ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಂಟೊ: ಆಸ್ಪತ್ರೆ ವಾಸದ ಅವಧಿ ಕಡಿತ

Last Updated 7 ಅಕ್ಟೋಬರ್ 2020, 20:20 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಕಾರಣ ಮಿಂಟೊ ಕಣ್ಣಿನ ಆಸ್ಪತ್ರೆಯು ಡೇ ಕೇರ್ ಮಾದರಿ ಸೇವೆ ನೀಡುತ್ತಿದ್ದು, ಕಣ್ಣಿನ ಸಮಸ್ಯೆ ಎದುರಿಸುತ್ತಿರುವವರಿಗೆ ಶಸ್ತ್ರಚಿಕಿತ್ಸೆ ಬಳಿಕ ಆಸ್ಪತ್ರೆ ವಾಸದ ಅವಧಿಯನ್ನು ಕಡಿತ ಮಾಡಿದೆ.

ಸದ್ಯ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಹೊರತುಪಡಿಸಿ ಉಳಿದ ಶಸ್ತ್ರಚಿಕಿತ್ಸೆಗಳನ್ನು ಅಲ್ಲಿ ನಡೆಸಲಾಗುತ್ತಿದೆ. ಆದರೆ, ಮಾಹಿತಿ ಕೊರತೆ ಹಾಗೂ ಕೋವಿಡ್‌ ಕಾರಣಶಸ್ತ್ರಚಿಕಿತ್ಸೆ ಬರುವವರ ಸಂಖ್ಯೆ ಸದ್ಯ ಬೆರಳಣಿಕೆಯಷ್ಟಿದೆ. ಒಂದು ವಾರದಲ್ಲಿ ಇಬ್ಬರಿಗೆ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ. ಹೊರ ರೋಗಿಗಳ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದ್ದು, ದಿನವೊಂದಕ್ಕೆ ಭೇಟಿ ನೀಡಿದವರ ಸಂಖ್ಯೆ 300ಕ್ಕೆ ಏರಿಕೆಯಾಗಿದೆ. ಈ ಹಿಂದೆ ಪ್ರತಿನಿತ್ಯ ಸರಾಸರಿ 600ರಿಂದ 800 ಹೊರ ರೋಗಿಗಳು ಆಸ್ಪತ್ರೆಗೆ ಬರುತ್ತಿದ್ದರು.

‘ರೋಗಿಗೆ ಕೋವಿಡ್‌ ಪರೀಕ್ಷೆ ನಡೆಸಿ, ವರದಿ ಬಂದ 24 ಗಂಟೆಗಳಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಬಳಿಕ 24 ಗಂಟೆ ಅವರ ಸ್ಥಿತಿ ಗಮನಿಸಿ, ಮನೆಗೆ ಕಳುಹಿಸಲಾಗುತ್ತದೆ. ರೋಗಿಗಳು ಗ್ರಾಮೀಣ ಭಾಗದಿಂದ ಬರುತ್ತಾರೆ ಎಂಬ ಕಾರಣಕ್ಕೆ ಈ ಹಿಂದೆ ಹೆಚ್ಚಿನ ಸಮಯ ಇರಿಸಿಕೊಳ್ಳಲಾಗುತ್ತಿತ್ತು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚಿನ ಅವಧಿ ಆಸ್ಪತ್ರೆಯಲ್ಲಿ ಇರಿಸಿಕೊಳ್ಳುವುದು ಕಷ್ಟ. ಹಾಗಾಗಿ ಮನೆಗೆ ಕಳುಸಿದ ಬಳಿಕ ಅವರ ಆರೋಗ್ಯದ ಸ್ಥಿತಿಗತಿಯ ಬಗ್ಗೆ ನಿಗಾ ಇರಿಸಲಾಗುವುದು’ ಎಂದು ಆಸ್ಪತ್ರೆಯ ನಿರ್ದೇಶಕಿ ಡಾ. ಸುಜಾತಾ ರಾಥೋಡ್ ತಿಳಿಸಿದರು.

‘ಎಚ್‌ಐವಿ ಕಾಣಿಸಿಕೊಂಡಾಗ ಮೊದಲು ಇದೇ ಸ್ಥಿತಿಯಿತ್ತು. ಆದರೆ, ಕೋವಿಡ್‌ ತರ ಹರಡುತ್ತಿರಲಿಲ್ಲ. ಆದ್ದರಿಂದ ಈಗ ಸಾಕಷ್ಟು ಮುಂಜಾಗರೂಕತಾ ಕ್ರಮಗಳೊಂದಿಗೆ ಸೇವೆ ನೀಡಲಾಗುತ್ತಿದೆ’ ಎಂದರು.

ದಿನಕ್ಕೆ 10ರಿಂದ 20 ಶಸ್ತ್ರಚಿಕಿತ್ಸೆ

‘ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯನ್ನು ಎರಡರಿಂದ ಮೂರು ದಿನಗಳಲ್ಲಿ ಪ್ರಾರಂಭ ಮಾಡಲಾಗುತ್ತದೆ. ಶಸ್ತ್ರಚಿಕಿತ್ಸೆ ನಡೆಸಲು ಸಾಕಷ್ಟು ತಯಾರಿ ನಡೆಸಬೇಕಾಗಿದೆ. ಆಸ್ಪತ್ರೆಯಲ್ಲಿ 8 ಶಸ್ತ್ರಚಿಕಿತ್ಸೆ ಘಟಕಗಳಿವೆ. ಒಂದು ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ ಮೊದಲಿನಂತೆ ಶಸ್ತ್ರಚಿಕಿತ್ಸೆ ನಡೆಸಲು ಸಾಧ್ಯವಿಲ್ಲ. ಕೊಠಡಿಯನ್ನು ಸಂಪೂರ್ಣವಾಗಿ ಸ್ವಚ್ಛಪಡಿಸಿಕೊಳ್ಳಬೇಕಾಗುತ್ತದೆ. ಕನಿಷ್ಠ 20 ನಿಮಿಷ ಬಿಡುವು ಬೇಕಾಗುತ್ತದೆ. ಹಾಗಾಗಿ ಮೊದಲಿನಂತೆ ದಿನಕ್ಕೆ ಸರಾಸರಿ 50 ಶಸ್ತ್ರಚಿಕಿತ್ಸೆ ನಡೆಸಲು ಸಾಧ್ಯವಿಲ್ಲ. 10ರಿಂದ 20 ಶಸ್ತ್ರಚಿಕಿತ್ಸೆಗಳನ್ನು ನಡೆಸಬಹುದಾಗಿದೆ’ ಎಂದು ಡಾ. ಸುಜಾತಾ ರಾಥೋಡ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT