ಕಾಂಗ್ರೆಸ್‌ ಪ್ರತಿಭಟನೆಗೆ ನಲಪಾಡ್‌ ನೇತೃತ್ವ

7

ಕಾಂಗ್ರೆಸ್‌ ಪ್ರತಿಭಟನೆಗೆ ನಲಪಾಡ್‌ ನೇತೃತ್ವ

Published:
Updated:

ಬೆಂಗಳೂರು: ಉದ್ಯಮಿಯ ಪುತ್ರನ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನಿಂದ ಆರು ವರ್ಷಗಳವರೆಗೆ ಉಚ್ಚಾಟನೆಗೊಂಡಿರುವ ಶಾಸಕ ಹ್ಯಾರಿಸ್‌ ಪುತ್ರ ಮಹಮ್ಮದ್ ನಲಪಾಡ್ ಬುಧವಾರ ಯುವ ಕಾಂಗ್ರೆಸ್‌ ಕಾರ್ಯಕರ್ತರು ಐ.ಟಿ ಕಚೇರಿ ಮುಂಭಾಗದಲ್ಲಿ ನಡೆಸಿದ ಪ್ರತಿಭಟನೆಯ ನೇತೃತ್ವ ವಹಿಸಿಕೊಂಡು ಮತ್ತೆ ಸುದ್ದಿಯಾಗಿದ್ದಾರೆ.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಲ್ಲದೆ, ಬ್ಯಾರಿಕೇಡ್‌ಗಳನ್ನು ಏರಿ ನಲಪಾಡ್‌ ಆಕ್ರೋಶ ವ್ಯಕ್ತಪಡಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಸಚಿವ ಡಿ.ಕೆ.ಶಿವಕುಮಾರ್‌ ಅವರ ಮನೆಯ ಮೇಲೆ ಕೇಂದ್ರ ಸರ್ಕಾರವು ಉದ್ದೇಶಪೂರ್ವಕವಾಗಿಯೇ ಪದೇ ಪದೇ ಆದಾಯ ತೆರಿಗೆ (ಐಟಿ) ದಾಳಿ ನಡೆಸುತ್ತಿದೆ ಎಂದು ದೂರಿ ಯುವ ಕಾಂಗ್ರೆಸ್ ಕಾರ್ಯಕರ್ತರು ಈ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು.

‘ಜನಸಾಮಾನ್ಯರಿಗೆ ತೊಂದರೆ ಕೊಡುವಂತಹ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಈಗಾಗಲೇ ಜನ ಆ ಪಕ್ಷದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ಲೋಕಸಭೆ ಚುನಾವಣೆಯನ್ನು ಮುಂದಿಟ್ಟುಕೊಂಡು, ಕಾಂಗ್ರೆಸ್ ಮುಖಂಡರ ಮನೆಗಳಿಗೆ ಐಟಿ ದಾಳಿ ನಡೆಸುತ್ತಿದೆ’ ಎಂದು ನಲಪಾಡ್‌ ಆರೋಪಿಸಿದರು.

‘ಯುದ್ಧ ವಿಮಾನ ಖರೀದಿಯಲ್ಲೂ ಕೇಂದ್ರ ಸರ್ಕಾರ ಭ್ರಷ್ಟಾಚಾರ ನಡೆಸಿದ್ದು, ಅದರ ವಿರುದ್ಧ ಕಾಂಗ್ರೆಸ್ ಮುಖಂಡರು ಪ್ರಶ್ನಿಸಿದರೆ ಪ್ರಧಾನಿಯವರು ಉತ್ತರಿಸುತ್ತಿಲ್ಲ’ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಕಾರ್ಯಕರ್ತರು ಕಬ್ಬನ್‌ ಪಾರ್ಕ್‌ ಬಳಿಯ ಮಿನ್ಸ್ಕ್‌ ವೃತ್ತದಲ್ಲಿ ಮೊದಲು ಪ್ರತಿಭಟನೆ ನಡೆಸುತ್ತಿದ್ದರು. ಏಕಾಏಕಿ ಪ್ರತಿಭಟನಾ ಮೆರವಣಿಗೆ ಮೂಲಕ ಆದಾಯ ತೆರಿಗೆ ಕಚೇರಿ ಎದುರು ಜಮಾಯಿಸಿದರು. ಈ ವೇಳೆ ಕಚೇರಿ ಮುಂಭಾಗ ಅಳವಡಿಸಿದ್ದ ಬ್ಯಾರಿಕೇಡ್‌ಗಳ ಮೇಲೇರಿ ಮುತ್ತಿಗೆ ಹಾಕಲು ಯತ್ನಿಸಿದಾಗ ನಲಪಾಡ್‌ ಸೇರಿದಂತೆ 50ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.

ನಂತರ ಅವರನ್ನು ಅಶೋಕ ನಗರ ಪೊಲೀಸ್ ಠಾಣೆಗೆ ಕರೆದೊಯ್ದು, ಅವರ ಬಳಿ ಸಹಿ ಮಾಡಿಸಿಕೊಂಡು ಬಿಡುಗಡೆಗೊಳಿಸಿದರು.

ಪ್ರಕರಣ ದಾಖಲಾಗಿತ್ತು: ಉದ್ಯಮಿಯ ಪುತ್ರನ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಲಪಾಡ್‌ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಕುರಿತು ಕ್ರಮ ಕೈಗೊಳ್ಳುವಂತೆ ಸಿದ್ದರಾಮಯ್ಯ ಸೂಚಿಸಿದ್ದರು. ಅದರಂತೆ ಆಗ ಕೆಪಿಸಿಸಿ ಅಧ್ಯಕ್ಷರಾಗಿದ್ದ ಜಿ.ಪರಮೇಶ್ವರ ಅವರು ನಲಪಾಡ್‌ ಅವರನ್ನು ಕಾಂಗ್ರೆಸ್‌ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿ ಆದೇಶ ಹೊರಡಿಸಿದ್ದರು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 1

  Frustrated
 • 6

  Angry

Comments:

0 comments

Write the first review for this !