನ ಆಸ್ಪತ್ರೆ: ಔಷಧ ಪರಿಣಾಮ ಇಬ್ಬರಿಗೆ ಶಾಶ್ವತ ಅಂಧತ್ವ

Last Updated 19 ಸೆಪ್ಟೆಂಬರ್ 2019, 20:39 IST
ಅಕ್ಷರ ಗಾತ್ರ

ಬೆಂಗಳೂರು:ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ವೇಳೆಔಷಧದ ವ್ಯತಿರಿಕ್ತ ಪರಿಣಾಕ್ಕೆ ಒಳಗಾಗಿದ್ದ24 ಮಂದಿಯಲ್ಲಿ ಇಬ್ಬರು ಸಂಪೂರ್ಣ ದೃಷ್ಟಿ ಕಳೆದುಕೊಂಡಿದ್ದಾರೆ.

ಶಸ್ತ್ರಚಿಕಿತ್ಸೆ ವೇಳೆ ಬಳಿಸಿದ ಔಷಧದಲ್ಲಿ ‘ಸೂಡೋಮೋನಾಸ್‌’ ವೈರಾಣು ಇದ್ದುದೇ ಇದಕ್ಕೆ ಕಾರಣ ಎಂಬುದು ಆಸ್ಪತ್ರೆ ಹಾಗೂ ವಿವಿಧ ಪ್ರಯೋಗಾಲಯಗಳ ವರದಿಯಿಂದ ಸಾಬೀತಾಗಿದೆ. ಪ್ರಕರಣದ ಬಗ್ಗೆ ತನಿಖೆ ನಡೆಸಲು ನೇಮಿಸಲಾಗಿದ್ದ ತಜ್ಞರ ಸಮಿತಿ ಸಹ ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.

‘ಶಸ್ತ್ರ ಚಿಕಿತ್ಸೆಗೆ ಒಳಗಾದವರಲ್ಲಿ ಕೀಸರ್ ಮತ್ತು ಸಯ್ಯದ್ ಉನ್ನೀಸಾ ಬಾನು ಎಂಬುವವರಿಗೆ ಶಾಶ್ವತವಾಗಿ ದೃಷ್ಟಿ ಹೋಗಿದೆ. 12 ಮಂದಿಗೆ ಮಾತ್ರ ಪೂರ್ಣ ಪ್ರಮಾಣದ ದೃಷ್ಟಿ ಬಂದಿದ್ದು, ಉಳಿದ 10 ಮಂದಿಗೆ ಅಸ್ಪಷ್ಟವಾಗಿ ಕಣ್ಣು ಕಾಣಿಸುತ್ತಿದೆ. ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯನ್ನು ಪುನರಾರಂಭಿಸಲಾಗಿದೆ’ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಮಿಂಟೊ ವೈದ್ಯರೊಬ್ಬರು ತಿಳಿಸಿದ್ದಾರೆ.

ಆದರೆ, ಈ ಬಗ್ಗೆ ಶಸ್ತ್ರಚಿಕಿತ್ಸೆಗೆ ಒಳಗಾದವರನ್ನು ಸಂಪರ್ಕಿಸಿದಾಗ, ‘ದೃಷ್ಟಿ ಬಂದಿಲ್ಲ’ ಎಂದು ಬಹುತೇಕರು ಅಳಲು ತೋಡಿಕೊಂಡರು.

‘ದೃಷ್ಟಿ ಬರುತ್ತದೆ ಎಂಬ ಭರವಸೆಯಲ್ಲಿ ಎಲ್ಲ ನೋವುಗಳನ್ನು ಸಹಿಸಿಕೊಂಡು ಹೇಳಿದ ಚಿಕಿತ್ಸೆಯನ್ನೆಲ್ಲ ಮಾಡಿಸಿಕೊಂಡರೂ ಪ್ರಯೋಜನವಾಗಿಲ್ಲ. ಈ ಪ್ರಕರಣದ ಬಗ್ಗೆ ಸರ್ಕಾರವೂ ಗಮನ ಹರಿಸಿಲ್ಲ’ ಎಂದು ಶಸ್ತ್ರಚಿಕಿತ್ಸೆಗೆ ಒಳಪಟ್ಟ ಸುಜಾತಾ ಬೇಸರ ವ್ಯಕ್ತಪಡಿಸಿದರು.‌

‘ನಾವು ಯಾವ ತಪ್ಪನ್ನು ಮಾಡಿದ್ದೇವೆ ಎಂಬ ಕಾರಣಕ್ಕೆ ಈ ಶಿಕ್ಷೆಯನ್ನು ನೀಡಲಾಗಿದೆ? ನಮ್ಮ ನೋವಿಗೆ ಯಾರೂ ಸ್ಪಂದಿಸಿಲ್ಲ. ವಸ್ತುಗಳು ಅಸ್ಪಷ್ಟವಾಗಿ ಕಾಣಿಸುತ್ತಿವೆ’ ಎಂದು ಶಸ್ತ್ರಚಿಕಿತ್ಸೆಗೆ ಒಳಗಾದವರೊಬ್ಬರು ತಿಳಿಸಿದರು.

ಈ ಬಗ್ಗೆ ಆಸ್ಪತ್ರೆಯ ನಿರ್ದೇಶಕಿ ಡಾ. ಸುಜಾತಾ ರಾಥೋಡ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದಾಗ, ಅವರು ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT