ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಂಟೊ ಕಣ್ಣಿನ ಆಸ್ಪತ್ರೆ: ಅ.1ರಿಂದ ಪೂರ್ಣ ಪ್ರಮಾಣದಲ್ಲಿ ಪ್ರಾರಂಭ

ದಿನವೊಂದಕ್ಕೆ 10ರಿಂದ 20 ಮಂದಿಗೆ ಶಸ್ತ್ರಚಿಕಿತ್ಸೆ ನಡೆಸುವ ಸಾಧ್ಯತೆ
Last Updated 26 ಸೆಪ್ಟೆಂಬರ್ 2020, 22:43 IST
ಅಕ್ಷರ ಗಾತ್ರ

ಬೆಂಗಳೂರು: ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ ಅ.1ರಿಂದ ಪೂರ್ಣ ಪ್ರಮಾಣದಲ್ಲಿ ಶಸ್ತ್ರಚಿಕಿತ್ಸೆಗಳನ್ನು ಪುನರಾರಂಭಿಸಲಾಗುತ್ತದೆ. ಕೋವಿಡ್‌ ಕಾರಣದಿಂದಾಗಿ ಕೆಲ ದಿನಗಳಿಂದ ಇಲ್ಲಿ ತುರ್ತು ಶಸ್ತ್ರಚಿಕಿತ್ಸೆಗಳನ್ನು ಮಾತ್ರ ನಡೆಸಲಾಗುತ್ತಿದೆ.

ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಲು ಪ್ರಾರಂಭವಾದ ಬಳಿಕ ವಿಕ್ಟೋರಿಯಾ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿತ್ತು. 300 ಹಾಸಿಗೆಗಳ ಸಾಮರ್ಥ್ಯದ ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲೂ 100 ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿಟ್ಟು, ಕಣ್ಣಿನ ಚಿಕಿತ್ಸೆಗಳನ್ನು ಸಂಪೂರ್ಣ ಸ್ಥಗಿತ ಮಾಡಲಾಗಿತ್ತು. ಕಣ್ಣಿನ ಸಮಸ್ಯೆ ಎದುರಿಸುತ್ತಿರುವವರ ಸಂಖ್ಯೆ ಹೆಚ್ಚಳವಾದ ಪರಿಣಾಮ ಕೆಲ ದಿನಗಳ ಹಿಂದೆ ಹೊರ ರೋಗಿಗಳ ವಿಭಾಗವನ್ನು ಪ್ರಾರಂಭಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ತುರ್ತಾಗಿ ಅಗತ್ಯ ಇರುವವರಿಗೆ ಮಾತ್ರ ಶಸ್ತ್ರಚಿಕಿತ್ಸೆಗಳನ್ನೂ ನಡೆಸಲಾಗುತ್ತಿದೆ. ತುರ್ತು ಅಗತ್ಯ ಇಲ್ಲದಿದ್ದರೆ ಕಣ್ಣಿನ ಪೊರೆ ಸೇರಿದಂತೆ ವಿವಿಧ ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ಮುಂದೂಡಲಾಗುತ್ತಿದೆ.

ಶಸ್ತ್ರಚಿಕಿತ್ಸೆ ಪುನರಾರಂಭದ ಬಗ್ಗೆ ಆಸ್ಪತ್ರೆಯ ಅಧೀಕ್ಷಕರು, ಸ್ಥಾನೀಯ ವೈದ್ಯಾಧಿಕಾರಿಗಳು, ಘಟಕದ ಮುಖ್ಯಸ್ಥರ ಜೊತೆ ಚರ್ಚಿಸಿ ಅನುಮತಿ ನೀಡುವಂತೆ ಕೋರಿ ಆಸ್ಪತ್ರೆಯ ನಿರ್ದೇಶಕಿ ಡಾ. ಸುಜಾತಾ ರಾಥೋಡ್‌ ಅವರು ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಆ. 26ರಂದು ಪತ್ರ ಬರೆದಿದ್ದರು. ಕೋವಿಡ್‌ ಪ್ರಾರಂಭಕ್ಕೂ ಮೊದಲು ಇಲ್ಲಿ ಪ್ರತಿ ನಿತ್ಯ 70ರಿಂದ 80 ಮಂದಿಗೆ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿತ್ತು. 600ರಿಂದ 800 ಹೊರರೋಗಿಗಳು ಆಸ್ಪತ್ರೆಗೆ ಬರುತ್ತಿದ್ದರು.

ಸಮಸ್ಯೆ ಹೆಚ್ಚಳ: ‘ಕಣ್ಣಿನ ಸಮಸ್ಯೆ ಎದುರಿಸುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಇನ್ನಷ್ಟು ದಿನ ಶಸ್ತ್ರಚಿಕಿತ್ಸೆ ಮುಂದೂಡಿದಲ್ಲಿ ಕೆಲವರಿಗೆ ಅಪಾಯವಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಎಲ್ಲ ರೀತಿಯ ಚಿಕಿತ್ಸೆಗಳನ್ನು ಅ.1ರಿಂದ ಪುನರಾರಂಭಿಸಲು ನಿರ್ಧರಿಸಿದ್ದೇವೆ. ದಿನವೊಂದಕ್ಕೆ 10ರಿಂದ 20 ಮಂದಿಗೆ ಶಸ್ತ್ರಚಿಕಿತ್ಸೆ ನಡೆಸಬಹುದು. ರೋಗಿಗಳ ಸಂಖ್ಯೆಯನ್ನು ಆಧರಿಸಿ ಈ ಸಂಖ್ಯೆಯನ್ನೂ ನಿರ್ಧರಿಸುತ್ತೇವೆ. ಈ ಸಂದರ್ಭದಲ್ಲಿ ಒಂದೇ ಬಾರಿ ಅಧಿಕ ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ’ ಎಂದು ಡಾ. ಸುಜಾತಾ ರಾಥೋಡ್ ಅವರು ತಿಳಿಸಿದರು.

‘ಕೋವಿಡ್‌ ಬಗ್ಗೆ ಜನರಿಗೆ ಇನ್ನೂ ಭಯ ಹೋಗಿಲ್ಲ. ಹೀಗಾಗಿ ಚಿಕಿತ್ಸೆಗೆ ಆಸ್ಪತ್ರೆಗೆ ಬರಲು ಕೆಲವರು ಹಿಂದೇಟು ಹಾಕುತ್ತಿದ್ದಾರೆ. ಸದ್ಯ ದಿನವೊಂದಕ್ಕೆ 200ರವರೆಗೂ ಹೊರ ರೋಗಿಗಳು ಬರುತ್ತಿದ್ದಾರೆ. ಕೋವಿಡ್‌ ಚಿಕಿತ್ಸೆಗೆ ಮೀಸಲಿಟ್ಟಿದ್ದ 100 ಹಾಸಿಗೆಗಳನ್ನು ಸಿಬ್ಬಂದಿ ಕ್ವಾರಂಟೈನ್‌ಗೆ ಬಳಸಿಕೊಳ್ಳಲಾಗುತ್ತಿದೆ‌’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT